BBMP Budget 2025 | 20 ಸಾವಿರ ಕೋಟಿ ರೂ. ಬಜೆಟ್ ಮಂಡನೆ; ಸತತ ಐದನೇ ಬಾರಿ ಅಧಿಕಾರಿಗಳೇ ಮಂಡಿಸಿದ ಬಿಬಿಎಂಪಿ ಆಯವ್ಯಯ
ಬ್ರ್ಯಾಂಡ್ ಬೆಂಗಳೂರಿಗೆ ಪೂರಕವಾಗಿ ಹಲವು ಬೃಹತ್ ಯೋಜನೆಗಳನ್ನು ಪ್ರಸ್ತಾಪಿಸಿದ್ದು, ಆಧುನಿಕ ನಗರವನ್ನಾಗಿ ಬದಲಾಯಿಸುವ ಕುರಿತು ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಲಾಗಿದೆ;
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 20 ಸಾವಿರ ಕೋಟಿ ರೂ. ಗಾತ್ರದ ಬೃಹತ್ ಬಜೆಟ್ ಮಂಡನೆಗೆ ನಗರದ ಪುಟ್ಟಣ್ಣಚೆಟ್ಟಿ ಪುರಭವನ ಸಾಕ್ಷಿಯಾಯಿತು.
ಜನಪ್ರತಿನಿಧಿಗಳಿಲ್ಲದೇ ಸತತ ಐದನೇ ಬಾರಿಗೆ ಬಜೆಟ್ ಮಂಡಿಸಿದ ಅಧಿಕಾರಿಗಳು ಮೂಲ ಸೌಕರ್ಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಒಟ್ಟು 19,927 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಲಾಗಿದೆ.
ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಅವರು ಬಜೆಟ್‌ಗೆ ಅನುಮೋದನೆ ನೀಡಿದರು. ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಮ್ಮುಖದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ಅವರು ಬಜೆಟ್ ಮಂಡನೆ ಮಾಡಿದರು. ಈ ಹಿಂದೆ ಬಿಬಿಎಂಪಿಯಲ್ಲಿ 12 ರಿಂದ 13 ಸಾವಿರ ಕೋಟಿವರೆಗಿನ ಬಜೆಟ್ ಮಾತ್ರ ಮಂಡನೆಯಾಗಿತ್ತು. ಆದರೆ, ಈ ಬಾರಿ 20ಸಾವಿರ ಕೋಟಿ ಆಸುಪಾಸಿನ ಬಜೆಟ್ ಮಂಡಿಸಿದ್ದು, ಶೇ 62 ರಷ್ಟು ಹಣವನ್ನು ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಮೀಸಲಿಡಲಾಗಿದೆ.
ಬ್ರ್ಯಾಂಡ್ ಬೆಂಗಳೂರಿಗೆ ಒತ್ತು
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ʼಬ್ರ್ಯಾಂಡ್ ಬೆಂಗಳೂರುʼ ಯೋಜನೆಗೆ ಬಜೆಟ್‌ನಲ್ಲಿ 12,952 ಕೋಟಿ ರೂ.ಮೀಸಲಿರಿಸಲಾಗಿದೆ.
“ಕಟ್ಟುವೆವು ನಾವು ಹೊಸ ನಾಡೊಂದನ್ನು” ಎಂಬ ಗೋಪಾಲಕೃಷ್ಣ ಅಡಿಗರ ಕವಿವಾಣಿ ಪ್ರಸ್ತಾಪಿಸಿದ ಹರೀಶ್‌ಕುಮಾರ್ ಅವರು, ಬ್ರ್ಯಾಂಡ್ ಬೆಂಗಳೂರು ದೃಷ್ಟಿಕೋನಕ್ಕೆ ಅನುಗುಣವಾಗಿ ನಗರವನ್ನು ಆಧುನಿಕ ನಗರವನ್ನಾಗಿ ಬದಲಾಯಿಸುವ ಘೋಷಣೆ ಮಾಡಿದರು.
ಸುಗಮ ಸಂಚಾರ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಟೆಕ್ ಬೆಂಗಳೂರು, ಶಿಕ್ಷಣ ಬೆಂಗಳೂರು, ಆರೋಗ್ಯಕರ ಬೆಂಗಳೂರು, ರೋಮಾಂಚಕ ಬೆಂಗಳೂರು ಹಾಗೂ ನೀರಿನ ಭದ್ರತೆ ಬೆಂಗಳೂರು ಎಂಬ 8 ವಿಭಾಗಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ 1,790 ಕೋಟಿ ರೂ. ಅನುದಾನವನ್ನು ನಗರದ ಅಭಿವೃದ್ದಿಗೆ ಸದ್ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ 5,716 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ತೆರಿಗೆ ಪಾವತಿಗೆ ಒಟಿಎಸ್ ಪದ್ಧತಿ ಜಾರಿಗೆ ತಂದ ಬಳಿಕ ಮೂರು ಲಕ್ಷಕ್ಕೂ ಹೆಚ್ಚು ಆಸ್ತಿಗಳಿಂದ 1,277 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ವಿವರಿಸಿದರು.
ಎಸ್ ಸಿ/ಎಸ್ಟಿ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ತೃತೀಯ ಲಿಂಗಿ ಸಮುದಾಯಕ್ಕೆ ಎಲೆಕ್ಟ್ರಾನಿಕ್ ವಾಹನ ಖರೀದಿಗೆ ಪಾಲಿಕೆ ಧನಸಹಾಯ ನೀಡಲಿದ್ದು, ಇದಕ್ಕಾಗಿ ಬಜೆಟ್‌ನಲ್ಲಿ 10 ಕೋಟಿ ರೂ. ತೆಗೆದಿರಿಸಲಾಗಿದೆ.
ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕೆ 10 ಕೋಟಿ, ಎಲಿವೇಟೆಡ್ ಕಾರಿಡಾರ್ ಹಾಗೂ ಗ್ರೇಡ್ ಸಪರೇಟರ್ ನಿರ್ಮಾಣಕ್ಕೆ13,200 ಕೋಟಿ ಹಾಗೂ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ 9 ಸಾವಿರ ಕೋಟಿ, ಸುರಂಗ ಮಾರ್ಗ ನಿರ್ಮಾಣಕ್ಕೆ 40ಸಾವಿರ ಕೋಟಿ, ರಾಜಕಾಲುವೆ ಹಾಗೂ ಸಂಪರ್ಕ ರಸ್ತೆಗೆ 3 ಸಾವಿರ ಕೋಟಿ, ರಸ್ತೆ ವೈಟ್ ಟಾಪಿಂಗ್ ಕಾಮಗಾರಿಗೆ 6 ಸಾವಿರ ಕೋಟಿ, ಸ್ಕೈಡೆಕ್ ನಿರ್ಮಾಣಕ್ಕೆ 400 ಕೋಟಿ ಹಾಗೂ ಬೀದಿ ನಾಯಿಗಳ ಆರೈಕೆ ಹಾಗೂ ಚಿಕಿತ್ಸೆಗೆ 60 ಕೋಟಿ ಮೀಸಲಿಡಲಾಗಿದೆ.
ʼಸೇವ್ ಮಾಮ್ʼ ಯೋಜನೆ ಜಾರಿ
ತಾಯಿ, ಮಗು ಆರೈಕೆ ಹಾಗೂ ರಕ್ಷಣೆಗಾಗಿ ಬಿಬಿಎಂಪಿ ವತಿಯಿಂದ ʼಸೇವ್ ಮಾಮ್ʼ ಯೋಜನೆ ಜಾರಿಗೊಳಿಸಲಾಗಿದೆ.
ಪ್ರಾಯೋಗಿಕವಾಗಿ ಎರಡು ಆಸ್ಪತ್ರೆಯಲ್ಲಿ 200 ತಾಯಂದಿರ ಆರೈಕೆ, 24x7 ಗರ್ಭಿಣಿ ಆರೈಕೆಗೆ ನಗರದ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ತಾಯಂದಿರ ಹಾಗೂ ಶಿಶುಗಳ ಮರಣ ಪ್ರಮಾಣ ತಗ್ಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
16 ಶಾಲೆಗಳಿಗೆ ಹೊಸ ಕಟ್ಟಡ
ಬೆಂಗಳೂರು ನಗರದ ಶಿಥಿಲಾವಸ್ಥೆಯಲ್ಲಿರುವ ಆಯ್ದ 16 ಶಾಲೆಗಳಿಗೆ ಹೊಸ ಕಟ್ಟಡಗಳನ್ನು ನಿರ್ಮಿಸುವುದು, 60 ಶಾಲೆಗಳ ಕೊಠಡಿಗಳನ್ನು ಸ್ಮಾರ್ಟ್ ಕ್ಲಾಸ್ ರೂಂ ಗಳಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ.
ಮಳೆ ಅವಾಂತರ ತಡೆಗೆ ರಾಜಕಾಲುವೆ, ಕೆರೆ ಬದಿಯ ಪ್ರದೇಶದಲ್ಲಿ ನೆರೆ ತಡೆ ಕಾಮಗಾರಿಗೆ 247 ಕೋಟಿ ಮೀಸಲಿಡಲಾಗಿದೆ. ಬೆಂಗಳೂರಿನ ಸೌಂದರ್ಯೀಕರಣಕ್ಕೆ ಅಲಂಕಾರಿಕ ದೀಪಗಳ ಅಳವಡಿಕೆಗೆ 50 ಕೋಟಿ, ಜಂಕ್ಷನ್ ಸುಧಾರಣೆಗೆ 25 ಕೋಟಿ, ಸ್ಕೈಡೆಕ್ ನಿರ್ಮಾಣಕ್ಕೆ ಆರಂಭಿಕವಾಗಿ 50 ಕೋಟಿ, ಸಾರ್ವಜನಿಕ ಸ್ಥಳಗಳ ಸೌಂದರ್ಯೀಕರಣಕ್ಕೆ 25 ಕೋಟಿ ಮೀಸಲಿಡಲಾಗಿದೆ.
ಕೃತಕಬುದ್ಧಿಮತ್ತೆ(ಎಐ) ಬಳಕೆ
ಬಿಬಿಎಂಪಿಯಲ್ಲಿ ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ(ಎಐ) ಬಳಸಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪತ್ತೆ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಆಸ್ತಿ ತೆರಿಗೆ ಜಾಲದಿಂದ ತಪ್ಪಿಸಿಕೊಂಡಿರುವ ಲಕ್ಷಾಂತರ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದು ವಾರ್ಷಿಕ ಒಂದು ಸಾವಿರ ಕೋಟಿ ರೂ. ಆದಾಯ ಕ್ರೋಡೀಕರಣಕ್ಕೆ ಬಿಬಿಎಂಪಿ ನಿರ್ಧರಿಸಿದೆ.
ಡಿಜಿಟಲ್ ಇ-ಖಾತಾ ವ್ಯವಸ್ಥೆಯೂ ಜಾರಿಗೆ ತರಲಾಗಿದೆ. ನಾಗರಿಕರು ಆನ್‌ಲೈನ್ ಮೂಲಕ ಇ-ಖಾತಾ ಪಡೆಯಬಹುದು. ಇ-ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿರುವುದರಿಂದ ಸ್ವಯಂಚಾಲಿತ ಖಾತಾ ವರ್ಗಾವಣೆ ಆಗಲಿದೆ.
ಪ್ರತ್ಯೇಕ ಸರ್ವೇ ವಿಭಾಗ ಆರಂಭ
ನಗರದಲ್ಲಿ 20 ಲಕ್ಷ ಖಾಸಗಿ ಹಾಗೂ 6819 ಪಾಲಿಕೆ ಸ್ವತ್ತುಗಳ ದಾಖಲೆ ನಿರ್ವಹಣೆಗಾಗಿ ಪ್ರತ್ಯೇಕ ಸರ್ವೇ ವಿಭಾಗ ಸ್ಥಾಪಿಸಲು ಯೋಜಿಸಲಾಗಿದೆ. 7000ಕ್ಕೂ ಹೆಚ್ಚು ಸ್ವಂತ ಆಸ್ತಿಗಳ ಸಮೀಕ್ಷೆ ನಡೆಸಿ ಡಿಜಿಟಲೀಕರಣಗೊಳಿಸುವ ಮೂಲಕ ಪಾಲಿಕೆ ಆಸ್ತಿಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅವಧಿ ಮುಗಿದಿರುವ ಪಾಲಿಕೆ ಆಸ್ತಿಗಳ ಗುತ್ತಿಗೆ ನವೀಕರಣ ಮಾಡಿ ಮಾರ್ಗಸೂಚಿ ಬಾಡಿಗೆ ಆಧಾರದ ಮೇಲೆ ಮರುಗುತ್ತಿಗೆ ನೀಡುವ ಮೂಲಕ 210 ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ.
26 ಬಿಎಲ್ಎಸ್ ಅಂಬುಲೆನ್ಸ್ ಸೇವೆ
ಬ್ರ್ಯಾಂಡ್ ಬೆಂಗಳೂರು, ಆರೋಗ್ಯಕರ ಬೆಂಗಳೂರು ಎಲ್ಲರಿಗೂ ಆರೋಗ್ಯ ಅಭಿಯಾನದಡಿ ಬಿಬಿಎಂಪಿ ಆರೋಗ್ಯ ಸೇವೆಗೆ ವಿಶೇಷ ಒತ್ತು ನೀಡಿದೆ. ಹೃದಯಸ್ತಂಭನದಂತಹ ತುರ್ತು ಸಂದರ್ಭಗಳಲ್ಲಿ ರೋಗಿಗಳ ಆರೈಕೆಗಾಗಿ 26 ಬಿಎಲ್ಎಸ್ ಅಂಬುಲೆನ್ಸ್ ಸೇವೆ ಒದಗಿಸಲು ತೀರ್ಮಾನಿಸಿದೆ.
ಜಲಸಂರಕ್ಷಣೆಗೂ ಪ್ರಾಶಸ್ತ್ಯ
ನಗರದ ಕೆರೆಗಳ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ 210 ಕೋಟಿ ರೂ. ಮೀಸಲಿಡಲಾಗಿದೆ. ನೀರಿನ ಕೊರತೆ ನೀಗಿಸಲು ಪಾಲಿಕೆ ಕಟ್ಟಡಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.
2000 ಕೋಟಿ ರೂ.ಗಳ ಅನುದಾನದಲ್ಲಿ ನಗರದ 860 ಕಿ.ಮೀ ಉದ್ದದ ರಾಜಕಾಲುವೆಗಳಿಗೆ 174 ಕಿ.ಮೀ ಉದ್ದದ ತಡೆಗೋಡೆ ನಿರ್ಮಿಸಲಾಗುತ್ತಿದೆ. ಪ್ರವಾಹಪೀಡಿತ ಪ್ರದೇಶಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು 247.25 ಕೋಟಿ ರೂ. ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.