ಕೊಲೆ ಆರೋಪಿ ದರ್ಶನ್‌ಗೆ ರಾಜಾತಿಥ್ಯ: ಹಿರಿಯ ಜೈಲು ಅಧಿಕಾರಿಗಳ ವಿರುದ್ಧವೂ ಕ್ರಮ: ಸಿಎಂ ಸೂಚನೆ

Update: 2024-08-26 08:52 GMT

ಪರಪ್ಪನ‌ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಮತ್ತಿತರರಿಗೆ ರಾಜಾತಿಥ್ಯ ಒದಗಿಸುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ʻʻಈ ಪ್ರಕರಣದಲ್ಲಿ ಈಗಾಗಲೇ ಏಳು ಜನರನ್ನು ಅಮಾನತು ಮಾಡಲಾಗಿದೆ, ಹಿರಿಯ ಅಧಿಕಾರಿಗಳೂ ಸೇರಿದಂತೆ ಅದಕ್ಕೆ ಕಾರಣವಾದ ಇನ್ನೂ ಕೆಲವರನ್ನು ಅಮಾನತು ಮಾಡಬೇಕಿದೆʼʼ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ʻʻನಮ್ಮ ಗೃಹ ಸಚಿವರಿಗೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಲು ಹೇಳಿದ್ದೇನೆ. ಯಾರೆಲ್ಲ ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆʼʼ ಎಂದರು.

ʻʻಅಧಿಕಾರಿಗಳ ಕರ್ತವ್ಯ ಲೋಪದಿಂದ ನಡೆದಿದೆ. ಅಧಿಕಾರಿಗಳ ಮಟ್ಟದಲ್ಲಿ ನಡೆದಿರಬಹುದಾದ ಕೆಲಸ ಎಂದು ಅನಿಸುತ್ತದೆ, ಬಹುಶಃ ದುಡ್ಡು ಪಡೆದು ಈ ರೀತಿ ಮಾಡಿದ್ದಾರೋ ಏನೋ ಗೊತ್ತಿಲ್ಲ. ಈ ಬಗ್ಗೆ ತನಿಖೆ ಮಾಡಿಸುತ್ತೇವೆ. ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರೇ ಅವರನ್ನೂ ಅಮಾನತು ಮಾಡುತ್ತೇವೆʼʼ ಎಂದು ಹೇಳಿದರು.

ಆರೋಪಿ ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ʻʻ ಬೇರೆ ಕಡೆಗೆ ಸ್ಥಳಾಂತರಿಸುವುದೋ ಬೇಡವೋ ಎನ್ನುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆʼʼ ಎಂದು ಉತ್ತರಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್‌ ಮತ್ತು ಇತರ ಆರೋಪಿಗಳು ಸಿಗರೇಟು ಸೇದುತ್ತಾ ಮೋಜು ಮಸ್ತಿ ಮಾಡುತ್ತಿರುವ ವಿಡಿಯೋ ಮತ್ತು ಚಿತ್ರಗಳು ಭಾನುವಾರ ವೈರಲ್‌ ಆಗಿದ್ದವು. ಒಂದು ಹೇಯ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ವ್ಯಕ್ತಿ ಮತ್ತು ಆತನ ಸಹಚರರಿಗೆ ಜೈಲಿನ ಒಳಗೆ ಸಿಗರೇಟು, ಹೊರಾಂಗಣದಲ್ಲಿ ಕೂತು ಪಟ್ಟಾಂಗ ಹೊಡೆಯುವ ಅವಕಾಶ ನೀಡಿದ ಪರಪ್ಪನ ಅಗ್ರಹಾರ ಜೈಲಿನ ವ್ಯವಸ್ಥೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ಪ್ರಾರಂಭವಾಗಿತ್ತು.

ವ್ಯಾಪಕ ಟೀಕೆಗಳ ಹಿನ್ನೆಲೆಯಲ್ಲಿ, ಸೋಮವಾರ ಬೆಳಿಗ್ಗೆಯೇ ಘಟನೆಗೆ ಸಂಬಂಧಿಸಿದಂತೆ ಏಳು ಮಂದಿ ಜೈಲು ಸಿಬ್ಬಂದಿಯನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

Tags:    

Similar News