Road Accident: ರಾಯಚೂರಿನಲ್ಲಿ ಬೊಲೆರೊ ಪಿಕಪ್ ತಡೆಗೋಡೆಗೆ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವು
ಹಿಂದೂಪುರದಿಂದ ಯಾದಗಿರಿ ಜಿಲ್ಲೆಯ ಶಹಾಪುರದ ಸಂತೆಗೆ ತೆರಳುವ ವೇಳೆ ಮಾರ್ಗ ಮಧ್ಯ ಈ ದುರ್ಘಟನೆ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಗಬ್ಬೂರು ಪೊಲೀಸರು ಭೇಟಿ ನೀಡಿ, ಮೃತದೇಹಗಳನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.;
ತಡೆಗೋಡೆಗೆ ಡಿಕ್ಕಿ ಹೊಡೆದಿರುವ ಪಿಕಪ್ ವಾಹನ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ ಬಳಿ ಗುರುವಾರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ಬೊಲೆರೊ ಗೂಡ್ಸ್ ಪಿಕಪ್ ವಾಹನವು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರನ್ನು ನಾಗರಾಜ್ (28), ಸೋಮು (38), ನಾಗಭೂಷಣ್ (36), ಮತ್ತು ಮುರಳಿ (38) ಎಂದು ಗುರುತಿಸಲಾಗಿದೆ. ಇವರೆಲ್ಲರೂ ತೆಲಂಗಾಣದ ಹಿಂದೂಪುರ ಮೂಲದವರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಆನಂದ್ ಎಂಬಾತ ಗಾಯಗೊಂಡಿದ್ದು, ರಾಯಚೂರಿನ ರಿಮ್ಸ್ (Raichur Institute of Medical Sciences) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತರು ಹಿಂದೂಪುರದಿಂದ ಯಾದಗಿರಿ ಜಿಲ್ಲೆಯ ಶಹಾಪುರದ ಸಂತೆಗೆ ಕುರಿಗಳ ಖರೀದಿಗಾಗಿ ಬೊಲೆರೊ ಗೂಡ್ಸ್ ಪಿಕಪ್ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ದೇವದುರ್ಗ ತಾಲೂಕಿನ ಅಮರಾಪುರ ಬಳಿಯ ರಸ್ತೆಯಲ್ಲಿ ವಾಹನವು ವೇಗವಾಗಿ ಸಂಚರಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಹಳ್ಳದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರಿಂದ ರಕ್ಷಣೆ
ಘಟನೆಯ ಮಾಹಿತಿ ತಿಳಿದ ಕೂಡಲೇ ಗಬ್ಬೂರು ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹಗಳನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳು ಆನಂದ್‌ಗೆ ತಕ್ಷಣದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯ ಕುರಿತು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ವಾಹನದ ವೇಗವೇ ಅಪಘಾತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ರಾಯಚೂರಿನಲ್ಲಿ ರಸ್ತೆ ಅಪಘಾತಗಳ ಏರಿಕೆ
ರಾಯಚೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಈ ವರ್ಷದ ಜನವರಿಯಲ್ಲಿ ಸಿಂಧನೂರ್ ತಾಲೂಕಿನಲ್ಲಿ ನಡೆದ ಘಟನೆಯಲ್ಲಿ ನಾಲ್ವರು ಮೃತಪಟ್ಟದ್ದರು. ಅದರಲ್ಲಿ ಮೂವರು ವಿದ್ಯಾರ್ಥಿಗಳು, ಮೃತಪಟ್ಟಿದ್ದರು. ಇದೇ ರೀತಿ, 2023ರ ಡಿಸೆಂಬರ್‌ನಲ್ಲಿ ಪಗಡದಿನ್ನಿ ಕ್ಯಾಂಪ್ ಬಳಿ ನಡೆದ ಅಪಘಾತದಲ್ಲಿ ನಾಲ್ವರು ಯುವಕರು ಸಾವನ್ನಪ್ಪಿದ್ದರು. ಈ ಘಟನೆಗಳು ರಾಯಚೂರು ಜಿಲ್ಲೆಯ ರಸ್ತೆ ಸುರಕ್ಷತೆಯ ಕೊರತೆಯನ್ನು ಎತ್ತಿ ತೋರಿಸಿವೆ.