Water Crisis| ಜಲಕ್ಷಾಮ ಎದುರಿಸಲು ಬೆಂಗಳೂರು ಮಾದರಿ; ನೀರಿನ ಮರುಬಳಕೆಯಿಂದ ಜಲ ಸ್ವಾವಲಂಬನೆ
ತ್ಯಾಜ್ಯ ನೀರಿನ ಮರುಬಳಕೆಯ ಅವರ ಪ್ರಯತ್ನಗಳು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶದಲ್ಲೂ ಚರ್ಚೆಗೆ ಒಳಗಾಗಿ ಗಮನ ಸೆಳೆದಿವೆ. ಬೆಂಗಳೂರಿನ ತ್ಯಾಜ್ಯ ನೀರು ಮರುಬಳಕೆಯ ಮಾದರಿಯನ್ನು ಅಳವಡಿಸಿಕೊಳ್ಳಲು ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ಮುಂದೆ ಬಂದಿವೆ.
ತನ್ನ ತಪ್ಪುಗಳಿಂದಲೇ ಕಳೆದ ವರ್ಷ ಜಲಕ್ಷಾಮ ಎದುರಿಸಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಜಲ ಸಂರಕ್ಷಣೆಯ ಪಾಠ ಕಲಿತಿದೆ. ಭವಿಷ್ಯದಲ್ಲಿ ನೀರಿನ ಬಿಕ್ಕಟ್ಟು ಉದ್ಭವಿಸದಂತೆ ಪ್ರಯೋಗಶೀಲತೆಗೆ ಒಡ್ಡಿಕೊಂಡಿರುವ ಬೆಂಳೂರಿನ ಜಲಮಂಡಳಿಯು ತ್ಯಾಜ್ಯ ನೀರಿನ ಮರುಬಳಕೆಯ ಮೂಲಕ ಜಲ ಸ್ವಾವಲಂಬನೆ ಸಾಧಿಸಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಇನ್ನಿಲ್ಲದಂತೆ ಬಾಧಿಸಿದ ಜಲಕ್ಷಾಮದಿಂದ ಸಾಕಷ್ಟು ಪಾಠ ಕಲಿತ ಜಲಮಂಡಳಿಯು ಟೀಕೆಗಳಿಗೆ ಕುಗ್ಗದೇ ಪರಿಹಾರ ಸೂತ್ರ ಕಂಡುಕೊಂಡಿದೆ. ಇದರ ಪರಿಣಾಮ ಮುಂದಿನ 25 ವರ್ಷಗಳವರೆಗೆ ಬೆಂಗಳೂರಿಗೆ ನೀರಿನ ಬರ ತಾಕದಂತೆ ನೋಡಿಕೊಂಡಿದೆ.
ಜಾಗತಿಕ ಉದಾಹರಣೆಯಾದ ಪ್ರಯೋಗ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ಅವರ ಪಟ್ಟುಬಿಡದ ಪರಿಶ್ರಮದಿಂದಾಗಿ ಬೆಂಗಳೂರು ನಗರದ ನೀರಿನ ಬಿಕ್ಕಟ್ಟು ಬಗೆಹರಿದಿದೆ. ತ್ಯಾಜ್ಯ ನೀರಿನ ಮರುಬಳಕೆಯ ಅವರ ಪ್ರಯತ್ನಗಳು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶದಲ್ಲೂ ಚರ್ಚೆಗೆ ಒಳಗಾಗಿ ಗಮನ ಸೆಳೆದಿವೆ. ಬೆಂಗಳೂರಿನ ತ್ಯಾಜ್ಯ ನೀರು ಮರುಬಳಕೆಯ ಮಾದರಿಯನ್ನು ಅಳವಡಿಸಿಕೊಳ್ಳಲು ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ಮುಂದೆ ಬಂದಿವೆ.
ಮರುಬಳಕೆಯ ನೀರು ನಗರವಾಸಿಗಳ ತಕ್ಷಣದ ನೀರಿನ ಬೇಡಿಕೆ ಪೂರೈಸಲಿದೆ. ಸಂಸ್ಕರಿಸಿದ ತ್ಯಾಜ್ಯ ನೀರಿನ ಮರುಪೂರಣವು ಒಣಗಿದ ಜಲಮೂಲಗಳಿಗೆ ಜೀವಕಳೆ ತಂದಿದೆ. ತ್ಯಾಜ್ಯ ನೀರಿನ ಮರುಪೂರಣದ ಪರಿಣಾಮ ಕೆರೆಗಳಲ್ಲಿ ಅಂತರ್ಜಲ ಏರಿಕೆಯಾಗಿದೆ. ಇದು ಬೆಂಗಳೂರಿನ ನಿವಾಸಿಗಳಿಗೆ ನೀರಿನ ಲಭ್ಯತೆ ಹೆಚ್ಚಿಸಿದೆ.
ರಾಮ್ ಪ್ರಸಾತ್ ಮನೋಹರ್ ಅವರು ಇತ್ತೀಚೆಗೆ ಚೆನ್ನೈನಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಆಯೋಜಿಸಿದ್ದ ನೀರಿನ ದಕ್ಷಿಣ ಶೃಂಗಸಭೆ( ಆಕ್ವಾ ಸೌತ್ ಸಮ್ಮಿತ್) ಯಲ್ಲಿ ಒಂದು ಲೋಟ ಸಂಸ್ಕರಿಸಿದ ನೀರು ಕುಡಿಯುವ ಮೂಲಕ ಮಾದರಿಯನ್ನು ವಿವರಿಸಿದರು.
ಕುಡಿಯಲು ಯೋಗ್ಯವಲ್ಲದ ಉದ್ದೇಶಕ್ಕೆ ನೀರು
ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್ಮೆಂಟ್ ಮತ್ತು ವಾಟರ್ (ಸಿಇಇಡಬ್ಲ್ಯು) ವರದಿಯ ಪ್ರಕಾರ, ಭಾರತದ ಪ್ರಮುಖ ನಗರಗಳಲ್ಲಿ ವ್ಯರ್ಥವಾಗಿ ಹರಿಯುವ ಶೇ 80ರಷ್ಟು ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡಬಹುದಾಗಿದೆ. ಆದರೆ ವಾಸ್ತವದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರಿನ ಮರುಬಳಕೆ ತೀರಾ ಕಡಿಮೆಯಾಗಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ತಲೆದೋರಿದ ಬೆಂಗಳೂರಿನ ಜಲಕ್ಷಾಮದ ಪರಿಣಾಮ ನೀರಿನ ಮರುಬಳಕೆಯ ಮಾದರಿ ಅನುಷ್ಠಾನಗೊಂಡಿತು. ಈ ಯೋಜನೆಯಡಿ ಇದುವರೆಗೆ ನೀರಾವರಿ, ಕೆರೆಗಳು ಮತ್ತು ಜೌಗು ಪ್ರದೇಶಗಳಲ್ಲಿ ಸಂಸ್ಕರಿತ ನೀರಿನ ಮರುಪೂರಣ ಮಾಡಲಾಗಿದೆ. ಶುದ್ಧೀಕರಣದ ನೀರನ್ನು ಕೈಗಾರಿಕೆಗಳು ಮತ್ತು ಐಟಿ ಪಾರ್ಕ್‌ಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ರಾಮ್ ಪ್ರಸಾತ್ ಮನೋಹರ್ ಹೇಳಿದರು.
BWSSB ಪ್ರಸ್ತುತ ಕೇಂದ್ರೀಕೃತ ಹವಾನಿಯಂತ್ರಣಗಳನ್ನು ಸ್ವಚ್ಛಗೊಳಿಸಲು ಮತ್ತು ತಂಪಾಗಿಸಲು ಐಟಿ ಸಂಸ್ಥೆಗಳಿಗೆ 65 MLD (ದಿನಕ್ಕೆ ಮಿಲಿಯನ್ ಲೀಟರ್) ಸಂಸ್ಕರಿಸಿದ ನೀರು ಪೂರೈಸುತ್ತಿದೆ ಎಂದು ಬೆಂಗಳೂರು ಜಲಮಂಡಳಿಯ ಅಧಿಕಾರಿಯೊಬ್ಬರು ದ ಫೆಡರಲ್‌ಗೆ ತಿಳಿಸಿದರು.
ನೀರಿನ ಗುಣಮಟ್ಟ ಆಗಾಗ್ಗೆ ಪರೀಕ್ಷಿಸಲಾಗುತ್ತದೆ. ಸಂಸ್ಕರಿಸಿದ ನೀರು ಪೂರೈಕೆಗೂ ಮುನ್ನ ಶೂನ್ಯ ಬ್ಯಾಕ್ಟೀರಿಯಾದ ನೀರಿನ ಗುಣಮಟ್ಟ ಖಾತರಿಪಡಿಸಲಾಗುತ್ತದೆ. ಇದಲ್ಲದೆ, ಬೆಂಗಳೂರಿನ 181 ಕೆರೆಗಳ ಪೈಕಿ ಈಗ 23 ಕೆರೆಗಳಿಗೆ ಮರುಬಳಕೆಯ ನೀರು ತುಂಬಿಸಲಾಗಿದೆ. ಶೀಘ್ರದಲ್ಲೇ ಇತರ 40 ಕೆರೆಗಳಿಗೆ ನೀರನ್ನು ಪೂರೈಸುವ ಉಪಕ್ರಮ ಪ್ರಗತಿಯಲ್ಲಿದೆ ಎಂದು ಹೇಳಿದರು.
ಮ್ಯಾಜಿಕ್ ಮಾತ್ರೆ
ಜಲ ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಡಬ್ಲ್ಯುಎಸ್ಎಸ್ಬಿಯ ಜವಾಬ್ದಾರಿ ವಹಿಸಿಕೊಂಡಾಗ, ಸಂಸ್ಕರಿಸಿದ ತ್ಯಾಜ್ಯ ನೀರು ಬೆಂಗಳೂರಿನ ಜಲಕ್ಞಾಮ ನಿಭಾಯಿಸಲು ಸಹಾಯ ಮಾಡಿತು. ಹಾಗಾಗಿ ಮರುಬಳಕೆಯ ನೀರು ಮ್ಯಾಜಿಕ್ ಮಾತ್ರೆಯಂತೆ ಕೆಲಸ ಮಾಡಿತು ಎಂದು ರಾಮ್ ಪ್ರಸಾತ್ ಮನೋಹರ್ ಅವರು ಹೇಳುತ್ತಾರೆ. ಸಂಸ್ಕರಿಸುವ ತ್ಯಾಜ್ಯ ನೀರಿನಿಂದ ಬೆಂಗಳೂರಿನ 101 ಕೆರೆಗಳನ್ನು ಮರುಬಳಕೆಯ ನೀರಿನಿಂದ ರೀಚಾರ್ಜ್ ಮಾಡಬಹುದು ಎಂದು ಅವರು ದ ಫೆಡರಲ್‌ಗೆ ತಿಳಿಸಿದರು.
ನಾವು ಭಾರತೀಯ ವಿಜ್ಞಾನ ಸಂಸ್ಥೆಯ (IISc) ಸಹಾಯದಿಂದ ಕಾರ್ಯಸಾಧ್ಯತೆ ಅಧ್ಯಯನ ಮಾಡಿದ್ದೆವು. ಸಂಸ್ಕರಿಸಿದ ನೀರಿನಿಂದ ಜಲಮೂಲಗಳನ್ನು ಹೇಗೆ ರೀಚಾರ್ಜ್ ಮಾಡಬಹುದು ಮತ್ತು ಅದರ ಪರಿಣಾಮವಾಗಿ ಹತ್ತಿರದ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟವು ಕಾಲಾನಂತರದಲ್ಲಿ ಹೇಗೆ ಸುಧಾರಿಸಲಿದೆ ಎಂಬುದನ್ನು ಕಂಡುಕೊಂಡೆವು ಎಂದರು.
ಪ್ರಸ್ತುತ ನಾವು 1450 MLD ನೀರನ್ನು ಮರುಬಳಕೆ ಮಾಡುತ್ತಿದ್ದೇವೆ. ಇದು ನಾವು ನಿವಾಸಿಗಳಿಗೆ ಸರಬರಾಜು ಮಾಡುವ ಕುಡಿಯುವ ನೀರಿನ ಶೇ 80 ಕ್ಕೆ ಸಮಾನವಾಗಿದೆ ಎಂದು ಹೇಳಿದರು.
ಸರ್ಕಾರಿ ಸ್ವಾಮ್ಯದ ಒಳಚರಂಡಿ ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ಹೊರತಾಗಿಯೂ ಅಪಾರ್ಟ್‌ಮೆಂಟ್ ಗಳಲ್ಲೂ ಸಂಸ್ಕರಣಾ ಘಟಕಗಳ ಸ್ಥಾಪಿಸಲು ಅಲ್ಲಿನ ನಿವಾಸಿಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.
ದಿನವೂ ಶೂನ್ಯದಂತಹ ಪರಿಸ್ಥಿತಿ
ಕಳೆದ ಬೇಸಿಗೆಯಲ್ಲಿ ಬೆಂಗಳೂರು ಎದುರಿಸಿದ ಭೀಕರ ನೀರಿನ ಬಿಕ್ಕಟ್ಟನ್ನು ಅನೇಕರು ಮರೆಯುವುದಿಲ್ಲ ಎಂದು ಮನೋಹರ್ ದ ಫೆಡರಲ್‌ಗೆ ತಿಳಿಸಿದರು. ನೀರಿನ ಬಿಕ್ಕಟ್ಟು ಸಂದರ್ಭದಲ್ಲಿ ನಾವು ಬಹುತೇಕ ದಿನಗಳನ್ನು ಶೂನ್ಯದಿಂದಲೇ ಎದುರಿಸುತ್ತಿದ್ದೆವು (ನಗರದ ನೀರು ಸರಬರಾಜು ಸಂಪೂರ್ಣ ಖಾಲಿಯಾದ ದಿನ). ಹೊಸ ಜಲ ಮೂಲಗಳನ್ನು ಸೃಷ್ಟಿಸುವುದು ನಮ್ಮ ಆಯ್ಕೆಯಾಗಿರಲಿಲ್ಲ. ಆದರೆ ನಾವು ಲಭ್ಯವಿರುವ ನೀರನ್ನು ಸಮರ್ಥವಾಗಿ ಬಳಸಿಕೊಂಡು ಕುಡಿಯಲು ಯೋಗ್ಯವಲ್ಲದ, ಬಳಕೆಗಳಿಗೆ ಸಾಕಷ್ಟು ಸಹಾಯ ಮಾಡುವ ಮೂಲಗಳತ್ತ ದೃಷ್ಟಿ ಹರಿಸಿದೆವು ಎಂದು ವಿವರಿಸಿದರು.
120 ಕ್ಕೂ ಹೆಚ್ಚು ಫ್ಲ್ಯಾಟ್ ಹೊಂದಿರುವ ಹೊಸ ಅಪಾರ್ಟ್‌ಮೆಂಟ್‌ಗಳಲ್ಲಿ ಒಳಚರಂಡಿ ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪನೆ ಕಡ್ಡಾಯ ಮಾಡಲಾಗಿದೆ. ಶೌಚಾಲಯದ ಫ್ಲಶಿಂಗ್ ಮಾಡಲು, ವಾಹನಗಳನ್ನು ಸ್ವಚ್ಛಗೊಳಿಸಲು ಮತ್ತು ತೋಟಗಾರಿಕೆಗೆ ನೀರು ಮರುಬಳಕೆ ಮಾಡುವುದು ಕೂಡ ಕಡ್ಡಾಯವಾಗಿದೆ. ಈ ರೀತಿಯಾಗಿ ನಾವು ಹಲವು ಲಕ್ಷ ಲೀಟರ್ ನೀರನ್ನು ಉಳಿಸಬಹುದು ಎಂದು ಹೇಳಿದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯಿದೆ, 1964 ರ ಸೆಕ್ಷನ್ 33 ಮತ್ತು 34 ರ ಅಡಿಯಲ್ಲಿ ವಾಹನ ಸ್ವಚ್ಛಗೊಳಿಸುವಿಕೆ, ತೋಟಗಾರಿಕೆ, ಕಾರಂಜಿಗಳು ಮತ್ತು ನಿರ್ಮಾಣಕ್ಕಾಗಿ ಕುಡಿಯುವ ನೀರು ಬಳಸುವುದನ್ನು ನಿಷೇಧಿಸಲಾಗಿದೆ. ಮಾಲ್ ಮತ್ತು ಥಿಯೇಟರ್‌ಗಳು ಕುಡಿಯುವ ನೀರು ಮಾತ್ರ ಬಳಸಬೇಕು ಎಂದು ಸೂಚಿಸಲಾಗಿದೆ. ಜಲ ಮಂಡಳಿಯ ನಿಯಮಗಳನ್ನು ಉಲ್ಲಂಘಿಸಿದರೆ ಮೊದಲ ಬಾರಿಯ ಅಪರಾಧಕ್ಕಾಗಿ ರೂ 5,000 ದಂಡ ವಿಧಿಸಲಾಗುತ್ತದೆ. ಉಲ್ಲಂಘನೆ ಪುನರಾವರ್ತಿತವಾದರೆ ದಿನಕ್ಕೆ 500 ರೂ ಗಳಂತೆ ಹೆಚ್ಚುವರಿ ದಂಡ ಹಾಕಲಿದೆ.
ಇನ್ನು BWSSB ನೀರಿನ ಸಮಸ್ಯೆಗಳಿಗೆ ಸಂಬಂಧಿಸಿದ ದೂರುಗಳಿಗೆ ಕಾಲ್ ಸೆಂಟರ್ ಪ್ರಾರಂಭಿಸಿದೆ. ನೀರಿನ ದುರ್ಬಳಕೆ, ನಿಯಮ ಉಲ್ಲಂಘನೆಗಳನ್ನು ವರದಿ ಮಾಡಲು 1916 ಸಂಖ್ಯೆಗೆ ಡಯಲ್ ಮಾಡಿದರೆ ಅಧಿಕಾರಿಗಳು ತಕ್ಷಣ ಸ್ಪಂದಿಸಲಿದ್ದಾರೆ. ದಂಡ ಹೇರಿಕೆ ಜಾರಿಯಾದ ಒಂದು ತಿಂಗಳೊಳಗೆ 400ಕ್ಕೂ ಹೆಚ್ಚು ಮಂದಿಗೆ ಸುಮಾರು 20 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದರಿಂದ ಜನರು ಹೆಚ್ಚು ಜಾಗೃತರಾಗಲು ಮತ್ತು ನೀರನ್ನು ಸಮರ್ಥವಾಗಿ ಬಳಸಲು ಸಹಾಯವಾಗಲಿದೆ.
ಪರಿಣಾಮಕಾರಿ ನೀರು ಉಳಿಸುವ ಸಾಧನ
ಇತರ ಸರಳ ಮತ್ತು ಪರಿಣಾಮಕಾರಿ ನೀರು ಉಳಿಸುವ ತಂತ್ರವನ್ನು ವಿವರಿಸಿದ ಮನೋಹರ್, ಬಿಕ್ಕಟ್ಟಿನ ಸಂದರ್ಭದಲ್ಲಿ ಏರೇಟರ್‌ಗಳ ಫಿಕ್ಸಿಂಗ್ ಉತ್ತಮ ಕೆಲಸ ಮಾಡಿವೆ. ನಾವು ಎಲ್ಲಾ ವಾಣಿಜ್ಯ ಕಟ್ಟಡಗಳು ಮತ್ತು ಸರ್ಕಾರಿ ಕಚೇರಿಗಳ ಸಂಕೀರ್ಣಗಳ ಕೊಳಾಯಿಗಳಿಗೆ ಏರೇಟರ್‌ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿದ್ದೇವೆ. ಏರೇಟರ್‌ಗಳ ಬೆಲೆ ಕೇವಲ 30 ರೂ. ಆದರೆ ಟ್ಯಾಪ್‌ಗಳಿಂದ ನೀರಿನ ಬಲವಂತದ ಹೊರಹರಿವು ಕಡಿಮೆ ಮಾಡಲಿವೆ. ಈ ರೀತಿಯಾಗಿ, ನಾವು ಶುದ್ಧ ನೀರಿನ ಬಳಕೆ ನಿಯಂತ್ರಿಸಬಹುದು ಎಂದು ಹೇಳಿದರು.
ಭಾರತದ ಹಲವಾರು ರಾಜ್ಯಗಳ ನಡುವೆ ನೀರಿನ ಸಂಘರ್ಷ ಏರ್ಪಟ್ಟಿದೆ. ಕಾವೇರಿ ನೀರು ಹಂಚಿಕೆಯು ತಮಿಳುನಾಡು ಮತ್ತು ಕರ್ನಾಟಕಕ್ಕೆ ಪ್ರತಿ ವರ್ಷ ಸಮಸ್ಯೆಯಾಗಿ ತಲೆದೋರಲಿದೆ. ಆದರೆ, ನಾನು ನೀರಿನ ಮರುಬಳಕೆಯ ಫಲಿತಾಂಶಗಳನ್ನು ನೋಡಿದಾಗ ಸಮರ್ಥ ಬಳಕೆಯಿಂದ ಹೆಚ್ಚುತ್ತಿರುವ ನೀರಿನ ಬೇಡಿಕೆಯನ್ನು ಪರಿಹರಿಸಬಹುದು ಎಂಬುದು ತಿಳಿಯಿತು. ಪ್ರಯೋಗಾಲಯದಲ್ಲಿ ಮರುಬಳಕೆ ನೀರು ಉತ್ತಮ ಫಲಿತಾಂಶ ನೀಡಿತು ಎಂದು ಮನೋಹರ್ ಹೇಳಿದರು.
ನೀರಿನ ಬಿಕ್ಕಟ್ಟು ನನಗೆ ಹೊಸದಲ್ಲ
ನೀರಿನ ಬಿಕ್ಕಟ್ಟು ಎದುರಿಸಿರುವುದು ನನಗೆ ಹೊಸದೇನಲ್ಲ. ತಮಿಳುನಾಡಿನ ವಿರುದ್ಧನಗರ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ನನಗೆ ಬಾಲ್ಯದಲ್ಲಿ ತೀವ್ರ ನೀರಿನ ಸಮಸ್ಯೆಯ ಅರಿವಾಗಿದೆ.
ನೀರಿನ ಬಿಕ್ಕಟ್ಟು ಮಹಿಳೆಯರನ್ನು ಹೇಗೆ ಬರಿದು ಮಾಡುತ್ತದೆ. ಬಡವರ ಮೇಲೆ ಹೇಗೆ ಆಳವಾದ ಪರಿಣಾಮ ಬೀರುತ್ತದೆ ಎಂಬುದು ನನಗೆ ತಿಳಿದಿದೆ. ಹಾಗಾಗಿ ನಾನು ಬೆಂಗಳೂರಿನ ನೀರಿನ ಬಿಕ್ಕಟ್ಟಿಗೆ ಸುಲಭವಾಗಿ ಪರಿಹಾರ ಕಂಡುಕೊಂಡೆನು. ನನ್ನ ವೈಯಕ್ತಿಕ ಅನುಭವದೊಂದಿಗೆ ಯೋಜನೆಯಲ್ಲಿ ಕೆಲಸ ಮಾಡಿದ್ದೇನೆ. ನಾನು ವಿಜ್ಞಾನಿಗಳು ಮತ್ತು ತಜ್ಞರಿಂದಲೂ ಸಹಾಯ ಪಡೆದಿದ್ದೇನೆ . ನೀರಿನ ಪರಿಣಾಮಕಾರಿ ಬಳಕೆಗಾಗಿ ರೊಬೊಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ ಸಂವೇದಕಗಳಂತಹ ತಂತ್ರಜ್ಞಾನ ಬಳಸಿಕೊಂಡಿದ್ದೇವೆ ಎಂದು ದ ಫೆಡರಲ್‌ಗೆ ತಿಳಿಸಿದರು.
ಮರುಬಳಕೆಯ ನೀರಿನ ಸಂದೇಶವನ್ನು ಜನಸಾಮಾನ್ಯ ಬಳಿಗೆ ಕೊಂಡೊಯ್ಯುವುದು ಮನೋಹರ್ ಅವರಿಗೆ ಸುಲಭದ ಕೆಲಸವಾಗಿರಲಿಲ್ಲ. ಅನೇಕ ಟೀಕೆಗಳು, ಹಿಂಜರಿಕೆಗಳು ಮತ್ತು ಪ್ರತಿರೋಧಗಳು ಎದುರಾದರೂ ಅವರು ಪ್ರಯೋಗ ನಿಲ್ಲಿಸಲಿಲ್ಲ. IISc ನೆರವಿನಿಂದ ಪ್ರಯೋಗ ಯಶಸ್ವಿಯಾಯಿತು.
ಮೊದಲ ಸಂಸ್ಕರಿಸಿದ ನೀರಿನ್ನು ಮರುಪೂರಣ ಮಾಡುವ ಸಾಧ್ಯತೆಯನ್ನು ಪರಿಶೀಲಿಸಲಾಯಿತು. ನಂತರ ಅಧಿಕಾರಿಗಳು ಜಲಮೂಲದಲ್ಲಿ ಮರುಪೂರಣದ ಸಾಮರ್ಥ್ಯ ಪರಿಶೀಲಿಸಿ, ಮರುಬಳಕೆ ಪ್ರಯೋಗ ಅನುಷ್ಠಾನಗೊಳಿಸಿದರು.
ಕೋಲಾರ ಬಿಕ್ಕಟ್ಟು ಶಮನ
ಕ್ಷಿಪ್ರ ನಗರೀಕರಣ ಮತ್ತು ಹವಾಮಾನ ಬದಲಾವಣೆಯಂತಹ ಅಂಶಗಳಿಂದ ನೈಸರ್ಗಿಕ ಜಲಮೂಲಗಳ ಸವಕಳಿಯು ಬೆಂಗಳೂರಿನಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಅನೇಕ ನಗರಗಳಲ್ಲಿ ತೀವ್ರ ನೀರಿನ ಬಿಕ್ಕಟ್ಟು ಸೃಷ್ಟಿಸಿದೆ ಎಂದು ಜಲ ನಿರ್ವಹಣಾ ತಜ್ಞ, ಐಐಎಸ್ಸಿ ವಿಜ್ಞಾನಿ ಎನ್.ಎಲ್.ರಾವ್ ದ ಫೆಡರಲ್‌ಗೆ ತಿಳಿಸಿದರು.
ಸವಕಳಿ ಪ್ರದೇಶಗಳು ಮರುಬಳಕೆಯ ನೀರಿನಿಂದ ಪ್ರಯೋಜನ ಪಡೆಯಬಹುದು. ವಾಸ್ತವವಾಗಿ, ಮರುಬಳಕೆಯ ನೀರು ಬಳಸುತ್ತಿರುವ ಕರ್ನಾಟಕದ ಮತ್ತೊಂದು ಬರ ಪ್ರದೇಶ ಕೋಲಾರ. ಅದರ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಮರುಬಳಕೆ ನೀರು ಹೆಚ್ಚಾಗಿ ಅನುಕೂಲ ಮಾಡಿಕೊಟ್ಟಿದೆ ಎಂದು ರಾವ್ ಹೇಳಿದರು.
ಆರಂಭದಲ್ಲಿ ಕೋಲಾರದ ಜನರು ತ್ಯಾಜ್ಯ ನೀರು ಮರುಬಳಕೆ ಯೋಜನೆಯನ್ನು ಟೀಕಿಸಿದರು. ಅಂತರ್ಜಲ ಗುಣಮಟ್ಟ ಮತ್ತು ಸಾರ್ವಜನಿಕ ಆರೋಗ್ಯ ಕಾಳಜಿಗಳ ಬಗ್ಗೆ ಸಂದೇಹ ವ್ಯಕ್ತಪಡಿಸಿದರು. ಆದರೆ ಮರುಬಳಕೆಯ ನೀರಿನ ಮೌಲ್ಯಮಾಪನ ಸಮಯದಲ್ಲಿ ಅಂತರ್ಜಲದ ಗುಣಮಟ್ಟ ನಿಜವಾಗಿಯೂ ಸುಧಾರಿಸಿದ್ದನ್ನು ನಾವು ಕಂಡುಕೊಂಡೆವು. ನೀರಿನ ಲಭ್ಯತೆಯಿಂದಾಗಿ ಸುಮಾರು 31 ಪ್ರತಿಶತದಷ್ಟು ಭೂಮಿಗೆ ಇಂದು ನೀರಾವರಿ ಸೌಲಭ್ಯ ಒದಗಿಸಿದೆ. ನೀರಾವರಿ ಪ್ರದೇಶವು 158,000 ಹೆಕ್ಟೇರ್‌ಗಳಿಂದ 207,000 ಹೆಕ್ಟೇರ್‌ಗಳಿಗೆ ಏರಿಕೆಯಾಗಿದೆ. ರೈತರು ಈಗ ನೀರಿನ ಕೊರತೆಯ ಒತ್ತಡವಿಲ್ಲದೆ ತಮ್ಮ ಬೆಳೆಗಳನ್ನು ಬೆಳೆಯಲು ಸಮರ್ಥರಾಗಿದ್ದಾರೆ ಎಂದು ಅವರು ಫೆಡರಲ್‌ಗೆ ತಿಳಿಸಿದರು.