ಶಿಷ್ಯ ವೇತನ ಹೆಚ್ಚಳ ಬೇಡಿಕೆ | ಮುಂದುವರಿದ ಸ್ಥಾನಿಕ ವೈದ್ಯರ ಮುಷ್ಕರ

ಕರ್ನಾಟಕದ ಸ್ಥಾನಿಕ ವೈದ್ಯರು ಆ.12 ರಂದು ತಮ್ಮ ಅನಿರ್ದಿಷ್ಟಾವಧಿ ಮುಷ್ಕರವನ್ನು ಪ್ರಾರಂಭಿಸಿದ್ದಾರೆ. ತಮ್ಮ ಬೇಡಿಕೆ ಈಡೇರುವವರೆಗೆ ಮುಷ್ಕರ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ

Update: 2024-08-13 07:36 GMT
ಬೇಡಿಕೆಗಳನ್ನು ಈಡೇರಿಸುವವರೆಗೆ ಕರ್ನಾಟಕ ಸ್ಥಾನಿಕ ವೈದ್ಯರು ಧರಣಿ ಮುಂದುವರಿಸಲಿದ್ದಾರೆ.
Click the Play button to listen to article

ನಮ್ಮ ಶಿಷ್ಯ ವೇತನ ಹೆಚ್ಚಳದ ಮನವಿಗೆ ಸರ್ಕಾರ ಸ್ಪಂದಿಸುವವರೆಗೂ ಕರ್ನಾಟಕ ಸ್ಥಾನಿಕ ವೈದ್ಯರ ಸಂಘದ ನೇತೃತ್ವದಲ್ಲಿ ರಾಜ್ಯದ ಸ್ಥಾನಿಕ ವೈದ್ಯರು ಅನಿರ್ದಿಷ್ಟಾವಧಿವರೆಗೆ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ಸಂಘದ ಅಧ್ಯಕ್ಷ ಡಾ.ಸಿರೀಶ್ ಶಿವರಾಮಯ್ಯ ಹೇಳಿದ್ದಾರೆ.

ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ  ಹೌಸ್‌ ಸರ್ಜನ್‌, ಸ್ನಾತಕೋತ್ತರ ಪದವೀಧರರು, ಸೂಪರ್ ಸ್ಪೆಷಾಲಿಟಿ ಸ್ಥಾನಿಕ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿನ ಹಿರಿಯ ಸ್ಥಾನಿಕ ವೈದ್ಯರನ್ನು ಒಳಗೊಂಡ ಎಲ್ಲಾ ತುರ್ತು ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಡಾ.ಶಿವರಾಮಯ್ಯ ತಿಳಿಸಿದ್ದಾರೆ. 

"2020ರಲ್ಲಿ ಈ ಹಿಂದೆ ಶಿಷ್ಯ ವೇತನ ಹೆಚ್ಚಳ ಆಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಶಿಷ್ಯ ವೇತನ  ಹೆಚ್ಚಳ ಮಾಡಿಲ್ಲ. ಇತರ ರಾಜ್ಯಗಳು ಪ್ರತಿ ವರ್ಷ ಅಥವಾ ಪ್ರತಿ ಮೂರು ವರ್ಷಗಳಿಗೊಮ್ಮೆ ಶಿಷ್ಯ ವೇತನ  ಹೆಚ್ಚಳ ಮಾಡುತ್ತವೆ. ನಾವು ವಿರಾಮವಿಲ್ಲದೆ 24 ರಿಂದ 48 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇವೆ. ಆದರೂ ನ್ಯಾಯಯುತವಾಗಿ ನಮಗೆ ಶಿಷ್ಯ ವೇತನ ಸಿಗುತ್ತಿಲ್ಲ" ಎಂದು ಅವರು ಆರೋಪಿಸಿದ್ದಾರೆ. 

"ಈ ಸಂಬಂಧ ನಾವು ಸರ್ಕಾರಕ್ಕೆ ಹಲವಾರು ಮನವಿಗಳನ್ನು ಸಲ್ಲಿಸಿದ್ದೇವೆ ಮತ್ತು ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದೇವೆ. ಆದರೆ ಶಿಷ್ಯ ವೇತನ  ಹೆಚ್ಚಳಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸ್ಥಾನಿಕ ವೈದ್ಯರನ್ನು ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಒತ್ತಡಕ್ಕೆ ಸಿಲುಕಿಸಿದೆ. ಇದರಿಂದ ರೋಗಿಗಳ ಆರೈಕೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ" ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ವೈದ್ಯರು ಇತರ ರಾಜ್ಯಗಳಲ್ಲಿನ ವೈದ್ಯರಿಗಿಂತ ಶೇ.50 ರಷ್ಟು ಕಡಿಮೆ ಶಿಷ್ಯ ವೇತನ ಪಡೆಯುತ್ತಾರೆ. ಆದರೆ ನಾವು ಪದವಿಪೂರ್ವ, ಸ್ನಾತಕೋತ್ತರ ಮತ್ತು ಸೂಪರ್-ಸ್ಪೆಷಾಲಿಟಿ ವೈದ್ಯಕೀಯ ಕೋರ್ಸ್‌ಗಳಿಗೆ ದೇಶದಲ್ಲೇ ಅತಿ ಹೆಚ್ಚಿನ ಶುಲ್ಕವನ್ನು ಪಾವತಿಸುತ್ತೇವೆ. ಇತರ ರಾಜ್ಯಗಳ ಸ್ಥಾನಿಕ ವೈದ್ಯರಿಗೆ ನೀಡುತ್ತಿರುವ ಶಿಷ್ಯ ವೇತನಕ್ಕೂ ಕರ್ನಾಟಕದಲ್ಲಿ ನೀಡುತ್ತಿರುವ ಶಿಷ್ಯ ವೇತನಕ್ಕೂ ವ್ಯತ್ಯಾಸವಿದೆ. ಆದ್ದರಿಂದ ಇತರೆ ರಾಜ್ಯಗಳಿಗೆ ಸರಿಸಮನಾಗಿ ಶಿಷ್ಯ ವೇತನ ನೀಡಬೇಕು ಎನ್ನುವುದು ನಮ್ಮ ಬೇಡಿಕೆ ಎಂದು ಶಿವರಾಮಯ್ಯ ಹೇಳಿದ್ದಾರೆ.

ಐದು ವರ್ಷಗಳಿಂದ ಪರಿಷ್ಕರಿಸದ ತಮ್ಮ ಶಿಷ್ಯ ವೇತನ ಹೆಚ್ಚಳಕ್ಕೆ ಒತ್ತಾಯಿಸಿ ರಾಜ್ಯದ 4 ಸಾವಿರ ಸ್ಥಾನಿಕ ವೈದ್ಯರು ಸೋಮವಾರದಿಂದ ಪ್ರೀಡಂ ಪಾರ್ಕ್‌ನಲ್ಲಿ ಮುಷ್ಕರ ಆರಂಭಿಸಿದ್ದಾರೆ.

Tags:    

Similar News