ಪದೇ ಪದೇ ಗಾಂಜಾ ಮಾರಾಟ: ಚಾಮರಾಜಪೇಟೆಯ ಕುಖ್ಯಾತ ಡ್ರಗ್ ಪೆಡ್ಲರ್ ಗೂಂಡಾ ಕಾಯ್ದೆಯಡಿ ಬಂಧನ
ಪ್ರತಿ ಬಾರಿಯೂ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರವೂ, ತನ್ನ ಚಟುವಟಿಕೆಗಳನ್ನು ಸುಧಾರಿಸಿಕೊಳ್ಳದೆ, ನಿರ್ಭೀತಿಯಿಂದ ಮಾದಕ ವಸ್ತುಗಳ ಸಂಗ್ರಹಣೆ, ಸಾಗಾಟ ಮತ್ತು ಮಾರಾಟವನ್ನು ಮುಂದುವರಿಸಿದ್ದ.;
ಪದೇ ಪದೇ ಮಾದಕ ವಸ್ತು (ಗಾಂಜಾ) ಮಾರಾಟ ಮತ್ತು ಸಾಗಾಟದಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ, ಚಾಮರಾಜಪೇಟೆ ಪೊಲೀಸ್ ಠಾಣೆಯ ಕುಖ್ಯಾತ ರೌಡಿ ಶೀಟರ್‌ನನ್ನು, ಬೆಂಗಳೂರು ನಗರ ಪೊಲೀಸರು ವಿಶೇಷ ಪಿಐಟಿ ಎನ್ಡಿಪಿಎಸ್ (PIT NDPS) ಕಾಯ್ದೆಯ ಅಡಿಯಲ್ಲಿ ಬಂಧಿಸಿದ್ದಾರೆ.
ಚಾಮರಾಜಪೇಟೆ ಪೊಲೀಸ್ ಠಾಣೆಯ ರೌಡಿ ಶೀಟರ್, ಸೈಯದ್ ಮುಬಾರಕ್ ಅಲಿಯಾಸ್ ಮುಬ್ಬು (28) ಬಂಧಿತ ಆರೋಪಿ. ಈತನು ಚಾಮರಾಜಪೇಟೆ, ಅನ್ನಪೂರ್ಣೇಶ್ವರಿನಗರ ಮತ್ತು ಯಲಹಂಕ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ, ಒಟ್ಟು 6 ಮಾದಕ ವಸ್ತು ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಆರೋಪಿ ಸೈಯದ್ ಮುಬಾರಕ್, ಈ ಹಿಂದೆಯೂ ಹಲವು ಬಾರಿ ಗಾಂಜಾ ಮಾರಾಟ ಪ್ರಕರಣಗಳಲ್ಲಿ ಬಂಧಿತನಾಗಿ, ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ. ಆದರೆ, ಪ್ರತಿ ಬಾರಿಯೂ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರವೂ, ತನ್ನ ಚಟುವಟಿಕೆಗಳನ್ನು ಸುಧಾರಿಸಿಕೊಳ್ಳದೆ, ನಿರ್ಭೀತಿಯಿಂದ ಮಾದಕ ವಸ್ತುಗಳ ಸಂಗ್ರಹಣೆ, ಸಾಗಾಟ ಮತ್ತು ಮಾರಾಟವನ್ನು ಮುಂದುವರಿಸಿದ್ದ.
ಈತನ ಸಮಾಜಘಾತುಕ ಕೃತ್ಯಗಳನ್ನು ಸಾಮಾನ್ಯ ಕಾನೂನು ಕ್ರಮಗಳಿಂದ ನಿಯಂತ್ರಿಸುವುದು ಕಷ್ಟಸಾಧ್ಯವಾದ ಕಾರಣ, ಆತನ ದುಷ್ಕೃತ್ಯಗಳನ್ನು ಶಾಶ್ವತವಾಗಿ ತಡೆಗಟ್ಟುವ ಮತ್ತು ಕಾನೂನಿನ ಚೌಕಟ್ಟಿನಲ್ಲಿ ನಿಯಂತ್ರಣದಲ್ಲಿಡುವ ಸಲುವಾಗಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರ ವಿಶೇಷ ಆದೇಶದ ಮೇರೆಗೆ, ಆತನನ್ನು ಪಿ.ಐ.ಟಿ ಎನ್.ಡಿ.ಪಿ.ಎಸ್ ಕಾಯ್ದೆಯ ಅಡಿಯಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು, ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.