ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ, ಒಂದೇ ಕುಟುಂಬದ ಮೂವರ ಸಾವು
ಅಪಘಾತದ ತೀವ್ರತೆಗೆ ಸಿದ್ದಾರ್ಥ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಶಿವಮೂರ್ತಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನಿಧನರಾದರು. ತೀವ್ರ ಗಾಯಗೊಂಡಿದ್ದ ಚೆನ್ನಾಜಮ್ಮ ಕೂಡ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರು
ನಂಜನಗೂಡು ನಗರದ ರೈಲ್ವೆ ಮೇಲ್ಸೇತುವೆ ಸಮೀಪದ ಚಾಮುಂಡಿ ಟೌನ್‌ಶಿಪ್ ಬಳಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.
ಗುಂಡ್ಲುಪೇಟೆ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್, ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ಚಾಮರಾಜನಗರ ತಾಲೂಕಿನ ಉದ್ದನೂರು ಗ್ರಾಮದ ನಿವಾಸಿಗಳಾದ ಶಿವಮೂರ್ತಿ (52), ಅವರ ಪತ್ನಿ ಚೆನ್ನಾಜಮ್ಮ (46) ಮತ್ತು ಪುತ್ರ ಸಿದ್ದಾರ್ಥ (15) ಎಂದು ಗುರುತಿಸಲಾಗಿದೆ. ಈ ಕುಟುಂಬವು ಕಾರ್ಯನಿಮಿತ್ತ ಮೈಸೂರಿಗೆ ತೆರಳಿ ವಾಪಸ್ ಊರಿಗೆ ಮರಳುತ್ತಿದ್ದ ವೇಳೆ ನಂಜನಗೂಡು ಪ್ರವೇಶ ದ್ವಾರದ ಬಳಿ ಘಟನೆ ನಡೆದಿದೆ.
ಅಪಘಾತದ ತೀವ್ರತೆಗೆ ಸಿದ್ದಾರ್ಥ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಶಿವಮೂರ್ತಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನಿಧನರಾದರು. ತೀವ್ರ ಗಾಯಗಳಾಗಿದ್ದ ಚೆನ್ನಾಜಮ್ಮ ಕೂಡ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೀಡಾದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಕೃಷಿ ಹೊಂಡದಲ್ಲಿ ಮುಳುಗಿ ತಾಯಿ-ಮಗ ಸಾವು
ಇನ್ನೊಂದು ಘಟನೆಯಲ್ಲಿ, ಕೋಲಾರ ತಾಲೂಕಿನ ಹೊಗರಿಗೊಲ್ಲಹಳ್ಳಿ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಬಿದ್ದು ತಾಯಿ ಮತ್ತು ಮಗ ಇಬ್ಬರೂ ಮೃತಪಟ್ಟಿದ್ದಾರೆ.
ಜಾನುವಾರುಗಳಿಗೆ ಮೇವು ತರಲು ಮಗ ಚಕ್ರವರ್ತಿ (6) ಯೊಂದಿಗೆ ಹೊಲಕ್ಕೆ ಹೋಗಿದ್ದ ಮಾಲಾ (30) ಈ ದುರಂತಕ್ಕೆ ಬಲಿಯಾಗಿದ್ದಾರೆ.
ಮೊದಲು ಕಾಲು ಜಾರಿ ಹೊಂಡಕ್ಕೆ ಬಿದ್ದ ಮಗ ಚಕ್ರವರ್ತಿಯನ್ನು ರಕ್ಷಿಸಲು ಧಾವಿಸಿದ ತಾಯಿ ಮಾಲಾ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ.
ಸ್ಥಳೀಯರು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.