ಡಾ.ಕೃತಿಕಾರೆಡ್ಡಿ ಕೊಲೆ ಕೇಸ್: ಪತ್ನಿಯನ್ನು ಕೊಲೆ ಮಾಡಿ, ಸ್ನೇಹಿತೆಗೆ ಸಂದೇಶ ಕಳುಹಿಸಿದ್ದ ಆರೋಪಿ ಪತಿ
ಆರೋಪಿ ಮಹೇಂದ್ರ ರೆಡ್ಡಿ ತನ್ನ ಸ್ನೇಹಿತೆಯೊಂದಿಗೆ ನಡೆಸಿದ ಸಂಪೂರ್ಣ ಚಾಟ್ ಹಿಸ್ಟರಿಯನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ಜತೆಗೆ ವೈಯಕ್ತಿಕ ಮಾತುಕತೆಗಳೂ ಬಹಿರಂಗವಾಗಿವೆ.
ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಡಾ.ಕೃತಿಕಾರೆಡ್ಡಿ ಕೊಲೆ ಪ್ರಕರಣದ ಆರೋಪಿಯಾಗಿರುವ ಪತಿ ಡಾ.ಮಹೇಂದ್ರರೆಡ್ಡಿ ವಿರುದ್ಧ ತನಿಖೆ ತೀವ್ರಗೊಳಿಸಿರುವ ಪೊಲೀಸರಿಗೆ ಹಲವು ಸ್ಫೋಟಕ ವಿಚಾರಗಳು ತಿಳಿದು ಬಂದಿವೆ.
ಪೊಲೀಸರು ಆರೋಪಿಯ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ವಶಕ್ಕೆ ಪಡೆದು ತಾಂತ್ರಿಕ ವಿಶ್ಲೇಷಣೆಗಾಗಿ ಎಫ್‌ಎಸ್‌ಎಲ್‌ಗೆ ರವಾನಿಸಿದ್ದಾರೆ. ಆರೋಪಿ ಮಹೇಂದ್ರರೆಡ್ಡಿ ತನ್ನ ಆಪ್ತ ಸ್ನೇಹಿತೆಯೊಂದಿಗೆ ನಡೆಸಿರುವ ಚಾಟಿಂಗ್ ಬಹಿರಂಗವಾಗಿದೆ. ಇಂತಹ ಸಂದೇಶಗಳನ್ನು ಫೋನ್ ಪೇ ಮೂಲಕ ಕಳುಹಿಸುತ್ತಿದ್ದ. ಒಂದರಲ್ಲಿ I killed my wife… because of you” ಎಂಬ ಸಂದೇಶ ಕಳುಹಿಸಿದ್ದ ಎಂಬ ಸಂಗತಿ ತನಿಖೆ ವೇಳೆ ಬಯಲಾಗಿದೆ. ಈ ಸಂದೇಶವನ್ನು ಅಳಿಸಲು ಸಾಕಷ್ಟು ಬಾರಿ ಯತ್ನಿಸಿದರೂ ಆಗಿರಲಿಲ್ಲ.
ಸ್ನೇಹಿತೆಯೊಂದಿಗೆ ನಡೆದ ಪೂರ್ಣ ಚಾಟ್ ಹಿಸ್ಟರಿಯನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ಜತೆಗೆ ವೈಯಕ್ತಿಕ ಮಾತುಕತೆಗಳೂ ಬಹಿರಂಗವಾಗಿವೆ. ಈ ಹಿನ್ನೆಲೆಯಲ್ಲಿ ಆ ಯುವತಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಡಾ.ಕೃತಿಕಾರೆಡ್ಡಿಯ ಆರೋಗ್ಯ ಸಮಸ್ಯೆಯಿಂದ ಪತಿ ಮಹೇಂದ್ರರೆಡ್ಡಿ ಬೇಸರಗೊಂಡಿದ್ದರು. “ನನಗೆ ವೈಯಕ್ತಿಕ ಜೀವನವೇ ಇಲ್ಲ” ಎಂದು ಅಸಮಾಧಾನ ಹೊರಹಾಕಿದ್ದರು. ಪತ್ನಿಯಿಂದ ವಿಚ್ಛೇದನ ಪಡೆದರೆ ಆರ್ಥಿಕವಾಗಿ ನಷ್ಟವಾಗಬಹುದು ಎಂಬ ಭೀತಿಯಿಂದ ಪತ್ನಿಯ ಆರೋಗ್ಯ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡು ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಯೋಜನೆಯ ಭಾಗವಾಗಿ ಕೃತಿಕಾರೆಡ್ಡಿ ದೇಹದ ತೂಕಕ್ಕೆ ಅಗತ್ಯವಿದ್ದ 7-8 ಎಂ.ಎಲ್. ಅನಸ್ತೇಶಿಯಾ ಬದಲು 15 ಎಂ.ಎಲ್. ಪ್ರಮಾಣದಲ್ಲಿ ನೀಡಿದ್ದರೆಂಬುದು ತನಿಖೆಯಿಂದ ಈಗಾಗಲೇ ಬಯಲಾಗಿದೆ. ಈ ಆಧಾರದ ಮೇಲೆ ಮಹೇಂದ್ರರೆಡ್ಡಿಯನ್ನು ಪೊಲೀಸರು ಬಂಧಿಸಿದ್ದು, ಆತನ ಸ್ನೇಹಿತೆಯನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.