ಪ್ರವಾಹಪೀಡಿತ ಪ್ರದೇಶಗಳ ಮೂಲಸೌಕರ್ಯ; ಎನ್‌ಡಿಆರ್‌ಎಫ್ ಪರಿಹಾರ ಬೇಡಿಕೆ ಹಿಂದಿದೆ ಸಿದ್ದರಾಮಯ್ಯ ತಂತ್ರ?
ಬೆಳೆನಾಶ, ಮನೆಗಳು ಕುಸಿದು ಬಿದ್ದಾಗ, ಜಾನುವಾರುಗಳು ಹಾನಿಯಾದಾಗ, ಮೀನುಗಾರಿಕೆ ಸಂಬಂಧ ಎನ್‌ಡಿಆರ್‌ಎಫ್ ಪರಿಹಾರ ನೀಡಲಾಗುತ್ತದೆ. ಆದರೆ, ಮೂಲಸೌಕರ್ಯಕ್ಕೆ ಪರಿಹಾರ ನೀಡಲು ನಿಯಮದಲ್ಲಿ ಅವಕಾಶ ಇಲ್ಲ.
ರಾಜ್ಯದಲ್ಲಿ ಕಳೆದ 2-3 ತಿಂಗಳ ಹಿಂದೆ ಮುಂಗಾರು ಅವಧಿಯಲ್ಲಿ ಭಾರಿ ಮಳೆ ಮತ್ತು ನದಿ ಪ್ರವಾಹದಿಂದಾಗಿ ಮೂಲಸೌಕರ್ಯಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ಇದೀಗ ಪರಿಹಾರಕ್ಕೆ ಕೇಂದ್ರದ ಮೊರೆ ಹೋಗಲು ತೀರ್ಮಾನಿಸಿದೆ. ಹಾನಿಗೊಳಗಾದ ರಸ್ತೆ, ಸೇತುವೆ, ಶಾಲೆ, ವಿದ್ಯುತ್ ಹಾಗೂ ಕುಡಿಯುವ ನೀರಿನ ಯೋಜನೆಗಳ ಪುನರ್ನಿರ್ಮಾಣಕ್ಕಾಗಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಅಡಿಯಲ್ಲಿ 1545.23 ಕೋಟಿ ರೂ.ಗಳ ಆರ್ಥಿಕ ನೆರವು ಪಡೆಯಲು ಮುಂದಾಗಿದೆ. ಆದರೆ, ರಾಜ್ಯ ಸರ್ಕಾರದ ಈ ನಡೆಯು ಎನ್‌ಡಿಆರ್‌ಎಫ್ ನಿಯಮಕ್ಕೆ ವಿರುದ್ಧವಾಗಿದೆ. ಹೀಗಾಗಿ ಸರ್ಕಾರದ ಮನವಿಯು ಕೇಂದ್ರದಲ್ಲಿ ಬಹುತೇಕ ತಿರಸ್ಕೃತಗೊಳ್ಳಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇದೇ ಮೊದಲ ಬಾರಿಗೆ ಪ್ರವಾಹದಿಂದ ಹಾನಿಗೊಳಗಾದ ಮೂಲಸೌಕರ್ಯಕ್ಕೆ ಪರಿಹಾರ ಕೇಳಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಇದು ಎನ್‌ಡಿಆರ್‌ಎಫ್ ನಿಯಮಕ್ಕೆ ವಿರುದ್ಧವಾಗಿದ್ದು, ಬೆಳೆ ಹಾನಿ ಹೊರತುಪಡಿಸಿ ಮೂಲಸೌಕರ್ಯಕ್ಕೆ ಪರಿಹಾರ ನೀಡಲು ಅವಕಾಶ ಇಲ್ಲ. ಸರ್ಕಾರಕ್ಕೆ ಇದರ ಮಾಹಿತಿ ಇದ್ದರೂ ಸಹ ಕೇಂದ್ರಕ್ಕೆ ಪರಿಹಾರ ಕೋರಿ ಮನವಿ ಸಲ್ಲಿಕೆಗೆ ಮುಂದಾಗಿದೆ. ಸರ್ಕಾರದ ಈ ಕ್ರಮವು ರಾಜಕೀಯ ಪ್ರೇರಿತವಾದುದು ಎಂಬ ಆರೋಪಗಳು ಕೇಳಿಬಂದಿವೆ. ಇದೇ ವಿಷಯವಾಗಿ ಮುಂದಿನ ದಿನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಡುವೆ ಕಿತ್ತಾಟಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ.
ಪ್ರಕೃತಿ ವಿಕೋಪಗಳಿಂದ ಹಾನಿಗೊಳಗಾದ ಮೂಲಸೌಕರ್ಯಕ್ಕೆ ಎನ್‌ಡಿಆರ್‌ಎಫ್ ಅಡಿಯಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ. ಪ್ರಸ್ತುತ ಜಾರಿಯಲ್ಲಿರುವ ಎನ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ, ತುರ್ತು ಪರಿಸ್ಥಿತಿ ಮತ್ತು ತಕ್ಷಣದ ಪುನರ್‌ಸ್ಥಾಪನೆಗೆ ಮಾತ್ರ ಹಣ ಬಿಡುಗಡೆ ಮಾಡಲಾಗುತ್ತದೆ. ದೀರ್ಘಾವಧಿಯ ಮೂಲಸೌಕರ್ಯ ಪುನರ್‌ನಿರ್ಮಾಣ ಕಾರ್ಯಗಳಿಗೆ ಈ ನಿಧಿಯಿಂದ ಸಹಾಯ ನೀಡಲು ಅವಕಾಶ ಇಲ್ಲ. ಈ ಕಾರಣಕ್ಕಾಗಿ ಎನ್‌ಡಿಆರ್‌ಎಫ್‌ನ ಈ ನಿಯಮಕ್ಕೆ ಹಲವು ರಾಜ್ಯಗಳು ಕೇಂದ್ರದ ನಿಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ. ಇದನ್ನೇ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರವು ರಾಜಕೀಯ ತಂತ್ರಗಾರಿಕೆ ರೂಪಿಸಿದೆ ಎಂದು ಮೂಲಗಳು ಹೇಳಿವೆ.
ಜನತೆಯ ಮುಂದೆ ಹೋಗಲು ಕಾರಣ
ಕರ್ನಾಟಕ, ಉತ್ತರಾಖಂಡ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಇತ್ತೀಚೆಗೆ ಸಂಬಂಧಿಸಿದ ಪ್ರವಾಹದಿಂದಾಗಿ ಭೂಕುಸಿತ, ರಸ್ತೆ, ಸೇತುವೆ, ವಿದ್ಯುತ್ ಸೇರಿ ಮೂಲಸೌಕರ್ಯಗಳು ಗಂಭೀರವಾಗಿ ಹಾನಿಗೊಳಗಾಗಿವೆ. ಈ ಯೋಜನೆಗಳ ಪುನರ್‌ನಿರ್ಮಾಣಕ್ಕೆ ಎನ್‌ಡಿಆರ್‌ಎಫ್ ನಿಧಿ ಅನ್ವಯವಾಗುತ್ತಿಲ್ಲ. ರಾಜ್ಯ ಸರ್ಕಾರಗಳು ಈ ನಿಯಮವನ್ನು ಪರಿಷ್ಕರಿಸಬೇಕೆಂದು ಕೇಂದ್ರಕ್ಕೆ ಮನವಿ ಮಾಡಿವೆ. ಆದರೂ ಕೇಂದ್ರ ಸರ್ಕಾರವು ಇದಕ್ಕೆ ಯಾವುದೇ ಸೊಪ್ಪು ಹಾಕಿಲ್ಲ. ಬೆಳೆಹಾನಿ ಸಂಭವಿಸಿದರೆ ಎನ್‌ಡಿಆರ್‌ಎಫ್ ಅಡಿ ಪರಿಹಾರ ಕೇಳಬಹುದು. ಆದರೆ, ರಾಜ್ಯದಲ್ಲಿ ಸಂಭವಿಸಿದ ಮೂಲಸೌಕರ್ಯ ಹಾನಿಗಳಿಗೆ ಕೇಳಲು ಬರುವುದಿಲ್ಲ. ಕಾಂಗ್ರೆಸ್ ಸರ್ಕಾರವು ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದೆ. ಕೇಂದ್ರದ ನೆರವು ಕೇಳಿದ್ದರೂ ನೀಡಿಲ್ಲ ಎಂದು ಜನತೆಯ ಮುಂದೆ ಹೋಗಲು ಇದೊಂದು ಕಾರಣ ಸಿಕ್ಕಂತಾಗಲಿದ್ದು, ಈ ತಂತ್ರಗಾರಿಕೆಯನ್ನು ರೂಪಿಸಿದೆ ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ.
ನಿಯಮ ಪರಿಷ್ಕರಣೆ ಮಾಡುವಂತೆ ಒತ್ತಾಯ
ವಿಕೋಪದ ಬಳಿಕ ಮೂಲಸೌಕರ್ಯ ಸಂಪೂರ್ಣವಾಗಿ ನಾಶವಾದ ಸಂದರ್ಭಗಳಲ್ಲಿ ಕೇವಲ ತುರ್ತು ಪರಿಹಾರದ ನೆರವು ಸಾಕಾಗುವುದಿಲ್ಲ. ಪುನರ್ ನಿರ್ಮಾಣದ ಅಗತ್ಯವಿರುವಾಗ ರಾಜ್ಯಗಳು ಸ್ವಂತ ನಿಧಿಯ ಮೇಲೆ ಅವಲಂಬಿಸಬೇಕಾಗುತ್ತದೆ. ಇದು ಆರ್ಥಿಕ ಒತ್ತಡವನ್ನು ಹೆಚ್ಚಿಸುತ್ತದೆ ಎಂಬುದು ವಿಪತ್ತು ನಿರ್ವಹಣಾ ತಜ್ಞರು ಅಭಿಪ್ರಾಯವಾಗಿದೆ. ಹೀಗಾಗಿ ರಾಜ್ಯ ಸರ್ಕಾರಗಳು ಕೇಂದ್ರದ ಮೇಲೆ ಒತ್ತಡ ಹೇರಿ, ಎನ್‌ಡಿಆರ್‌ಎಫ್ ನಿಯಮ ಪರಿಷ್ಕರಣೆ ಮಾಡುವಂತೆ ಒತ್ತಾಯಿಸುತ್ತಿವೆ. ಎನ್‌ಡಿಆರ್‌ಎಫ್ ನಿಧಿಯನ್ನು ತುರ್ತು ನೆರವಿಗೆ ಮಾತ್ರ ಸೀಮಿತಗೊಳಿಸದೆ, ದೀರ್ಘಾವಧಿಯ ಪುನರ್‌ನಿರ್ಮಾಣಕ್ಕೂ ಅನ್ವಯವಾಗುವಂತೆ ಮಾಡಬೇಕು ಎಂದು ಹಲವು ರಾಜ್ಯಗಳು ಒತ್ತಾಯಿಸಿವೆ.
ಇತ್ತೀಚೆಗೆ ಹಿಮಾಚಲ ಪ್ರದೇಶದ ಸರ್ಕಾರವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಕೇಂದ್ರದ ಸಹಾಯಧನದ ಮಾನದಂಡಗಳು ಸಮಂಜಸವಾಗಿಲ್ಲ. ಹಾನಿಗೊಂಡ ರಸ್ತೆ, ಸೇತುವೆ, ವಿದ್ಯುತ್ ವ್ಯವಸ್ಥೆ ಮತ್ತು ಶಾಲೆಗಳಂತಹ ಮೂಲಸೌಕರ್ಯಕ್ಕೆ ಪರಿಹಾರ ನೀಡುವ ವಿಧಿ ಇಲ್ಲ. ಇದು ರಾಜ್ಯದ ಪುನರ್‌ಸ್ಥಾಪನಾ ಕಾರ್ಯಕ್ಕೆ ದೊಡ್ಡ ಅಡ್ಡಿಯಾಗಿದೆ ಎಂದು ತಿಳಿಸಿತ್ತು. ಇದೇ ರೀತಿಯ ಅಸಮಾಧಾನವನ್ನು ಕರ್ನಾಟಕ ಹಾಗೂ ಅಸ್ಸಾಂ ಸರ್ಕಾರಗಳೂ ವ್ಯಕ್ತಪಡಿಸಿವೆ ಎಂದು ಹೇಳಲಾಗಿದೆ.
ದೇಶದ ವಿವಿಧ ರಾಜ್ಯಗಳು ಸಲ್ಲಿಕೆ ಮಾಡಿರುವ ಮನವಿಗೆ ಕೇಂದ್ರ ಗೃಹ ಸಚಿವಾಲಯವು ನಿಯಮಾವಳಿ ಪರಿಷ್ಕರಣೆ ಕುರಿತು ರಾಜ್ಯಗಳ ಅಭಿಪ್ರಾಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ. ಆದರೆ ಯಾವ ರೀತಿಯ ಬದಲಾವಣೆಗಳನ್ನು ತರಲಾಗುವುದು ಎಂಬುದರ ಸ್ಪಷ್ಟನೆಯನ್ನು ನೀಡಿಲ್ಲ. ಪ್ರವಾಹದ ವೇಳೆ ಹಾನಿಗೊಂಡ ರಸ್ತೆ, ಸೇತುವೆ ಮತ್ತಿತ್ತರ ಮೂಲಸೌಕರ್ಯ ಸೌಲಭ್ಯಗಳ ಪುನರ್‌ನಿರ್ಮಾಣಕ್ಕಾಗಿ ರಾಜ್ಯಗಳು ಸ್ವಂತ ಸಂಪನ್ಮೂಲಗಳನ್ನು ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹ ಸಮಯದಲ್ಲಿ ಎನ್‌ಡಿಆರ್‌ಎಫ್ ನಿಧಿಯ ಮಿತಿಯು ವಿಕೋಪ ನಿರ್ವಹಣೆಯ ಪ್ರಯೋಜನ ಕುರಿತು ಹಲವು ಪ್ರಶ್ನೆಗಳು ಉದ್ಭವವಾಗಿವೆ.
ಎನ್‌ಡಿಆರ್‌ಎಫ್ ನಿಯಮ ಏನು?
ದೇಶದ ಯಾವುದೇ ಭಾಗದಲ್ಲಿ ತೀವ್ರ ಪ್ರಮಾಣದ ಪ್ರಕೃತಿ ವಿಕೋಪ ಸಂಭವಿಸಿದಾಗ ಸಾಮಾನ್ಯವಾಗಿ ಆಯಾ ರಾಜ್ಯಗಳ ರಾಜ್ಯ ವಿಪತ್ತು ನಿರ್ವಹಣ ನಿಧಿ (ಎಸ್‌ಡಿಆರ್‌ಎಫ್) ಬಳಕೆ ಮಾಡಲಾಗುತ್ತದೆ. ಅದು ಸಾಲದಿದ್ದರೆ ಕೇಂದ್ರ ಸರ್ಕಾರವು ಎನ್‌ಡಿಆರ್‌ಎಫ್ ಅಡಿ ಹೆಚ್ಚುವರಿ ಹಣಕಾಸು ನೆರವು ನೀಡುತ್ತದೆ. ಈ ನೆರವು ನೀಡುವ ಪ್ರಕ್ರಿಯೆಗಾಗಿ ಕೇಂದ್ರ ಸರ್ಕಾರವು ಸ್ಪಷ್ಟ ಕ್ರಮಗಳನ್ನು ನಿಗದಿಗೊಳಿಸಿದೆ. ಬೆಳೆ ನಾಶ, ಮನೆಗಳು ಕುಸಿದು ಬಿದ್ದಾಗ, ಜಾನುವಾರುಗಳು ಹಾನಿಯಾದಾಗ, ಮೀನುಗಾರಿಕೆ ಸಂಬಂಧ ಎನ್‌ಡಿಆರ್‌ಎಫ್ ಅಡಿ ಪರಿಹಾರ ನೀಡಲಾಗುತ್ತದೆ. ಇದನ್ನು ಹೊರತು ಪಡಿಸಿ ಮೂಲಸೌಕರ್ಯಕ್ಕೆ ಪರಿಹಾರ ನೀಡಲು ನಿಯಮದಲ್ಲಿ ಅವಕಾಶ ಇಲ್ಲ.
ವಿಕೋಪ ಸಂಭವಿಸಿದ ತಕ್ಷಣ ರಾಜ್ಯ ಸರ್ಕಾರವು ವಿಭಾಗವಾರು ಹಾನಿ ಹಾಗೂ ಅಗತ್ಯವಿರುವ ಹಣಕಾಸಿನ ವಿವರಗಳೊಂದಿಗೆ ವಿಸ್ತೃತವಾದ ಮನವಿಯನ್ನು ಸಿದ್ದಪಡಿಸಬೇಕಾಗುತ್ತದೆ. ಅದನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸಲಿಸಬೇಕಾಗುತ್ತದೆ. ಮನವಿ ಪತ್ರದಲ್ಲಿ ಕೃಷಿ, ಜನ-ಜಾನುವಾರುಗಳ ಸಾವು, ಮನೆ ಕುಸಿತ, ಶಿಕ್ಷಣ ಸಂಸ್ಥೆಗಳಿಗೆ ಹಾನಿ ಸೇರಿದಂತೆ ಇತರೆ ಹಾನಿಯ ಅಂದಾಜು, ಪುನರ್ ನಿರ್ಮಾಣಕ್ಕೆ ಬೇಕಾದ ಮೊತ್ತ ಮತ್ತು ತುರ್ತು ಪರಿಹಾರ ಅಗತ್ಯಗಳ ವಿವರಗಳ ಕುರಿತು ಉಲ್ಲೇಖಿಸಬೇಕಾಗುತ್ತದೆ.
ಕೇಂದ್ರ ಸರ್ಕಾರದಿಂದ ಪರಿಶೀಲನೆ
ರಾಜ್ಯಗಳು ಸಲ್ಲಿಕೆ ಮಾಡುವ ಮನವಿಯನ್ನು ಸ್ವೀಕರಿಸಿದ ಬಳಿಕ ಕೇಂದ್ರ ಸರ್ಕಾರವು ತಕ್ಷಣವೇ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ತಂಡವನ್ನು ರಚಿಸುತ್ತದೆ. ಈ ತಂಡವು ಸ್ಥಳಕ್ಕೆ ತೆರಳಿ ಹಾನಿಯ ನಿಜಸ್ವರೂಪದ ಕುರಿತು ಪರಿಶೀಲನೆ ನಡೆಸುತ್ತದೆ. ರಾಜ್ಯ ಸರ್ಕಾರಗಳು ನೀಡಿರುವ ಅಂದಾಜಿನ ಪ್ರಾಮಾಣಿಕತೆಯನ್ನು ದೃಢಪಡಿಸುತ್ತದೆ. ತಂಡವು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ಅಗತ್ಯ ಸಹಾಯದ ಪ್ರಮಾಣದ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಪರಿಹಾರದ ಶಿಫಾರಸ್ಸು ಮಾಡುತ್ತದೆ. ಬಳಿಕ ಗೃಹ ಕಾರ್ಯದರ್ಶಿ ನೇತೃತ್ವದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ವರದಿಯನ್ನು ಪರಿಶೀಲಿಸಿ, ನಿಧಿ ಹಂಚಿಕೆಗಾಗಿ ಶಿಫಾರಸ್ಸು ಸಿದ್ದಪಡಿಸುತ್ತದೆ. ಇದಾದ ನಂತರ ಉನ್ನತ ಮಟ್ಟದ ಸಮಿತಿ ಕ್ರಮ ಕೈಗೊಳ್ಳಲಿದೆ. ಇದರಲ್ಲಿ ಹಣಕಾಸು ಸಚಿವರು, ಕೃಷಿ ಸಚಿವ, ಗೃಹ ಸಚಿವ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷರು ಸದಸ್ಯರಾಗಿರುತ್ತಾರೆ. ರಾಜ್ಯ ಸರ್ಕಾರಗಳ ಮನವಿಯನ್ನು ಪರಿಗಣಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಎನ್‌ಡಿಆರ್‌ಎಫ್ ಸಹಾಯಧನದ ನಿಗದಿತ ನಿಯಮಾವಳಿಗಳ ಆಧಾರದ ಮೇಲೆ ರಾಜ್ಯಗಳಿಗೆ ನೀಡಬೇಕಾದ ನೆರವಿನ ಪ್ರಮಾಣವನ್ನು ನಿಗದಿಪಡಿಸುತ್ತದೆ. ಬಳಿಕವಷ್ಟೇ ಆ ಮೊತ್ತವನ್ನು ಕೇಂದ್ರದಿಂದ ರಾಜ್ಯಕ್ಕೆ ಹಂಚಲಾಗುತ್ತದೆ.
ಆದರೆ ಈ ನಿಧಿ ಬಿಡುಗಡೆ ಒಂದು ನಿರ್ದಿಷ್ಟ ಷರತ್ತಿಗೆ ಒಳಪಟ್ಟಿರುತ್ತದೆ. ಪ್ರಸ್ತುತ ನಿಯಮಾವಳಿಯ ಪ್ರಕಾರ, ರಾಜ್ಯದ ಎಸ್‌ಡಿಆರ್‌ಎಫ್ ನಿಧಿಯಲ್ಲಿ ಲಭ್ಯವಿರುವ ಮೊತ್ತದ ಶೇ.75 ಮೊದಲು ಬಳಸಬೇಕು. ಉಳಿದ ಅಗತ್ಯಕ್ಕೆ ಮಾತ್ರ ಎನ್‌ಡಿಆರ್‌ಎಫ್‌ನಿಂದ ಹೆಚ್ಚುವರಿ ನೆರವು ನೀಡಲಾಗುತ್ತದೆ. ಈ ವ್ಯವಸ್ಥೆ ರಾಜ್ಯ ನಿಧಿಯ ಸರಿಯಾದ ಬಳಕೆ ಮತ್ತು ಕೇಂದ್ರ ನಿಧಿಯ ಪಾರದರ್ಶಕ ಹಂಚಿಕೆಯನ್ನು ಖಚಿತಪಡಿಸಲು ರೂಪಿಸಲಾಗಿದೆ ಎಂದು ಮೂಲಗಳು ಹೇಳಿವೆ.