ಕೋಮು ಕಳಂಕದಿಂದ ದೂರ ಸರಿಯಲಿದೆಯೇ ಮಂಗಳೂರು? ಸರ್ಕಾರದಿಂದ ಟೆಕ್‌ಪಾರ್ಕ್‌ ಪ್ರಯೋಗ?

ಕರಾವಳಿ ಭಾಗದ ಆರ್ಥಿಕ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ನಡೆಸಿದೆ. 3.285 ಎಕರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣಗೊಳ್ಳಲಿದ್ದು, 11 ಸಾವಿರ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ.

Update: 2025-11-03 01:30 GMT

ಐಟಿ-ಬಿಟಿ ನಗರ ಎಂಬ ಹೆಸರಿಗೆ ಪಾತ್ರವಾಗಿರುವ ಸಿಲಿಕಾನ್‌ ಸಿಟಿ ಬೆಂಗಳೂರು  ದುಬಾರಿ ಜೀವನಮಟ್ಟ, ಹೆಚ್ಚಿದ  ಜನಸಂಖ್ಯೆ ಮತ್ತು ಸಂಚಾರ ದಟ್ಟಣೆಯಿಂದ ಅತಿ ಒತ್ತಡ ಅನುಭವಿಸುತ್ತಿದೆ. ಈ ಒತ್ತಡವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರವು ಮುಂದಾಗಿದ್ದು, ಬೆಂಗಳೂರು ಹೊರಗೆ ಟೆಕ್‌ ಅಭಿವೃದ್ಧಿಗೆ ಮುಂದಾಗಿದೆ.

ಬಿಯಾಂಡ್‌ ಬೆಂಗಳೂರು ಯೋಜನೆಯಡಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಉದ್ಯಮಗಳ ಆರಂಭಕ್ಕೆ ಪ್ರೋತ್ಸಾಹಿಸಲಾಗುತ್ತಿದೆ. ಇದಕ್ಕೆ ಪೂರಕವಾಗುವಂತೆ ಮಂಗಳೂರಿನಲ್ಲಿ ಟೆಕ್‌ಪಾರ್ಕ್‌ನಲ್ಲಿ ನಿರ್ಮಾಣಕ್ಕೆ ಸರ್ಕಾರ  ಮುಂದಾಗಿದೆ. 

ಮಂಗಳೂರಲ್ಲಿ ಟೆಕ್‌ಪಾರ್ಕ್‌ ನಿರ್ಮಿಸುವ ಮೂಲಕ ಸರ್ಕಾರವು ಕರಾವಳಿ ನಗರವನ್ನು ʼಕೋಮು ಕೇಂದ್ರʼ ಎಂಬ ಕಳಂಕವನ್ನು ದೂರ ಮಾಡುವ ಪ್ರಯತ್ನಕೈಗೊಂಡಿದೆ. ಅಲ್ಲದೇ, ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪ್ರದೇಶ ಎಂಬ ಖ್ಯಾತಿಯ ಜತೆಗೆ ಕರಾವಳಿ ಭಾಗದ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಸುಮಾರು ಮೂರೂವರೆ ಎಕರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣಗೊಳ್ಳಲಿದೆ. ಇದರಿಂದ 11 ಸಾವಿರ ಉದ್ಯೋಗಗಳ ಸೃಷ್ಟಿಯ ಗುರಿಯನ್ನು ಹೊಂದಲಾಗಿದೆ. ಮಂಗಳೂರು ಹಿಂದಿನಿಂದಲೂ ಕೈಗಾರಿಕೆ, ಶಿಕ್ಷಣ ಮತ್ತು ವಾಣಿಜ್ಯ ಕೇಂದ್ರವಾಗಿ ಹೆಸರು ಮಾಡಿದ್ದರೂ, ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನ ಆಧಾರಿತ ಹೂಡಿಕೆಗಳ ಕೊರತೆಯಿಂದ ಬೆಳವಣಿಗೆಯ ವೇಗ ಕುಂದಿತ್ತು. ಹೊಸ ಟೆಕ್ ಪಾರ್ಕ್ ಯೋಜನೆಯಿಂದ ಪ್ರಸ್ತುತ ಮೂಡಿರುವ ಭಾವನೆ ಬದಲಾಗುವ ಸಾಧ್ಯತೆ ಇದೆ. 

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಸೇರಿದಂತೆ ಕರಾವಳಿ ಭಾಗವು  ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಉದ್ಯಮಶೀಲತಾ ಮನೋಭಾವ, ವಿಶ್ವ ದರ್ಜೆಯ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳನ್ನು ಹೊಂದಿವೆ. ಆದರೆ ದಶಕಗಳಿಂದ ರಾಜಕಾರಣ ಇಚ್ಚಾಶಕ್ತಿ ನಿರ್ಲಕ್ಷ್ಯ ಮತ್ತು ಕೋಮು ರಾಜಕೀಯದ ಮೇಲೆ ಕೇಂದ್ರೀಕರಿಸಿದ ಕಾರಣ ಅವು ತಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಈ ಮೂರು ಜಿಲ್ಲೆಗಳು ಅತ್ಯಧಿಕ ಸಾಕ್ಷರತಾ ದರಗಳಲ್ಲಿ ಒಂದಾಗಿದ್ದರೂ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಅತಿ ಹೆಚ್ಚು ಶ್ರೇಯಾಂಕವನ್ನು ಹೊಂದಿದ್ದರೂ, ಪ್ರಚೋದನಕಾರಿ ಭಾಷಣಗಳು, ಮೂಲಭೂತ ಹಿಂದೂ-ಮುಸ್ಲಿಂ ಗುಂಪುಗಳ ನಡುವಿನ ಪ್ರತೀಕಾರದ ಹತ್ಯೆಗಳ ಪ್ರವೃತ್ತಿಯಿಂದಾಗಿ ಕೋಮು ಸೂಕ್ಷ್ಮವಾಗಿವೆ. ಇದನ್ನು ದೂರ ಮಾಡಬೇಕಾದ ಅಗತ್ಯತೆ ಇದೆ ಎಂದು ಹೇಳಲಾಗಿದೆ. 

'ದ ಫೆಡರಲ್‌ ಕರ್ನಾಟಕ' ಜತೆ ಸಭಾಧ್ಯಕ್ಷ ಯು.ಟಿ.ಖಾದರ್‌ ಮಾತನಾಡಿ, ಮಂಗಳೂರಿನಲ್ಲಿ ಟೆಕ್‌ ಪಾರ್ಕ್‌ ಪ್ರಾರಂಭವಾಗುವುದರಿಂದ ಕರಾವಳಿ ಭಾಗದ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ. ಮಂಗಳೂರಿನಲ್ಲಿ ವಿಮಾನ ನಿಲ್ದಾಣ, ಬಂದರು ಇರುವುದರಿಂದ ಟೆಕ್‌ಪಾರ್ಕ್‌ಗೆ ಪೂರಕವಾಗಲಿದೆ. ಹೂಡಿಕೆ ಮಾಡಲು ಉದ್ಯಮಿಗಳು ಹೆಚ್ಚಾಗಿ ಬರಲಿದ್ದಾರೆ. ಶೈಕ್ಷಣಿಕ ಸಂಸ್ಥೆಗಳು ಕರಾವಳಿ ಭಾಗದಲ್ಲಿವೆ. ಆದರೆ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಇದರ ನಿಯಂತ್ರಣಕ್ಕೆ ಟೆಕ್‌ಪಾರ್ಕ್‌ ಸಹಕಾರಿಯಾಗಲಿದೆ. ಬೆಂಗಳೂರಿಗೆ ಪರ್ಯಾಯವಾಗಿ ಮಂಗಳೂರನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಲಿದೆ. ಅಲ್ಲದೇ, ಆರ್ಥಿಕತೆಯ ಅಭಿವೃದ್ಧಿಗೆ ಪ್ರತಿ ಜಿಲ್ಲೆಯಲ್ಲಿ ಟೆಕ್‌ಪಾರ್ಕ್‌ಗಳ ಸ್ಥಾಪನೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕಿಯೋನಿಕ್ಸ್‌ ವತಿಯಿಂದ ಯೋಜನೆ ಜಾರಿ

ಟೆಕ್‌ ಪಾರ್ಕ್‌ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿ ಮಾತ್ರವಲ್ಲ, ಸ್ಥಳೀಯ ಮೂಲಸೌಕರ್ಯ, ರಸ್ತೆ, ವಿದ್ಯುತ್, ನೀರು ಮತ್ತು ಸಂಪರ್ಕ ವ್ಯವಸ್ಥೆ ಬಲಗೊಳ್ಳಲಿದೆ. ಯೋಜನೆಯ ಪ್ರಥಮ ಹಂತದ ಕಾಮಗಾರಿ ಮುಂದಿನ ವರ್ಷ ಆರಂಭವಾಗುವ ನಿರೀಕ್ಷೆಯಿದೆ. ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ಅಂದ್ರೇ ಕಿಯೋನಿಕ್ಸ್‌ ಈ ಯೋಜನೆಯ ಟೆಂಡರ್‌ ಅನ್ನು ಆಹ್ವಾನಿಸಿದ್ದು, ಡಿಸೆಂಬರ್‌ನೊಳಗೆ ಟೆಂಡರ್ ಪ್ರಕ್ರಿಯೆ ಅಂತಿಮವಾಗುವ ನಿರೀಕ್ಷೆಯಿದೆ. ಈ ಯೋಜನೆಯನ್ನು ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ತೀರ್ಮಾನಿಸಲಾಗಿದೆ. ಯೋಜನೆ  ಜಾರಿಯಿಂದಾಗಿ ಸುಮಾರು 11 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಮಂಗಳೂರು ಕರ್ನಾಟಕದ ಮತ್ತೊಂದು ಟೆಕ್‌ ಸಿಟಿಯಾಗಲಿದೆ ಎಂಬುದು ಉದ್ಯಮಿಗಳ ಅಭಿಮತವಾಗಿದೆ. 

ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿರುವ ಮಂಗಳೂರಿನ ಪ್ರಶಾಂತ್‌ ಕುಮಾರ್‌ ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿ, ಮಂಗಳೂರಿನಲ್ಲಿ ಟೆರ್ಕ್‌ಪಾರ್ಕ್‌ ಆರಂಭಿಸುತ್ತಿರುವುದು ಸಂತೋಷದ ವಿಷಯ. ಇದರಿಂದ ಉದ್ಯೋಗಕ್ಕಾಗಿ ಬೆಂಗಳೂರಿಗೆ ವಲಸೆ ಬರುವುದು ಕಡಿಮೆಯಾಗಲಿದೆ. ಕರಾವಳಿ ಪ್ರದೇಶದಲ್ಲಿ ವಿದ್ಯಾಸಂಸ್ಥೆಗಳಿವೆ. ಆದರೆ, ಉದ್ಯೋಗ ನೀಡುವ ಸಂಸ್ಥೆಗಳು ತೀರಾ ಕಡಿಮೆ. ಅದರಲ್ಲಿಯೂ ಸಾಫ್ಟ್‌ವೇರ್‌ ಕಂಪನಿಗಳು ಇಲ್ಲ. ಟೆಕ್‌ಪಾರ್ಕ್‌ ಪ್ರಾರಂಭವಾಗುವುದರಿಂದ ಸಾಫ್ಟ್‌ವೇರ್‌ ಕ್ಷೇತ್ರದ ಬೆಳವಣಿಗೆಯಾಗಲಿದೆ. ಇದರಿಂದ  ಐಟಿ-ಬಿಟಿ  ಕಂಪನಿಗಳು ಮಾತ್ರವಲ್ಲದೇ,  ಸ್ಟಾರ್ಟ್‌ಆಪ್‌ ಕಂಪನಿಗಳು ಸಹ ಪ್ರಾರಂಭವಾಗಲಿದೆ. ಆರ್ಥಿಕತೆ ಕೇವಲ ಬೆಂಗಳೂರಿಗೆ ಮಾತ್ರ ಸಿಮೀತವಾಗಿರದೆ ಇತರೆ ಜಿಲ್ಲೆಗಳಿಗೆ ಹಂಚಿಕೆಯಾಗಲು ಸಹಕಾರಿಯಾಗಲಿದೆ. ತಂತ್ರಜ್ಞಾನ, ಐಟಿ ಮತ್ತು ಸ್ಟಾರ್ಟ್‌ಅಪ್ ಕ್ಷೇತ್ರಗಳಲ್ಲಿ ಹೊಸ ಹೂಡಿಕೆಗಳನ್ನು ಆಕರ್ಷಿಸಲು ಸಹಕಾರಿಯಾಗಲಿದ್ದು, ಮಂಗಳೂರು ದೇಶದ ಪ್ರಮುಖ ಟೆಕ್ ನಕ್ಷೆಯಲ್ಲಿ ಸ್ಥಾನ ಪಡೆಯಲಿದೆ ಎಂದು ಹೇಳಿದರು. 

ಉದ್ದೇಶಿತ ಟೆಕ್ ಪಾರ್ಕ್‌ಗಾಗಿ ಮಂಗಳೂರಿನ ದೇರೆಬೈಲ್‌ನಲ್ಲಿರುವ ಬ್ಲೂಬೆರ್ರಿ ಹಿಲ್ಸ್ ರಸ್ತೆಯ ಬಳಿ 3.285 ಎಕರೆ ಜಾಗವನ್ನು ಗುರುತಿಸಲಾಗಿದೆ. ಇಲ್ಲಿ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಕ್ಯಾಂಪಸ್ ಕೂಡ ಇದೆ. ಟೆಕ್‌ಪಾರ್ಕ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳು ಇರಲಿವೆ. ಪಾರ್ಕಿಂಗ್ ಸೇರಿ ಒಟ್ಟು ನಿರ್ಮಾಣ ಪ್ರದೇಶದ ಶೇ.75ರಷ್ಟು ಭಾಗವನ್ನು ವಾಣಿಜ್ಯ ಕಚೇರಿಗಳಿಗಾಗಿ ಮೀಸಲಿಡಲಾಗುವುದು. ಉಳಿದ ಶೇ.25ರಷ್ಟು ಜಾಗದಲ್ಲಿ ಫುಡ್ ಕೋರ್ಟ್‌ಗಳು, ರಿಟೇಲ್ ಅಂಗಡಿಗಳು, ಹೋಟೆಲ್‌ಗಳು ಮತ್ತು ಸರ್ವಿಸ್ ಅಪಾರ್ಟ್‌ಮೆಂಟ್‌ಗಳಂತಹ ಮೂಲಸೌಕರ್ಯಗಳನ್ನು ನಿರ್ಮಿಸಲಾಗುವುದು ಎಂದು ಐಟಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. 

ಯೋಜನೆಯು ಇದು ನುರಿತ ಮಾನವ ಸಂಪನ್ಮೂಲವನ್ನು ಒದಗಿಸಲು ಸಹಕಾರಿಯಾಗಿದೆ. ಪ್ರಮುಖ ಬಂದರು, ತೈಲ ಸಂಸ್ಕರಣಾಗಾರ, ಐದು ರಾಷ್ಟ್ರೀಯ ಹೆದ್ದಾರಿಗಳು, ಎರಡು ರೈಲು ನಿಲ್ದಾಣಗಳು ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಅತ್ಯುತ್ತಮ ಸಂಪರ್ಕ ಜಾಲವನ್ನು ಮಂಗಳೂರು ಹೊಂದಿದೆ. ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ, ಉದ್ದೇಶಿತ ರಿಂಗ್ ರೋಡ್ ಮತ್ತು ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇ ಯೋಜನೆಗಳಿಂದಾಗಿ ಈ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ. ಈ ಎಲ್ಲಾ ಅಂಶಗಳು ಮಂಗಳೂರನ್ನು ಟೆಕ್ ಪಾರ್ಕ್‌ಗೆ ಸೂಕ್ತ ಸ್ಥಳವನ್ನಾಗಿಸಿದೆ.

ತಂತ್ರಜ್ಞಾನ ಕೇಂದ್ರವಾಗಿ ಮಂಗಳೂರು

ಈ ಕುರಿತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಟ್ವಿಟ್‌ ಮಾಡಿ, ಮಂಗಳೂರಿನ ಬ್ಲೂಬೆರ್ರಿ ಹಿಲ್ಸ್‌ನಲ್ಲಿ ಹೊಸ ತಂತ್ರಜ್ಞಾನ ಉದ್ಯಾನವನವನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದೆ. 3.28 ಎಕರೆ ಪ್ರದೇಶದಲ್ಲಿ ಹರಡಿರುವ ಈ 135 ಕೋಟಿ ರೂ. ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು 11,000 ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ರಾಜ್ಯದ ಜಿಎಸ್‌ಡಿಪಿಗೆ ಮಂಗಳೂರು ಸುಮಾರು ಶೇ. 5.5 ರಷ್ಟು ಕೊಡುಗೆ ನೀಡುತ್ತದೆ. ಇದು ಬಲವಾದ ಐಟಿ, ಫಿನ್‌ಟೆಕ್ ಮತ್ತು ಸಾಗರ ತಂತ್ರಜ್ಞಾನ ಕ್ಷೇತ್ರಗಳೊಂದಿಗೆ ನಿರ್ಣಾಯಕ ಉದಯೋನ್ಮುಖ ಬೆಳವಣಿಗೆಯ ಕೇಂದ್ರವಾಗಿದೆ ಎಂದಿದ್ದಾರೆ. 

ಆರೋಗ್ಯ ಸಚಿವ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ದಿನೇಶ್‌ ಗುಂಡೂರಾವ್‌ ಮಾತನಾಡಿ, ಅಭಿವೃದ್ಧಿ ದೃಷ್ಟಿಯಲ್ಲಿ ಹಿಂದಿನ ಆಡಳಿತವನ್ನು ದೂಷಿಸಲು ಯಾವುದೇ ಅರ್ಥವಿಲ್ಲ.  ಈಗ ಸರ್ಕಾರಕ್ಕೆ ಒಂದು ಉತ್ತಮ ಅವಕಾಶ ಸಿಕ್ಕಿದೆ. ಪ್ರವಾಸೋದ್ಯಮ ಸಾಮರ್ಥ್ಯವನ್ನು ಸುಧಾರಿಸುವುದು, ಸಮಗ್ರ ಅಭಿವೃದ್ಧಿ ಕುರಿತು ನೀಲನಕ್ಷೆ ರೂಪಿಸುವುದು, ಹೂಡಿಕೆಗಳು ಮತ್ತು ಯೋಜನೆಗಳನ್ನು ಜಾರಿಗೊಳಿಸುವತ್ತ ಗಮನಹರಿಸಲಾಗಿದೆ. ಹೊಸ ಸೌಲಭ್ಯಗಳು ಮತ್ತು ಮೂಲಸೌಕರ್ಯ ಉತ್ತೇಜನವು ಮಂಗಳೂರನ್ನು ಮುಂದಿನ ಉನ್ನತ ಬೆಳವಣಿಗೆಯ ಕಾರಿಡಾರ್ ಆಗಿ ಪರಿವರ್ತಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.

ಕರ್ನಾಟಕದಲ್ಲಿ 11 ಸಂಸ್ಥೆಗಳ ಹೂಡಿಕೆ

ರಾಜ್ಯ ಸರ್ಕಾರವು ಇತ್ತೀಚೆಗೆ 11 ಸಂಸ್ಥೆಗಳಿಗೆ ಹೂಡಿಕೆ ಮಾಡಲು ಅನುಮತಿ ನೀಡಿದೆ. 27 ಸಾವಿರ ಕೋಟಿ ರೂ.ಗಿಂತ ಹೆಚ್ಚು ಹೂಡಿಕೆಯಾಗಲಿದ್ದು, ಸುಮಾರು 9 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಸ್‌ಎಫ್‌ಎಕ್ಸ್‌ ಇಂಡಿಯಾ ಬರೋಬ್ಬರಿ 9298 ಕೋಟಿ ರೂ. ಹೂಡಿಕೆ ಮಾಡುತ್ತಿದ್ದು, 806 ಉದ್ಯೋಗಗಳು ಸೃಷ್ಟಿಯಾಗಲಿವೆ. ಕ್ಯೂಪಿಐಎಐ ಇಂಡಿಯಾ 1136 ಕೋಟಿ ರೂ. ಹೂಡಿಕೆ ಮಾಡಿ, 200 ಉದ್ಯೋಗಗಳನ್ನು ಸೃಷ್ಟಿಸಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಜೆಎಸ್‌ಡಬ್ಲ್ಯೂನ ಎರಡು ಸಂಸ್ಥೆಗಳು 8,402 ಕೋಟಿ ರೂ. ಹೂಡಿಕೆ ಮಾಡುತ್ತಿದ್ದು, ಇದರಿಂದ 1171 ಉದ್ಯೋಗಗಳು ಸೃಷ್ಟಿಯಾಗಲಿವೆ. ವಿಜಯಪುರದಲ್ಲಿ ರಿಲಾಯನ್ಸ್‌ ಕಂಪನಿಯು 1622 ಕೋಟಿ ರೂ. ಹೂಡಿಕೆ ಮಾಡುತ್ತಿದ್ದು, 1200 ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. 

ಬೆಂಗಳೂರು ನಗರ ಜಿಲ್ಲೆಯಲ್ಲಿ ಸ್ನೈಡರ್‌ ಎಲೆಕ್ಟ್ರಿಕ್‌, ಟೊಯೊಟೋ ಇಂಡಸ್ಟ್ರೀಸ್‌, ತೇಜಸ್‌ ನೆಟ್‌ವರ್ಕ್‌ ಕಂಪನಿಗಳು 3392 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದು, 2412 ಉದ್ಯೋಗಗಳು ಸೃಷ್ಟಿಯಾಗಲಿದೆ. ಚಾಮರಾಜನಗರದಲ್ಲಿ ವಾಯು ಅಸೆಟ್ಸ್‌ 1251 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, 1912 ಉದ್ಯೋಗ ಸೃಷ್ಟಿಯಾಗಲಿದೆ. ಹಾವೇರಿಯಲ್ಲಿ ಗ್ರೇಸಿಮ್‌ 1386 ಕೋಟಿ ರೂಪಾಯಿ ಹೂಡಿದ್ದು, 203 ಉದ್ಯೋಗಗಳು ಮತ್ತು ಶಿವಮೊಗ್ಗದಲ್ಲಿ ಎಚ್‌ಎಸ್‌ಎಸ್‌ ಟೆಕ್ಸ್ಟ್‌ಟೈಲ್‌ 740 ಕೋಟಿ ರೂ. ಹೂಡಿಕೆ ಮಾಡಲಿದ್ದು, 800 ಕೆಲಸಗಳು ಸೃಷ್ಟಿಯಾಗಲಿವೆ ಎಂದು ಹೇಳಲಾಗಿದೆ. 


Tags:    

Similar News