ರೇಣುಕಾಸ್ವಾಮಿ ಕೊಲೆ ಪ್ರಕರಣ | ನಟ ದರ್ಶನ್, ಪವಿತ್ರಾ ಗೌಡ ಪೊಲೀಸ್ ಕಸ್ಟಡಿಗೆ
ಪ್ರಕರಣದ ಮೊದಲನೇ ಆರೋಪಿಯಾಗಿರುವ ದರ್ಶನ್ ಗೆಳತಿ ಪವಿತ್ರಾ ಗೌಡ ಹಾಗೂ ಇತರೆ ಹನ್ನೊಂದು ಮಂದಿ ಆರೋಪಿಗಳೊಂದಿಗೆ ಎರಡನೇ ಆರೋಪಿಯಾಗಿರುವ ದರ್ಶನ್ ಅವರನ್ನು ಪೊಲೀಸರು ಮಂಗಳವಾರ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.;
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್ ಅವರನ್ನು ಪೊಲೀಸ್ ಕಸ್ಟಡಿಗೆ ವಹಿಸಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಪ್ರಕರಣದ ಮೊದಲನೇ ಆರೋಪಿಯಾಗಿರುವ ದರ್ಶನ್ ಗೆಳತಿ ಪವಿತ್ರಾ ಗೌಡ ಹಾಗೂ ಇತರೆ ಹನ್ನೊಂದು ಮಂದಿ ಆರೋಪಿಗಳೊಂದಿಗೆ ಎರಡನೇ ಆರೋಪಿಯಾಗಿರುವ ದರ್ಶನ್ ಅವರನ್ನು ಪೊಲೀಸರು ಮಂಗಳವಾರ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಈ ವೇಳೆ ಪೊಲೀಸರು ಮತ್ತು ದರ್ಶನ್ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರು ಆರೋಪಿಗಳನ್ನು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ವಹಿಸಿ ಆದೇಶ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಳಿಗ್ಗೆ ಪೊಲೀಸರು ನಟ ದರ್ಶನ್ ಅವರನ್ನು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದರು. ಪವಿತ್ರಾ ಗೌಡ ಅವರನ್ನೂ ವಶಕ್ಕೆ ಪಡೆದಿದ್ದ ಪೊಲೀಸರು, ಇಬ್ಬರನ್ನೂ ಬೆಂಗಳೂರಿನ ಅನ್ನಪೂರ್ಣನಗರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು.
ಬಳಿಕ ಎಲ್ಲರನ್ನೂ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಮೆಡಿಕಲ್ ಟೆಸ್ಟ್ ನಡೆಸಿದ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಪ್ರಕರಣದ ಆರೋಪಿಗಳು
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ನಟ ದರ್ಶನ್ ಸೇರಿದಂತೆ 13 ಜನರನ್ನು ಬಂಧಿಸಿದ್ದು, ಬಂಧಿತರೆಲ್ಲರೂ ದರ್ಶನ್ ಅವರ ಆಪ್ತರೇ ಆಗಿದ್ದಾರೆ.
ದರ್ಶನ್ ಗೆಳತಿ ಪವಿತ್ರಾ ಗೌಡ ಬಗ್ಗೆ ಅಶ್ಲೀಲ ಕಾಮೆಂಟ್ ಹಾಕಿದ ಹಿನ್ನೆಲೆಯಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರನ್ನು ಈ ಆರೋಪಿಗಳು ಅಪಹರಿಸಿ, ಬೆಂಗಳೂರಿನ ಪಟ್ಟಣಗೆರೆಯ ಶೆಡ್ ಒಂದರಲ್ಲಿ ಕೂಡಿಹಾಕಿಕೊಂಡು ಮಾರಕಾಸ್ತ್ರಗಳು ಮತ್ತು ಕಾದ ಕಬ್ಬಿಣದ ರಾಡುಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಸಂಗತಿ ವಿಚಾರಣೆಯ ವೇಳೆ ಬಯಲಾಗಿದೆ. ಆರೋಪಿಗಳು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದು, ನಟ ದರ್ಶನ್ ಸೂಚನೆ ಮೇರೆಗೆ ಕೃತ್ಯ ಎಸಗಿರುವುದಾಗಿ ಹೇಳಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.
ಎ 1 ಆರೋಪಿಯಾಗಿ ಪವಿತ್ರಾ ಗೌಡ ಅವರನ್ನು ಹೆಸರಿಸಲಾಗಿದ್ದು, ನಟ ದರ್ಶನ್ ಅವರನ್ನು ಪ್ರಕರಣದ ಎ 2 ಆರೋಪಿ ಎಂದು ಹೆಸರಿಸಲಾಗಿದೆ. ಇನ್ನುಳಿದಂತೆ ಜಯಣ್ಣ ಫಾರ್ಮ್ ಹೌಸ್ನ ವಿನಯ್ ವಿ, ಮೈಸೂರು ರಾಮಕೃಷ್ಣನಗರದ ನಾಗರಾಜು ಆರ್, ಬೆಂಗಳೂರು ಆರ್ಪಿಸಿ ಲೇಔಟ್ನ ಲಕ್ಷ್ಮಣ್ ಎಂ, ಬೆಂಗಳೂರು ಗಿರಿನಗರದ ಪ್ರದೋಶ್ ಎಸ್, ಚನ್ನಪಟ್ಟಣ ಮೂಲದ ಆರ್ ಆರ್ ನಗರ ವಾಸಿ ಪವನ್ ಕೆ, ಆರ್ ಆರ್ ನಗರದ ದೀಪಕ್ ಕುಮಾರ್ ಎಂ, ಮಂಡ್ಯ ಮೂಲದ (ಆರ್ಆರ್ ನಗರ ವಾಸ) ನಂದೀಶ್, ಗಿರಿ ನಗರದ ಕಾರ್ತಿಕ್, ಬನ್ನೇರುಘಟ್ಟದ ನಿಖಿಲ್ ನಾಯಕ್, ಚಿತ್ರದುರ್ಗದ ರಾಘವೇಂದ್ರ ಅಲಿಯಾಸ್ ರಾಘು ಮತ್ತು ಗಿರಿನಗರದ ಕೇಶವ ಮೂರ್ತಿ ಅವರನ್ನು ಬಂಧಿಸಲಾಗಿದೆ.