ರೇಣುಕಾಸ್ವಾಮಿ ಹತ್ಯೆ ಪ್ರಕರಣ | 3900 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ; ದರ್ಶನ್, ಪವಿತ್ರಾ ಗೌಡ ಪಾತ್ರ ದೃಢ
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 3900 ಪುಟಗಳ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ(ಸೆ.4) ನ್ಯಾಯಾಲಯಕ್ಕೆ ಬರೋಬ್ಬರಿ 3900 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಬೆಂಗಳೂರಿನ 24 ನೇ ಎಸಿಎಂಎಂ ನ್ಯಾಯಾಲಯದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಾಗೇಶ್ ಅವರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದರು. ಈ ಆರೋಪ ಪಟ್ಟಿಯಲ್ಲಿ ಪವಿತ್ರಾಗೌಡರನ್ನೇ ಎ 1 ಮತ್ತು ದರ್ಶನ್ ಎ 2 ಆಗಿಯೇ ಮುಂದುವರಿಸಲಾಗಿದೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಭಾಗಿಯಾದ 17 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. 3 ಪ್ರತ್ಯಕ್ಷ ಸಾಕ್ಷಿಗಳು ಇವೆ. ಎಫ್ಎಸ್ಎಲ್ ಮಾತ್ತು ಸಿಎಫ್ಎಸ್ಎಲ್ನಿಂದ 8 ವರದಿಗಳು ಇವೆ. ಈ ಪ್ರಕರಣದಲ್ಲಿ ಒಟ್ಟೂ 231 ಸಾಕ್ಷ್ಯಗಳು ಇವೆ. ಕೊಲೆ ಕೇಸ್ನಲ್ಲಿ ಇನ್ನೂ ತನಿಖೆ ಪೂರ್ಣಗೊಂಡಿಲ್ಲ. ಹೀಗಾಗಿ ಸಿಆರ್ಪಿಸಿ 173(8) ಅಡಿಯಲ್ಲಿ ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಪ್ರಕರಣದ ತ್ವರಿತ ಗತಿಯ ವಿಚಾರಣೆಗಾಗಿ ಪೊಲೀಸರು ವಿಶೇಷ ಕೋರ್ಟ್‌ಗೆ ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ.
231 ಸಾಕ್ಷಿಗಳ ಉಲ್ಲೇಖ
ರೇಣುಕಾಸ್ವಾಮಿ ಪ್ರಕರಣದಲ್ಲಿ ಮೂವರು ಪ್ರತ್ಯಕ್ಷ ಸಾಕ್ಷಿದಾರರು, ಎಫ್ಎಸ್ಎಲ್ ಮತ್ತು ಸಿಎಫ್ಎಸ್ ನ 8 ಸಾಕ್ಷ್ಯಗಳು, ಸೆಕ್ಷನ್ 164 ಅಡಿಯಲ್ಲಿ 27 ಜನರ ಹೇಳಿಕೆಗಳು, ಸೆಕ್ಷನ್ 161 ಅಡಿಯಲ್ಲಿ 70 ಜನರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದರ ಜೊತೆಗೆ 59 ಜನ ಸಮಕ್ಷಮದಲ್ಲಿ ಮಹಜರು ಮಾಡಲಾಗಿದೆ. 8 ಇತರೆ ಸರ್ಕಾರಿ ಅಧಿಕಾರಿಗಳ ಸಾಕ್ಷಿ ಕೂಡ ಉಲ್ಲೇಖ ಮಾಡಲಾಗಿದ್ದು, 56 ಜನ ಪೊಲೀಸರು ಸೇರಿ 231 ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಬಹುತೇಕ ವಸ್ತುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. 28 ಸ್ಥಳದಲ್ಲಿ ಪೊಲೀಸರು ಮಹಜರು ಮಾಡಿದ್ದಾರೆ. 17 ನಿವಾಸಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಲಾಠಿ, ಮರದ ಪೀಸ್, ಸಿಸಿಟಿವಿ ದೃಶ್ಯವನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಶಿರಸ್ತೇದಾರ್ ರಜೆ ಇರುವ ಕಾರಣ ಕೋರ್ಟ್, ಮಂಗಳವಾರ ಚಾರ್ಜ್‌ಶೀಟ್ ಪರಿಶೀಲನೆ ಮಾಡುವುದಿಲ್ಲ ಎಂದು ತಿಳಿದು ಬಂದಿದೆ. ಶಿರಸ್ತೇದಾರ್ ಪರಿಶೀಲನೆ ನಡೆಸಿದ ಬಳಿಕ ಪೊಲೀಸರು ಸಿಸಿ ಮಾಡಲಿದ್ದು, ಎಲ್ಲ ಪ್ರತಿಗಳು ಸಿಸಿಯಾದ ಬಳಿಕ ಆರೋಪಿಗಳಿಗೆ ಚಾರ್ಜ್ ಶೀಟ್ ಪ್ರತಿ ನೀಡಲಾಗುತ್ತದೆ. ಚಾರ್ಜ್ ಶೀಟ್ ಪ್ರತಿ ಆರೋಪಿಗಳಿಗೆ ಸಿಕ್ಕ ಬಳಿಕ ಪ್ರಕರಣ ಸೆಷನ್ಸ್ ಕೋರ್ಟ್‌ಗೆ ವರ್ಗಾವಣೆಯಾಗಲಿದೆ.
ಏನೆಲ್ಲಾ ಸಾಕ್ಷ್ಯ ಸಿಕ್ಕಿದೆ?
ಹಲ್ಲೆ ವೇಳೆ ರೇಣುಕಾಸ್ವಾಮಿ ಜೀವ ಉಳಿಸಿ ಎಂದು ಅಂಗಾಲಾಚಿ ಬೇಡಿಕೊಳ್ಳುವ ಪೋಟೋವನ್ನು ಆರೋಪಿಗಳ ಮೊಬೈಲ್‌ನಿಂದ ರಿಟ್ರೀವ್ ಆಗಿದೆ. ಆರೋಪಿ ವಿನಯ್ ಮೊಬೈಲ್‌ನಿಂದ ಈ ಫೋಟೋ ರಿಟ್ರೀವ್ ಮಾಡಲಾಗಿದೆ. ಅನುಕುಮಾರ್ ಮೊಬೈಲ್ ನಿಂದ ಒಂದು ಮಹತ್ವದ ಆಡಿಯೋವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ರೇಣುಕಾಸ್ವಾಮಿ ಹಲ್ಲೆ ಮಾಡುವಾಗ ಕ್ಲಿಕ್ಕಿಸಿದ್ದ ಹಲವು ಪೋಟೋಗಳು ಸಿಕ್ಕಿವೆ. ಅದನ್ನು ಚಾರ್ಜ್‌ಶೀಟ್‌ನಲ್ಲಿ ಸಲ್ಲಿಕೆ ಮಾಡಲಾಗಿದೆ. ಹೊಡೆಯಲು ಬಳಸಿದ ಲಾಠಿಯ ಮುಂಬದಿ ಪುಡಿ ಪುಡಿಯಾಗಿರೋ ಫೋಟೋ ಕೂಡ ಸಿಕ್ಕಿದೆ. ನೈಲಾನ್ ಹಗ್ಗದ ಫೋಟೊವನ್ನೂ ಕೂಡ ಸಂಗ್ರಹಿಸಲಾಗಿದೆ.
ಒಂದನೇ ಆರೋಪಿ ಪವಿತ್ರಗೌಡ ಮನೆಯಲ್ಲಿ ಸೀಜ್ ಮಾಡಿದ್ದ ಚಪ್ಪಲಿಯ ಫೋಟೊ ಕೂಡ ಆರೋಪ ಪಟ್ಟಿಯಲ್ಲಿದೆ. ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ ನಂದೀಶ್ ನಾಗರಾಜ್ ಮತ್ತು ದರ್ಶನ್ ಅವರು ಸ್ಟೋನಿ ಬ್ರೂಕ್ ಹೊಟೆಲ್ ನಿಂದ ಹೊರ ಬರುವ ಪೋಟೋಗಳು, ಶೆಡ್ ಗೆ ದರ್ಶನ್ ಎಂಟ್ರಿ ಆಗಿರುವ ಸಿಸಿ ಕ್ಯಾಮರಾ ಸ್ನಾಪ್‌ಶಾಟ್ ಗಳು ಚಾರ್ಜ್ ಶೀಟ್ ನಲ್ಲಿ ಸೇರಿವೆ. ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ 39ಗಾಯಗಳಿಗೂ ವೈದ್ಯರು ನೀಡಿರುವ ವಿವರವಾದ ವಿವರಣೆಯನ್ನು ದಾಖಲಿಸಲಾಗಿದೆ.
ಪೊಲೀಸ್ ಆಯಕ್ತರು ಹೇಳಿದ್ದೇನು?
ಪ್ರಕರಣದ ತನಿಖೆ ಸಂಪೂರ್ಣ ಮುಗಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗಿದೆ. ಆದರೆ ಕೆಲವೊಂದು ವರದಿಗಳು ಬರಲು ಬಾಕಿಯಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಮತ್ತು ಗ್ಯಾಂಗ್ ವಿರುದ್ಧದ ದೋಷಾರೋಪಣ ಪಟ್ಟಿಯು ಒಟ್ಟು 231 ಸಾಕ್ಷಿದಾರರನ್ನು ಒಳಗೊಂಡಂತೆ ಒಟ್ಟು 3991 ಪುಟಗಳುಳ್ಳ 9 ಸಂಪುಟಗಳ 10 ಕಡತಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ. ಸಿಆರ್ಪಿಸಿ 173(8) ಅಡಿಯಲ್ಲಿ ಪ್ರಿಲಿಮಿನರಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಸಿಎಫ್ಎಸ್ಎಲ್ ವರದಿ ಬರಲು ಬಾಕಿ ಇದ್ದು ಮತ್ತಷ್ಟು ಮಾಹಿತಿಯೊಂದಿಗೆ ಪೂರ್ಣ ಚಾರ್ಜ್ ಶೀಟ್ ಅನ್ನು 178 (9) ಸಿಆರ್ ಪಿ ಸಿ ಅಡಿ ಸಲ್ಲಿಕೆ ಮಾಡಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ನಗರ ಆಯುಕ್ತ ದಯಾನಂದ್ ಮಾಹಿತಿ ನೀಡಿದ್ದಾರೆ.