ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ: ಎಫ್‌ಎಸ್‌ಎಲ್ ವರದಿ
ರೇಣುಕಾಸ್ವಾಮಿ ಕೊಲೆಯಲ್ಲಿ ನಟ ದರ್ಶನ್ ಭಾಗಿಯಾಗಿರುವ ಸಂಬಂಧ ಎಫ್ ಎಸ್ ಎಲ್ ವರದಿ ಬಂದಿದ್ದು, ಘಟನೆ ನಡೆದ ದಿನ ದರ್ಶನ್ ಧರಿಸಿದ್ದ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಧೃಢಪಟ್ಟಿವೆ.;
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಬೆಂಗಳೂರು ಪೊಲೀಸರಿಗೆ ಮಹತ್ವದ ಸಾಕ್ಷ್ಯವೊಂದು ಸಿಕ್ಕಿದ್ದು, ನಟ ದರ್ಶನ್‌ಗೆ ತೀವ್ರ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಿದೆ.
ಘಟನೆ ನಡೆದಾಗ ದರ್ಶನ್ ಸ್ಥಳದಲ್ಲಿಯೇ ಇದ್ದರು ಎಂಬುದನ್ನು ಖಾತರಿಪಡಿಸುವ ಮಹತ್ವದ ಸಾಕ್ಷಿಯಾಗಿ ರೇಣುಕಾಸ್ವಾಮಿಯ ರಕ್ತದ ಕಲೆಗಳು ದರ್ಶನ್ ಅಂದು ಧರಿಸಿದ್ದ ಬಟ್ಟೆಯಲ್ಲಿ ಪತ್ತೆಯಾಗಿದ್ದು, ಇದೀಗ ಎಫ್‌ಎಸ್‌ಎಲ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆ ಮೂಲಕ ಪ್ರಕರಣದಲ್ಲಿ ನಟ ದರ್ಶನ್ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಪೊಲೀಸರ ಈವರೆಗಿನ ತನಿಖೆಗೆ ದೊಡ್ಡ ಸಾಕ್ಷ್ಯ ಸಿಕ್ಕಂತಾಗಿದೆ.
ಮಹಜರು ವೇಳೆ ದರ್ಶನ್ ಮನೆಯಿಂದ ಅವರ ನೀಲಿ ಬಣ್ಣ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ರೌಂಡ್ ನೆಕ್ ಶರ್ಟ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಟ್ಟೆಗಳಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದವು. ಇವುಗಳು ರೇಣುಕಾಸ್ವಾಮಿಯ ದೇಹದ ರಕ್ತ ಎಂಬುದು ಎಫ್ ಎಸ್ ಎಲ್ ವರದಿಯಲ್ಲಿ ಧೃಡಪಟ್ಟಿದೆ. ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ಭಾಗಿಯಾಗಿದ್ದ ಎನ್ನುವುದಕ್ಕೆ ಇದು ಅತ್ಯಂತ ಮಹತ್ವಪೂರ್ಣ ಸಾಕ್ಷ್ಯ ಎನ್ನಲಾಗಿದೆ. ಎಫ್‌ಎಸ್‌ಎಲ್ ತಂಡದವರು ಜಪ್ತಿ ಮಾಡಿದ್ದ ಇನ್ನೂ ಹಲವು ನಿರ್ಣಾಯಕ ಸಾಕ್ಷ್ಯಗಳ ವರದಿ ಬರುವುದು ಬಾಕಿ ಇದೆ.
ದರ್ಶನ್ ಗೆಳತಿ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದ ಎಂಬ ಕಾರಣಕ್ಕೆ ದರ್ಶನ್ ಗ್ಯಾಂಗ್ ಆತನನ್ನು ಬೆಂಗಳೂರಿಗೆ ಕರೆತಂದು, ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದೆ ಎಂಬ ಆರೋಪವಿದೆ. ಈ ಕುರಿತಂತೆ ದರ್ಶನ್, ಪವಿತ್ರಾಗೌಡ ಸೇರಿದಂತೆ ಒಟ್ಟು 17 ಮಂದಿ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ತನಿಖೆಯ ಪ್ರತಿ ಹಂತದಲ್ಲೂ ದರ್ಶನ್ ವಿರುದ್ಧದ ಸಾಕ್ಷ್ಯಗಳ ಬಲಗೊಳ್ಳುತ್ತಿವೆ.