ಬೆಂಗಳೂರಿನ ಖ್ಯಾತ ವನ್ಯಜೀವಿ ಛಾಯಾಗ್ರಾಹಕಿ ವಸುಧಾ ಚಕ್ರವರ್ತಿ ಕೊಲ್ಲೂರಿನಲ್ಲಿ ನಿಗೂಢ ಸಾವು

ಬೆಂಗಳೂರಿನ ತ್ಯಾಗರಾಜನಗರದ ನಿವಾಸಿಯಾಗಿದ್ದ ವಸುಧಾ, ಆಗಸ್ಟ್ 27ರಂದು ತಮ್ಮ ಕಾರಿನಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದರು. ಅವರ ತಾಯಿ ವಿಮಲಾ ಅವರ ಪ್ರಕಾರ, ದೇವಸ್ಥಾನದ ಬಳಿಯ ಅತಿಥಿಗೃಹದ ಮುಂದೆ ಕಾರನ್ನು ನಿಲ್ಲಿಸಿ, ದೇವಸ್ಥಾನಕ್ಕೆ ಭೇಟಿ ನೀಡಿದ್ದರು.;

Update: 2025-09-03 04:43 GMT
Click the Play button to listen to article

ಭಾರತದ ಪ್ರಥಮ ಮಹಿಳಾ ವನ್ಯಜೀವಿ ಛಾಯಾಗ್ರಾಹಕರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ, ಬೆಂಗಳೂರು ಮೂಲದ ವಸುಧಾ ಚಕ್ರವರ್ತಿ (45), ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ

ಆಗಸ್ಟ್ 27ರಂದು ಬೆಂಗಳೂರಿನಿಂದ ಕೊಲ್ಲೂರಿಗೆ ಬಂದಿದ್ದ ವಸುಧಾ, ನಂತರ ನಾಪತ್ತೆಯಾಗಿದ್ದರು. ಆಗಸ್ಟ್ 30ರಂದು, ಶನಿವಾರ, ನದಿಗೆ ಜಿಗಿದಿದ್ದಾರೆ ಎನ್ನಲಾದ ಸ್ಥಳದಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.

ಬೆಂಗಳೂರಿನ ತ್ಯಾಗರಾಜನಗರದ ನಿವಾಸಿಯಾಗಿದ್ದ ವಸುಧಾ, ಆಗಸ್ಟ್ 27ರಂದು ತಮ್ಮ ಕಾರಿನಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದರು. ಅವರ ತಾಯಿ ವಿಮಲಾ ಅವರ ಪ್ರಕಾರ, ದೇವಸ್ಥಾನದ ಬಳಿಯ ಅತಿಥಿಗೃಹದ ಮುಂದೆ ಕಾರನ್ನು ನಿಲ್ಲಿಸಿ, ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನಂತರ, ತಾಯಿ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ. ಮರುದಿನ (ಆಗಸ್ಟ್ 28), ವಿಮಲಾ ಅವರು ಕೊಲ್ಲೂರಿಗೆ ಬಂದು ವಿಚಾರಿಸಿದಾಗ, ದೇವಸ್ಥಾನದ ಸಿಬ್ಬಂದಿ "ವಸುಧಾ ಅವರು ಅಸಮಾಧಾನಗೊಂಡಂತೆ ಕಾಣುತ್ತಿದ್ದರು" ಎಂದು ತಿಳಿಸಿದ್ದಾರೆ.

ಮಗಳು ಪತ್ತೆಯಾಗದಿದ್ದಾಗ, ವಿಮಲಾ ಅವರು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು, ಬೈಂದೂರಿನ ಅಗ್ನಿಶಾಮಕ ದಳ ಮತ್ತು ನುರಿತ ಈಜುಗಾರ ಈಶ್ವರ್ ಮಲ್ಪೆ ಅವರ ತಂಡದೊಂದಿಗೆ ಶೋಧ ಕಾರ್ಯ ನಡೆಸಿದಾಗ, ಸ್ಥಳೀಯರು "ಮಹಿಳೆಯೊಬ್ಬರು ನದಿಗೆ ಹಾರಿದ್ದಾರೆ" ಎಂದು ಮಾಹಿತಿ ನೀಡಿದ್ದರು. ತೀವ್ರ ಶೋಧದ ನಂತರ, ಪೊದೆಯೊಂದರಲ್ಲಿ ಸಿಲುಕಿದ್ದ ಅವರ ಮೃತದೇಹ ಪತ್ತೆಯಾಗಿತ್ತು.

ಯಾರು ಈ ವಸುಧಾ ಚಕ್ರವರ್ತಿ?

ವಸುಧಾ ಚಕ್ರವರ್ತಿ, ಪುರುಷ ಪ್ರಧಾನವಾಗಿದ್ದ ವನ್ಯಜೀವಿ ಛಾಯಾಗ್ರಹಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಧೈರ್ಯವಂತೆ. ಉತ್ತಮ ಸಂಬಳದ ಬ್ಯಾಂಕಿಂಗ್ ಉದ್ಯೋಗವನ್ನು ತೊರೆದು, ಛಾಯಾಗ್ರಹಣದ ಮೇಲಿನ ಪ್ರೀತಿಯಿಂದ ನೀಲಗಿರಿ ಬೆಟ್ಟಗಳಿಗೆ ತೆರಳಿದ್ದರು. ಅಲ್ಲಿನ ಕಾಡಿನಂಚಿನಲ್ಲಿರುವ ಕಲ್ಹಟ್ಟಿ ಎಸ್ಟೇಟ್‌ನಲ್ಲಿ ಹಲವು ವರ್ಷಗಳ ಕಾಲ ವಾಸಿಸುತ್ತಾ, ವನ್ಯಜೀವಿಗಳ ಅಪರೂಪದ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದರು. ಅವರ ಈ ನಿರ್ಧಾರಕ್ಕೆ ಆರಂಭದಲ್ಲಿ ಕುಟುಂಬದ ವಿರೋಧವಿತ್ತು.

ಕೋಲ್ಕತ್ತಾದಲ್ಲಿ "ಕ್ಲೌಡೆಡ್ ಲೆಪರ್ಡ್" (ಮಂಜು ಚಿರತೆ) ಕುರಿತ ಸಾಕ್ಷ್ಯಚಿತ್ರದಿಂದ ಪ್ರೇರಿತರಾಗಿ, ಅವರು ತಮ್ಮ ಜೀವನದ ದಿಕ್ಕನ್ನೇ ಬದಲಿಸಿಕೊಂಡಿದ್ದರು. "ಅವರ ಕೈಯಲ್ಲಿ ಕ್ಯಾಮೆರಾ ಇದ್ದರೆ, ಅವರು ತಮ್ಮದೇ ಲೋಕದಲ್ಲಿರುತ್ತಿದ್ದರು. ವನ್ಯಜೀವಿಗಳ ಬಗ್ಗೆ ಅವರಿಗಿದ್ದ ನಿರ್ಭಯತೆ ಅದ್ಭುತವಾಗಿತ್ತು" ಎಂದು ಅವರ ಸ್ನೇಹಿತರೊಬ್ಬರು ಸ್ಮರಿಸುತ್ತಾರೆ.

ವಸುಧಾ ಅವರು ಕೇವಲ ಛಾಯಾಗ್ರಾಹಕಿಯಾಗಿರಲಿಲ್ಲ, ನೀಲಗಿರಿ ಪ್ರದೇಶದ ಆದಿವಾಸಿ ಸಮುದಾಯಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಊಟಿ, ಮಸಿನಗುಡಿ, ಮುದುಮಲೈ ಮತ್ತು ಬಂಡೀಪುರದ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಶ್ರಮಿಸಿದ್ದರು.

ವೃತ್ತಿಜೀವನದ ಆರಂಭದಲ್ಲಿ ಆರ್ಥಿಕ ಸಂಕಷ್ಟ ಎದುರಾದಾಗ, ಅವರು ಊಟಿಯಲ್ಲಿ ಪ್ರವಾಸಿಗರಿಗೆ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಿದ್ದರು ಮತ್ತು ಮಾಡೆಲಿಂಗ್ ಛಾಯಾಗ್ರಹಣದಂತಹ ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದರು. ಮಲಯಾಳಂನ ಖ್ಯಾತ ನಿರ್ದೇಶಕ ವಿ.ಕೆ. ಪ್ರಕಾಶ್ ಅವರೊಂದಿಗೂ ಕೆಲಸ ಮಾಡಿದ್ದರು.

ವಸುಧಾ ಅವರ ಅಕಾಲಿಕ ಮತ್ತು ನಿಗೂಢ ಸಾವು, ವನ್ಯಜೀವಿ ಛಾಯಾಗ್ರಹಣ ಮತ್ತು ಸಂರಕ್ಷಣಾ ವಲಯದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ.

Tags:    

Similar News