ಆರ್​ಎಸ್​ಎಸ್​​ನ ಅನಧಿಕೃತ ಬ್ಯಾನರ್ ತೆಗಿಸಿದ್ದು ತಪ್ಪಲ್ಲ; ಪ್ರಿಯಾಂಕ್​ ಖರ್ಗೆ ಸ್ಪಷ್ಟನೆ

ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು, "ಅವರ ಬಗ್ಗೆ ಅವರಿಗೇ ಗೌರವವಿಲ್ಲ, ಇನ್ನು ನನಗೇಕೆ ಇರಬೇಕು? ಮೊದಲು ಅನುಮತಿ ಇಲ್ಲದೆ ಬ್ಯಾನರ್ ಯಾಕೆ ಹಾಕಿದರು ಎಂದು ಅವರು ಉತ್ತರಿಸಲಿ," ಎಂದರು.

Update: 2025-10-18 08:58 GMT

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಬ್ಯಾನರ್ ತೆರವುಗೊಳಿಸಿದ ವಿಚಾರ ರಾಜ್ಯ ರಾಜಕೀಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ತಮಗೆ ಬಿಜೆಪಿ ಅಭ್ಯರ್ಥಿಯಿಂದ ನೇರವಾಗಿ ಜೀವ ಬೆದರಿಕೆ ಬಂದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಾನೂನು ಪಾಲಿಸುವಂತೆ ಹೇಳಿದ್ದಕ್ಕೆ ಮನೆಗೆ ನುಗ್ಗಿ ಹೊಡೆಯುವುದಾಗಿ ಬೆದರಿಸಿದ್ದಾರೆ, ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ದೂರು ನೀಡುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆರ್‌ಎಸ್‌ಎಸ್ ಬ್ಯಾನರ್, ಧ್ವಜ ಅಥವಾ ಪಥಸಂಚಲನ ಯಾವುದೇ ಇರಲಿ, ಅದಕ್ಕೆ ಬಿಜೆಪಿಯವರು ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆದಿದ್ದಾರಾ?" ಎಂದು ಖಾರವಾಗಿ ಪ್ರಶ್ನಿಸಿದರು. "ನನ್ನ ಬ್ಯಾನರ್ ಅನ್ನು ಅನಧಿಕೃತವಾಗಿ ಹಾಕಿದ್ದಾಗ ನಗರ ಪಾಲಿಕೆ ಆಯುಕ್ತರು ನನಗೇ ದಂಡ ವಿಧಿಸಿದ್ದರು. ಅವರೂ ಕೂಡ ನಿಯಮಾನುಸಾರ ಅನುಮತಿ ತೆಗೆದುಕೊಳ್ಳಲಿ, ನಿಗದಿತ ಶುಲ್ಕ ಕಟ್ಟಲಿ. ಪ್ರತಿಯೊಂದಕ್ಕೂ ಒಂದು ನಿಯಮ ಇರುತ್ತದೆ ಅಲ್ಲವೇ?" ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಅನುಮತಿ ಕೇಳಲಿ

"ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಇನ್ನೂ ಅನುಮತಿ ಪಡೆದಿಲ್ಲ. ಕೇವಲ ಮಾಹಿತಿ ನೀಡಿ, ಸುಮ್ಮನೆ ಒಂದು ಪತ್ರ ಕೊಟ್ಟಿದ್ದಾರೆ. ಮಾಹಿತಿ ಕೊಡುವುದಕ್ಕೂ, ಅನುಮತಿ ಕೇಳುವುದಕ್ಕೂ ಬಹಳ ವ್ಯತ್ಯಾಸವಿದೆ. ನಮ್ಮ ನೋಂದಣಿ ಸಂಖ್ಯೆ ಇಷ್ಟು, ಇಷ್ಟು ಜನರು ಸೇರುತ್ತಾರೆ ಎಂದು ನಿಖರ ಮಾಹಿತಿ ನೀಡಬೇಕು. ಕಾರ್ಯಕ್ರಮದ ವೇಳೆ ಏನಾದರೂ ಅಹಿತಕರ ಘಟನೆ ನಡೆದರೆ ನಾವೇ ಹೊಣೆಗಾರರು ಎಂದು ಒಪ್ಪಿಕೊಂಡು ಅನುಮತಿ ಪಡೆಯಬೇಕು," ಎಂದು ಅವರು ಆಗ್ರಹಿಸಿದರು.

"ಆರ್‌ಎಸ್‌ಎಸ್‌ ಧ್ವಜವೇನು ರಾಷ್ಟ್ರಧ್ವಜವೇ?" ಎಂದು ಪ್ರಶ್ನಿಸಿದ ಖರ್ಗೆ, "ಮೊನ್ನೆ ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ನನಗೆ ಫೋನ್ ಮಾಡಿ ನೇರವಾಗಿ ಬೆದರಿಕೆ ಹಾಕಿದ್ದಾರೆ. 'ಆರ್‌ಎಸ್‌ಎಸ್‌ನವರು ಕಟ್ಟರ್ ಪಂಥೀಯರು, ದೇಶಭಕ್ತರು, ಮನೆಗೆ ನುಗ್ಗಿ ಹೊಡೆಯುತ್ತೇವೆ' ಎಂದೇ ಹೇಳಿದ್ದಾರೆ. ಇದನ್ನು ನಾವು ಸಹಿಸಬೇಕಾ? ಇದರ ವಿರುದ್ಧ ನಾನು ಡಿಜಿಪಿ ಮತ್ತು ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇನೆ. ಕಾನೂನು ಪಾಲನೆ ಮಾಡಿ ಎಂದರೆ ಅವರಿಗೆ ಯಾಕೆ ಬೇಸರವಾಗುತ್ತದೆ? ನಾನು ಜನರಿಂದ ಆಯ್ಕೆಯಾದ ಪ್ರತಿನಿಧಿ. ಅವರು ಸವಾಲು ಹಾಕುತ್ತಿರುವುದು ನನಗಲ್ಲ, ರಾಜ್ಯದ ಕಾನೂನಿಗೆ. ಹೀಗೆ ಎಲ್ಲರೂ ಕಾನೂನು ಪಾಲಿಸುವುದಿಲ್ಲ ಎಂದರೆ ದೇಶದ ಗತಿ ಏನಾಗಬೇಕು?" ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನುಮತಿ ಇಲ್ಲದ ಕಾರಣವೇ ನಾವು ಎಲ್ಲವನ್ನೂ ತೆರವು ಮಾಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಆರ್‌ಎಸ್‌ಎಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಕ್ಕೆ ಬಿಜೆಪಿ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನನ್ನ ಮನೆ ಮುಂದೆಯೂ ಪ್ರತಿಭಟನೆ ಮಾಡಿಲ್ಲವೇ? ನನಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದು ತಪ್ಪು ಎಂದು ಅವರಲ್ಲಿ ಯಾರಾದರೂ ಹೇಳಿದ್ದಾರಾ?" ಎಂದು ಮರುಪ್ರಶ್ನಿಸಿದರು. ಇನ್ನು, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು, "ಅವರ ಬಗ್ಗೆ ಅವರಿಗೇ ಗೌರವವಿಲ್ಲ, ಇನ್ನು ನನಗೇಕೆ ಇರಬೇಕು? ಮೊದಲು ಅನುಮತಿ ಇಲ್ಲದೆ ಬ್ಯಾನರ್ ಯಾಕೆ ಹಾಕಿದರು ಎಂದು ಅವರು ಉತ್ತರಿಸಲಿ," ಎಂದರು.

ಎಲ್ಲರಿಗೂ ಒಂದೇ ಕಾನೂನು

ರಸ್ತೆ ಮೇಲೆ ನಮಾಜ್ ಮಾಡುವುದನ್ನು ನಿಷೇಧಿಸುವಂತೆ ಶಾಸಕ ಯತ್ನಾಳ್ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿರುವ ವಿಚಾರವಾಗಿ, "ನಾವು ಹೇಳುವುದೂ ಅದನ್ನೇ. ನಮಗಿರುವ ನಿಯಮವೇ ಎಲ್ಲರಿಗೂ ಅನ್ವಯವಾಗುತ್ತದೆ. ಇದರಲ್ಲಿ ಧರ್ಮದ ಪ್ರಶ್ನೆ ಬರುವುದಿಲ್ಲ. ಕಾಂಗ್ರೆಸ್, ಬಿಜೆಪಿ, ಆರ್‌ಎಸ್‌ಎಸ್, ಎಸ್‌ಡಿಪಿಐ, ಪಿಎಫ್‌ಐ ಸೇರಿದಂತೆ ದೇಶದ ಎಲ್ಲಾ ಸಂಘಟನೆಗಳಿಗೂ ಒಂದೇ ಕಾನೂನು ಇರುತ್ತದೆ. ಎಲ್ಲರೂ ಕಾನೂನು ಪಾಲನೆ ಮಾಡುತ್ತಾರೆ, ಆದರೆ ಕೆಲವರು ಮಾತ್ರ ಯಾಕೆ ಮಾಡುವುದಿಲ್ಲ?" ಎಂದು ಖರ್ಗೆ ಪ್ರಶ್ನಿಸಿದರು.

ಇದೇ ವೇಳೆ, ಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿರುವ ಕುರಿತ ರಾಜಕೀಯ ವದಂತಿಗಳಿಗೆ ತೆರೆ ಎಳೆದ ಅವರು, "ಪಿಸಿಸಿ ಅಧ್ಯಕ್ಷರು ಎಐಸಿಸಿ ಅಧ್ಯಕ್ಷರನ್ನು ಭೇಟಿಯಾಗದೇ ಇನ್ಯಾರನ್ನು ಭೇಟಿಯಾಗಬೇಕು? ಮೋಹನ್ ಭಾಗವತ್ ಅವರನ್ನಾ? ನಮ್ಮ ಪಕ್ಷದ ಅಧ್ಯಕ್ಷರು ಬೆಂಗಳೂರಿಗೆ ಬಂದಾಗಲೆಲ್ಲಾ ಭೇಟಿಯಾಗುವುದು ಸಹಜ. ಇದಕ್ಕೆಲ್ಲಾ ಸಂಪುಟ ಪುನಾರಚನೆಯ ಬಣ್ಣ ಕಟ್ಟುವುದು ಸರಿಯಲ್ಲ," ಎಂದು ಸ್ಪಷ್ಟಪಡಿಸಿದರು. 

Tags:    

Similar News