ಜಿಎಸ್‌ಟಿ ಸುಧಾರಣೆಯಿಂದ ರಾಜ್ಯದ 8.5 ಲಕ್ಷಕ್ಕೂ ಹೆಚ್ಚು ಎಂಎಸ್‌ಎಂಇಗಳಿಗೆ ಅನುಕೂಲ
ಸುಲಭ ನೋಂದಣಿ, ಅನುಸರಣೆ ಮತ್ತು ಮರುಪಾವತಿಗಳ ಜತೆಗೆ ಕಚ್ಚಾ ವಸ್ತುಗಳನ್ನು ಅಗ್ಗವಾಗಿಸಲು ಸಹಕಾರಿಯಾಗಲಿದೆ. ಎಂಎಸ್‌ಎಂಇಗಳ ಉತ್ಪನ್ನಗಳ ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.;
ದೇಶದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳಿಗೆ ನಾಂದಿ ಹಾಡಿರುವ ಕೇಂದ್ರ ಸರ್ಕಾರ, ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಐತಿಹಾಸಿಕ ತೀರ್ಮಾನಗಳನ್ನು ಕೈಗೊಂಡು ಜಿಎಸ್‌ಟಿ ದರಗಳನ್ನು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಸಭೆಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ವಲಯಕ್ಕೆ ಸಾಕಷ್ಟು ಉತ್ತೇಜನವನ್ನು ನೀಡುತ್ತದೆ. ಕೇಂದ್ರದ ಸುಧಾರಣೆಗಳಿಂದ ದೇಶದ 66 ಮಿಲಿಯನ್ ಎಂಎಸ್‌ಎಂಇಗಳಿಗೆ ಪ್ರಯೋಜನವಾಗಲಿದೆ. ಇನ್ನು, ರಾಜ್ಯದಲ್ಲಿ 8.5 ಲಕ್ಷಕ್ಕೂ ಹೆಚ್ಚು ಎಂಎಸ್‌ಎಂಇ ಗಳನ್ನು ಹೊಂದಿದ್ದು, 55 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಲಭಿಸಿದೆ. ರಾಜ್ಯದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದೆ. ಆಹಾರ ಸಂಸ್ಕರಣೆ, ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಸೇರಿದಂತೆ ಪ್ರಮುಖ ವಲಯಗಳನ್ನು ಹೊಂದಿದೆ. ಎಂಎಎಸ್‌ಎಂಇಗಳು ಮತ್ತು ಸಣ್ಣ ವ್ಯಾಪಾರಿಗಳನ್ನು ಬಲಪಡಿಸಲು ಸಹಕಾರಿಯಾಗಲಿದೆ. ಸ್ಲ್ಯಾಬ್ ರಚನೆಯನ್ನು ಸರಳೀಕರಿಸಿರುವುದರಿಂದ ಬೆಲೆ ನಿಗದಿ, ದಾಸ್ತಾನು ಸುಗಮಗೊಳಿಸುತ್ತದೆ.
ಸುಲಭ ನೋಂದಣಿ, ಅನುಸರಣೆ ಮತ್ತು ಮರುಪಾವತಿಗಳ ಜತೆಗೆ ಕಚ್ಚಾ ವಸ್ತುಗಳನ್ನು ಅಗ್ಗವಾಗಿಸಲು ಸಹಕಾರಿಯಾಗಲಿದೆ. ದಿನನಿತ್ಯದ ಬಳಕೆಯ ಟೂತ್‍ಪೇಸ್ಟ್, ಶಾಂಪೂ, ಸೋಪ್‍ಗಳು, ಅಡುಗೆಮನೆ ವಸ್ತುಗಳು, ಬೈಸಿಕಲ್‍ಗಳು ಮತ್ತು ಕೆಲವು ಆಹಾರ ಪದಾರ್ಥಗಳಂತಹ ಅಗತ್ಯ ದೈನಂದಿನ ಬಳಕೆಯ ವಸ್ತುಗಳ ಮೇಲಿನ ಶೇ.5ಕ್ಕೆ ಕಡಿತಗೊಳಿಸುವುದರಿಂದ ಗ್ರಾಹಕರಿಗೆ ಉಳಿತಾಯ ಮಾಡಿದಂತಾಗುತ್ತದೆ. ಎಂಎಸ್‌ಎಂಇಗಳ ಉತ್ಪನ್ನಗಳ ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.
ಜಿಎಸ್‌ಟಿ ನೋಂದಣಿಯ ಸರಳೀಕರಣವು ಹೆಚ್ಚಿನ ವ್ಯವಹಾರಗಳು ತೆರಿಗೆ ವ್ಯಾಪ್ತಿಗೆ ಸೇರಲು ಪ್ರೋತ್ಸಾಹಿಸಿದಂತಾಗುತ್ತದೆ. ಹೊಸ ಕಾರ್ಯವಿಧಾನವು ಮೂರು ಕೆಲಸದ ದಿನಗಳಲ್ಲಿ ನೋಂದಣಿ ಮಾಡಲು ಸಾಧ್ಯವಾಗಲಿದೆ. ಇ-ಕಾಮರ್ಸ್ ಆಪರೇಟರ್‌ಗಳ ಮೂಲಕ ಪೂರೈಕೆದಾರರಾಗಿರುವ ಸಣ್ಣ ವ್ಯವಹಾರಗಳನ್ನು ಸುಲಭವಾಗಿ ನೋಂದಾಯಿಸಲು ಅನುವು ಮಾಡಿಕೊಡುತ್ತದೆ.
ತೆರಿಗೆ ಕಡಿಮೆಯಾಗಿರುವುದರಿಂದ ಮರುಪಾವತಿ ಮಾಡುವ ಕಾರ್ಯದಲ್ಲಿ ಎಂಎಸ್‌ಎಂಇ ಸಂಸ್ಥೆಗಳಿಗೆ ಬಂಡವಾಳ ಹೆಚ್ಚಿಸಲಿದೆ. ಇದು ದೀರ್ಘಕಾಲದ ಬೇಡಿಕೆಯನ್ನು ಪೂರೈಸಿದಂತಾಗುತ್ತದೆ. ಹಿಂತಿರುಗಿಸುವಿಕೆಯ ಮೇಲಿನ ಜಿಎಸ್‌ಟಿ ತಿದ್ದುಪಡಿ, ಕ್ಲೇಮ್ ಮೊತ್ತದ ಶೇ.90ರಷ್ಟು ಮರುಪಾವತಿಯನ್ನು ನೀಡುವುದು, ಅನೇಕ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಿದೆ. ಕರಕುಶಲ ವಸ್ತುಗಳು ಮತ್ತು ಚರ್ಮದ ಸರಕುಗಳ ಮೇಲಿನ ಜಿಎಸ್‌ಟಿ ಕಡಿತವು ಇತರ ವಿಷಯಗಳ ಜತೆಗೆ ದೇಶದ ಕುಶಲಕರ್ಮಿಗಳಿಗೆ ಬೇಡಿಕೆಯನ್ನು ಹೆಚ್ಚಿಸಲಿದೆ ಎನ್ನುವುದು ಎಂಎಸ್‌ಎಂಇ ಉದ್ಯಮಿಗಳ ಅಭಿಪ್ರಾಯವಾಗಿದೆ.
ರಾಜ್ಯದಲ್ಲಿನ ಪ್ರಮುಖ ಎಂಎಸ್‌ಎಂಇಗಳು
ರಾಜ್ಯದಲ್ಲಿ 8.5 ಲಕ್ಷಕ್ಕೂ ಹೆಚ್ಚು ಎಂಎಸ್‌ಎಂಇ ಗಳನ್ನು ಹೊಂದಿದ್ದು, ಆಹಾರ ಸಂಸ್ಕರಣೆ, ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ಸಿದ್ಧ ಉಡುಪುಗಳು, ಆಟೋಮೊಬೈಲ್ ಮತ್ತು ರಾಸಾಯನಿಕ ಉತ್ಪನ್ನ ಕ್ಷೇತ್ರಗಳು ಪ್ರಮುಖವಾಗಿವೆ. ಬೆಂಗಳೂರಿನಲ್ಲಿ ಹೆಚ್ಚಾಗಿ ಎಂಎಸ್‌ಎಂಇ ಹೊಂದಿದ್ದು, ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶವು ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾಗಿದೆ. ಬೆಂಗಳೂರಿನಲ್ಲಿ 3,500 ಕ್ಕೂ ಹೆಚ್ಚು ಎಂಎಸ್‌ಎಂಇ ಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕದಲ್ಲಿ ಸುಮಾರು ೫ ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಎಂಎಸ್‌ಎಂಇಗಳಿಂದ ಹೂಡಿಕೆ ಮಾಡಲಾಗಿದೆ ಮತ್ತು ರಾಜ್ಯವು ಕೈಗಾರಿಕಾ ಬೆಳವಣಿಗೆಯಲ್ಲಿ ದೇಶದಲ್ಲಿ 5 ನೇ ಸ್ಥಾನದಲ್ಲಿದೆ. ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಎಂಎಸ್‌ಎಂಇ ಪಾತ್ರ ಮುಖ್ಯವಾಗಿದೆ. ವರ್ಷಗಳಿಂದ ಬದಲಾಗುತ್ತಿರುವ ಅಗತ್ಯಗಳಿಗೆ ಪ್ರಗತಿಪರ ದೃಷ್ಟಿಕೋನದೊಂದಿಗೆ ರಾಜ್ಯವು ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿಯತ್ತ ಗಮನಹರಿಸುತ್ತಿದೆ. ಇಂದಿನ ಜಾಗತೀಕರಣ ಯುಗದಲ್ಲಿ, ಸ್ಪರ್ಧಾತ್ಮಕ ಮಾರುಕಟ್ಟೆಯನ್ನು ಸ್ಥಾಪಿಸಲು ಮತ್ತು ಯಶಸ್ವಿಯಾಗಲು, ಉದ್ಯಮಶೀಲತಾ ಕೌಶಲ್ಯಗಳು, ಸಾಲ, ತಂತ್ರಜ್ಞಾನ ಅಳವಡಿಕೆ, ಗುಣಮಟ್ಟದ ಉತ್ಪಾದನೆ, ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಸವಾಲುಗಳಾಗಿವೆ ಎಂದು ಹೇಳಲಾಗಿದೆ.
ಮೂರು ದಿನಗಳಿಗೆ ಇಳಿಕೆ
ಎಂಎಸ್‌ಎಂಇ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ನೋಂದಣಿ ಸಮಯವನ್ನು 30 ದಿನಗಳಿಂದ ಕೇವಲ 3 ದಿನಕ್ಕೆ ತಗ್ಗಿಸುವ ನಿರ್ಧಾರವನ್ನು ಮಾಡಲಾಗಿದೆ. ಎಂಎಸ್‌ಎಂಇ ಉತ್ಪನ್ನಗಳ ರಫ್ತಿಗೆ ಉಪಯೋಗವಾಗಲಿದೆ. ರಫ್ತು ಮಾಡುವ ಬಿಲ್‌ಗಳಲ್ಲಿ ಒಂದು ಸಾವಿರ ರು.ಗಿಂತ ಕಡಿಮೆ ಮರುಪಾವತಿಗಳನ್ನು ತ್ವರಿತವಾಗಿ ನಿರ್ವಹಿಸಲು ಸಾಧ್ಯವಾಗಲಿದೆ.
ಎಫ್‌ಕೆಸಿಸಿಐ ಸ್ವಾಗತ
ಜಿಎಸ್‍ಟಿ ಕೌನ್ಸಿಲ್ ಘೋಷಿಸಿದ ದಿಟ್ಟ ಮತ್ತು ಭವಿಷ್ಯದ ಜಿಎಸ್‍ಟಿ ಸುಧಾರಣೆಗಳನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‍ಕೆಸಿಸಿಐ) ಸ್ವಾಗತಿಸಿದೆ. ಜನಸಾಮಾನ್ಯರನ್ನು ಗುರಿಯಾಗಿಟ್ಟುಕೊಂಡು ಎಲ್ಲಾ ಸುಧಾರಣೆಯನ್ನು ತರಲಾಗಿದೆ. ಜಿ ಎಸ್ ಟಿ ವ್ಯವಸ್ಥೆಯನ್ನು ಸರಳೀಕರಣಗೊಳಿಸಲಾಗಿದೆ. ನೋಂದಣಿ, ರಿಟನ್ರ್ಸ್ ಫೈಲಿಂಗ್ ಮತ್ತು ಮರುಪಾವತಿಗಳನ್ನು ಸರಳಗೊಳಿಸಲಾಗಿದೆ. ಈ ಸುಧಾರಣೆಗಳು ಭಾರತದ ಪರೋಕ್ಷ ತೆರಿಗೆ ಪದ್ಧತಿಯಲ್ಲಿ ಒಂದು ಮಹತ್ವದ ಹೆಜ್ಜೆ ಇಟ್ಟಂತಾಗಿದೆ ಎಂದು ಎಫ್‍ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಹೇಳಿದ್ದಾರೆ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಅವರು, ಸಣ್ಣ ಕಾರುಗಳು, ಹವಾನಿಯಂತ್ರಣಗಳು, ಟಿವಿಗಳು ಮತ್ತು ಗೃಹೋಪಯೋಗಿ ಉಪಕರಣಗಳ ಮೇಲಿನ ಜಿಎಸ್‌ಟಿ ಅನ್ನು ಶೇ.28 ರಿಂದ ಶೇ.18 ಕ್ಕೆ ಇಳಿಸಲಾಗಿದೆ, ಈ ವಸ್ತುಗಳು ಜನ ಸಾಮಾನ್ಯರು, ಮಧ್ಯಮ ವರ್ಗದ ಜನರಿಗೆ ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ ಮತ್ತು ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಎಂಎಂಸಿಜಿ, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್‍ಗಳು ರಿಯಲ್ ಎಸ್ಟೇಟ್ ಕಂಪನಿಗಳು ಕಡಿಮೆ ತೆರಿಗೆ ವೆಚ್ಚಗಳ ಮೂಲಕ ಅನೇಕ ಪ್ರಯೋಜನಗಳನ್ನು ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ಜಿಎಸ್ಟಿ ಕೌನ್ಸಿಲ್ ಆಡಳಿತಾತ್ಮಕ ಮತ್ತು ಕಾರ್ಯವಿಧಾನದ ಸುಧಾರಣೆಗಳನ್ನು ಸಹ ಅನುಮೋದಿಸಿದೆ. ನೋಂದಣಿ, ಪೂರ್ವ-ಭರ್ತಿ ಮಾಡಿದ ರಿಟರ್ನ್ ಸ್ವರೂಪ ಮತ್ತು ಏಳು ದಿನಗಳ ಮರುಪಾವತಿ ಕ್ರಮ ಮತ್ತು ರಫ್ತುದಾರರಿಗೆ ಜಿಎಸ್‌ಟಿ ಕಡಿತವು ಮಹತ್ವದ ಹೆಜ್ಜೆಯಾಗಿದೆ. ಹಣಕಾಸಿನ ಜವಾಬ್ದಾರಿ ಮತ್ತು ವ್ಯಾಪಾರ ಸೌಲಭ್ಯದೊಂದಿಗೆ ಗ್ರಾಹಕರಿಗೆ ಪರಿಹಾರವನ್ನು ಸಮತೋಲನಗೊಳಿಸುವ ಸರ್ಕಾರದ ಈ ನಿರ್ಣಾಯಕ ಸುಧಾರಣೆಗಳು ಶ್ಲಾಘನೀಯ. ಈ ಕ್ರಮಗಳು ಆರ್ಥಿಕ ವೇಗವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.