Red Chilli Crisis Part -1 | ರೈತರ ನೆಮ್ಮದಿ ಕಸಿದ ಬೆಲೆ ಕುಸಿತ; ʼಕೆಂಪು ಸುಂದರಿʼಗೆ ಮಧ್ಯವರ್ತಿಗಳ ಕಾಟ

ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕೆಂಪು ಮೆಣಸಿನಕಾಯಿ ಇಳುವರಿ ಯತೇಚ್ಛ ಪ್ರಮಾಣದಲ್ಲಿದ್ದರೂ ರೈತರಿಗೆ ಮಾತ್ರ ನೆಮ್ಮದಿ ಇಲ್ಲದಂತಾಗಿದೆ.;

Update: 2025-03-14 03:20 GMT

ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾದ ಕೆಂಪು ಮೆಣಸಿನಕಾಯಿಯ ಘಾಟು ಬೆಳೆಗಾರರ ಕಣ್ಣಲ್ಲಿ ನೀರು ತರಿಸುತ್ತಿದೆ. ಅಧಿಕ ಉತ್ಪಾದನಾ ವೆಚ್ಚ, ಮಧ್ಯವರ್ತಿಗಳ ಹಾವಳಿ, ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತ ಸಮುದಾಯ, ʼಕೆಂಪು ಸುಂದರಿʼಯ ಸಹವಾಸವೇ ಸಾಕು ಎನ್ನುತ್ತಿದೆ.

ಉತ್ತರ ಹಾಗೂ ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳ ಕೆಂಪು ಮೆಣಸಿನಕಾಯಿ ಬೆಳೆಗಾರರ ಮೊಗದಲ್ಲಿ ಈ ಬಾರಿ ಖುಷಿ ಇಲ್ಲ.

ಉತ್ತರ ಕರ್ನಾಟಕದ ಹುಬ್ಬಳ್ಳಿ, ಗದಗ, ಬಳ್ಳಾರಿ, ಬಾಗಲಕೋಟೆ, ಕಲ್ಯಾಣ ಕರ್ನಾಟಕದ ಕೊಪ್ಪಳ, ರಾಯಚೂರು, ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕೆಂಪು ಮೆಣಸಿನಕಾಯಿ ಬೆಳೆಯಲಾಗುತ್ತಿತ್ತು. ಆದರೆ, ಈ ವರ್ಷ ನಾನಾ ಕಾರಣಗಳಿಂದ ಇಳುವರಿ ಕ್ಷೀಣಿಸಿದೆ. ಆದಾಗ್ಯೂ, ಬ್ಯಾಡಗಿ ಮಾರುಕಟ್ಟೆಗೆ ಹೊರಗಿನಿಂದ ಬರುವ ಕೆಂಪು ಮೆಣಸಿನಕಾಯಿ ಪ್ರಮಾಣ ಪ್ರತಿ ನಿತ್ಯ ಸರಾಸರಿ 6 ಲಕ್ಷ ಕ್ವಿಂಟಲ್ ಮುಟ್ಟಿದೆ. ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಗೆ 2.5 ಲಕ್ಷ ಕ್ವಿಂಟಲ್ ಆವಕವಾಗುತ್ತಿದೆ.

ಬ್ಯಾಡಗಿ ಮಾರುಕಟ್ಟೆಯಲ್ಲಿ ಕಳೆದ ವರ್ಷ ಕ್ವಿಂಟಲ್ ಮೆಣಸಿನಕಾಯಿ 40-50 ಸಾವಿರಕ್ಕೆ ಬಿಕರಿಯಾಗಿತ್ತು. ಆದರೆ, ಪ್ರಸಕ್ತ ವರ್ಷ 10-15 ಸಾವಿರಕ್ಕೆ ಇಳಿದಿದೆ. ಡಿಸೆಂಬರ್ ತಿಂಗಳ ಆರಂಭದಲ್ಲಿ ಉತ್ತಮ ಬೆಲೆ ಕಂಡರೂ ಇದೀಗ ದಿಢೀರ್ ಕುಸಿತ ಕಂಡಿದೆ.

ಬೆಲೆ ಕುಸಿತಕ್ಕೆ ಕಾರಣವೇನು?

ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಮೆಣಸಿನಕಾಯಿ ಬೆಳೆಗೆ ಸಾಕಷ್ಟು ರೋಗಬಾಧೆ ಕಾಡಿತು. ಇದರಿಂದ ಇಳುವರಿ ಕುಂಠಿತಗೊಂಡಿದೆ. ನೀರಾವರಿ ಸೌಲಭ್ಯ ಹೊಂದಿರುವ ಬೆರಳೆಣಿಕೆ ರೈತರ ಜಮೀನುಗಳಲ್ಲಿ ಮಾತ್ರ ಸಮೃದ್ಧ ಬೆಳೆ ಬಂದಿದೆ.

ಮಾರುಕಟ್ಟೆ ಆರಂಭದ ತಿಂಗಳಲ್ಲಿ ಗುಣಮಟ್ಟದ ಮೆಣಸಿನಕಾಯಿ ಕ್ವಿಂಟಲ್‌ 35 ಸಾವಿರ ರೂ.ಗಳಿಗೆ ಮಾರಾಟವಾಗಿದೆ. ಆದರೆ, ಸ್ಥಳೀಯ ರೈತರು ತಂದ ಬೆಳೆಯು ದ್ವಿತೀಯ ದರ್ಜೆಯಾದ್ದರಿಂದ ಬೆಲೆ 15-20 ಸಾವಿರಕ್ಕೆ ಕುಸಿಯಿತು. ಹೆಚ್ಚಿದ ದರ ಸಿಗುವ ಆಸೆಯಿಂದ ಅಂತರರಾಜ್ಯದ ಬೆಳೆಗಾರರು, ಮಧ್ಯವರ್ತಿಗಳು ಮಾರುಕಟ್ಟೆಗೆ ಬಂದಿದ್ದರಿಂದ ಆವಕ ಹೆಚ್ಚಾಗಿ ಬೆಲೆ ಮತ್ತಷ್ಟು ಕುಸಿಯುವಂತಾಯಿತು ಎಂಬುದು ರೈತರ ಅಳಲು.

ಕಳೆದ ವರ್ಷ ಹಾವೇರಿಯ ಬ್ಯಾಡಗಿಯಲ್ಲಿ ಇದೇ ರೀತಿ ಆಂಧ್ರದ ಬೆಳೆಗಾರರು ಲಗ್ಗೆ ಇಟ್ಟು, ಕಚೇರಿಗಳಿಗೆ ಬೆಂಕಿ ಹಾಕಿ ಗಲಾಟೆ ನಡೆಸಿದ್ದರಿಂದ ಲಾಠಿಚಾರ್ಜ್‌ ಕೂಡ ಸಂಭವಿಸಿತ್ತು. ಆದರೂ, ಮಧ್ಯವರ್ತಿಗಳಿಗೆ ಕಡಿವಾಣ ಬಿದ್ದಿಲ್ಲ.

“ನೀರಾವರಿ ಸೌಲಭ್ಯ ಹೊಂದಿರುವ ಭೂಮಿಯಲ್ಲಿ ಎಕರೆಗೆ 10 ಕ್ವಿಂಟಲ್ ಬೆಳೆದರೆ, ಒಣ ಬೇಸಾಯ ಆಶ್ರಿತ ಭೂಮಿಯಲ್ಲಿ ಕೇವಲ 5 ಕ್ವಿಂಟಲ್ ಇಳುವರಿ ಬರುತ್ತದೆ. ರೋಗಬಾಧೆ, ಅತಿವೃಷ್ಟಿಯ ಹೊರತಾಗಿಯೂ ಕಾಪಾಡಿಕೊಂಡು ಬಂದ ಫಸಲು ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು, ದಿಕ್ಕು ತೋಚದಂತಾಗಿದೆ. ನಮ್ಮದೇ ಸ್ಥಳೀಯ ಮೆಣಸಿನಕಾಯಿ ತಳಿಯಾದ 2043 ನಂಬರಿನ ಬಿತ್ತನೆಯನ್ನು ಮಧ್ಯಪ್ರದೇಶ, ಗುಜರಾತ್, ಪಂಜಾಬ್, ಉತ್ತರಪ್ರದೇಶದಲ್ಲೂ ಬೆಳೆಯುತ್ತಿದ್ದು, ಬ್ಯಾಡಗಿ ಹಾಗೂ ಹುಬ್ಬಳ್ಳಿ ಮಾರುಕಟ್ಟೆಗೆ ಅಲ್ಲಿಂದ ಹೆಚ್ಚಿನ ಆವಕ ಬರುತ್ತಿದೆ. ಇದರಿಂದ ಬೆಲೆಯೂ ಕಡಿಮೆಯಾಗಿದೆ” ಎಂದು ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಬಸವರಾಜ ಕುಂದಗೋಳಮಠ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

“ಬಿತ್ತನೆ ಬೀಜವನ್ನು ಮಡಿಗೆ ಹಾಕಿ ಸಸಿ ಬೆಳೆಸುವುದರಿಂದ ಹಿಡಿದು ಮೆಣಸಿಕಾಯಿ ಬಿಡಿಸುವವರೆಗೂ ಕೂಲಿಗಳ ಅವಶ್ಯಕತೆ ಇರುತ್ತದೆ. ಒಂದು ಎಕರೆ ಮೆಣಸಿನಕಾಯಿ ಬಿಡಿಸಲು 30ಸಾವಿರ ರೂ. ಭರಿಸಬೇಕು. ಬರೋಬ್ಬರಿ ಒಂದು ಎಕರೆಗೆ 2 ಲಕ್ಷ ರೂ. ಖರ್ಚು ಮಾಡುತ್ತೇವೆ. ಆದರೆ, ಮಾರುಕಟ್ಟೆಯಲ್ಲಿ ಕ್ವಿಂಟಲ್ 15 ಸಾವಿರಕ್ಕೆ ಮಾರಾಟವಾದರೆ ಹಾಕಿದ ಬಂಡವಾಳವೂ ಬರುವುದಿಲ್ಲ. ಒಣಬೇಸಾಯದಲ್ಲಿ ಬೆಳೆದ ಮೆಣಸಿನಕಾಯಿಗೆ ಇರುವ ರುಚಿ, ನೀರಾವರಿಯಲ್ಲಿ ಬೆಳೆದ ಮೆಣಸಿನಕಾಯಿ ಇರುವುದಿಲ್ಲ” ಎಂದು ಹೇಳಿದರು.

ಶೈತ್ಯಾಗಾರದಲ್ಲಿರುವ ಸರಕಿಗೆ ಬೆಲೆ ಇಲ್ಲ

ಕಳೆದ ವರ್ಷ ಮಾರುಕಟ್ಟೆ ಕೊನೆ ಅವಧಿಯಲ್ಲಿ ಇದೇ ರೀತಿ ಬೆಲೆ ಕುಸಿತ ಕಂಡ ಕಾರಣ ಸಾಕಷ್ಟು ರೈತರು ಕೆಂಪು ಮೆಣಸಿನಕಾಯಿಯನ್ನು ಶೈತ್ಯಾಗಾರಗಳಲ್ಲಿ ದಾಸ್ತಾನು ಇರಿಸಿದ್ದರು. ಈ ವರ್ಷವಾದರೂ ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದರು. ಆದರೆ, ಸೂಕ್ತ ಬೆಲೆ ಸಿಗದಿರುವುದರಿಂದ ಕಡಿಮೆ ಬೆಲೆಗೆ ಮಾರಾಟ ಮಾಡಿ ಕೈ ಸುಟ್ಟುಕೊಂಡಿದ್ದಾರೆ.

ಬೆಳೆಗಾರರ ರಕ್ಷಣೆಗೆ ಸಿಎಂ ಮನವಿ

ಎಂಐಎಸ್(ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ) ಅಡಿ ಬೆಲೆ ಕೊರತೆ ಪಾವತಿ ಯೋಜನೆಯನ್ನು ರಾಜ್ಯದ ರೈತರಿಗೂ ವಿಸ್ತರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಮನವಿ ಮಾಡಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರ ಆಂಧ್ರಪ್ರದೇಶದ ರೈತರಿಗೆ ಬೆಲೆ ಕೊರತೆ ಪಾವತಿ ಯೋಜನೆಯಡಿ ಕ್ವಿಂಟಲ್‌ಗೆ ₹11,781 ಕನಿಷ್ಠ ಮಧ್ಯಸ್ಥಿಕೆ ಬೆಲೆ ನಿಗದಿಪಡಿಸಿದೆ. ಆದಾಗ್ಯೂ, ಅಲ್ಲಿನ ರೈತರು ಕರ್ನಾಟಕದ ಮಾರುಕಟ್ಟೆಗಳಿಗೆ ಸರಕು ತರುತ್ತಿದ್ದು, ಸ್ಥಳೀಯ ರೈತರಿಗೆ ಬರೆ ಎಳೆದಂತಾಗಿದೆ.

ಮಧ್ಯವರ್ತಿಗಳ ಪಾಲಾಗಲಿದೆ ಕೇಂದ್ರದ ನೆರವು?

ಬೆಲೆ ಕೊರತೆ ಪಾವತಿ ಯೋಜನೆಯನ್ನು ಕರ್ನಾಟಕಕ್ಕೂ ವಿಸ್ತರಿಸಿದರೆ ಅದರಿಂದ ರೈತರಿಗೆ ಯಾವುದೇ ಲಾಭ ಆಗುವುದಿಲ್ಲ. ಬದಲಾಗಿ ಮಧ್ಯವರ್ತಿಗಳ ಪಾಲಾಗಲಿದೆ ಎಂದು ಮೆಣಸಿನಕಾಯಿ ವ್ಯಾಪಾರಿಗಳು ಅಭಿಪ್ರಾಯಪಡುತ್ತಾರೆ.

ಸ್ಥಳೀಯ ರೈತರು ಈಗಾಗಲೇ ತಮ್ಮ ಸರಕನ್ನು ಪೂರ್ಣ ಪ್ರಮಾಣದಲ್ಲಿ ಮಾರಾಟ ಮಾಡಿದ್ದಾರೆ. ಆಂಧ್ರ ಸೇರಿದಂತೆ ವಿವಿಧೆಡೆ ಕಡಿಮೆ ಬೆಲೆಗೆ ಸಿಗುವ ಮೆಣಸಿನಕಾಯಿಯನ್ನು ಮಧ್ಯವರ್ತಿಗಳು ಖರೀದಿಸಿ ತಂದು ಬ್ಯಾಡಗಿ, ಹುಬ್ಬಳ್ಳಿ, ಗದಗ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಬೆಲೆ ಕೊರತೆ ಪಾವತಿಯಡಿ ನೆರವು ನೀಡಿದರೂ ಈಗ ಅದು ರೈತರಿಗೆ ದಕ್ಕುವುದಿಲ್ಲ. ಮಧ್ಯವರ್ತಿಗಳ ಪಾಲಾಗಲಿದೆ. ಈ ನೆರವು ಮುಂದಿನ ವರ್ಷದಿಂದ ಬೆಳೆಗಾರರಿಗೆ ಸಿಗಲಿದೆ ಎಂದು ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಯ ವ್ಯಾಪಾರಿ ಏಕಲಾಶಪುರ ಬಸಣ್ಣ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

Tags:    

Similar News