Red Chilli Crisis -2 | ಉತ್ತರ ಕರ್ನಾಟಕದಲ್ಲಿ ಕುಗ್ಗಿದ ಬಿತ್ತನೆ ಪ್ರದೇಶ; ಉತ್ತರ ಭಾರತದಲ್ಲಿ ಸುಗ್ಗಿ
ಅತಿವೃಷ್ಟಿ, ನೀರಾವರಿ ಸಮಸ್ಯೆ, ಅಧಿಕ ಉತ್ಪಾದನೆ ವೆಚ್ಚ, ನಿರ್ವಹಣೆ ಸಮಸ್ಯೆ ಹಾಗೂ ಬೆಳೆ ನಷ್ಟದಿಂದ ರೈತರು ಕ್ರಮೇಣ ಮೆಣಸಿನಕಾಯಿ ಬೆಳೆಯಿಂದ ವಿಮುಖರಾಗುತ್ತಿದ್ದಾರೆ.;
ದೇಶದಲ್ಲಿ ಶೇ 25ರಷ್ಟು ಕೆಂಪು ಮೆಣಸಿನಕಾಯಿ ಉತ್ಪಾದನೆ ಮೂಲಕ ಮಾರುಕಟ್ಟೆಯಲ್ಲಿ ಸಿಂಹಪಾಲು ಹೊಂದಿದ್ದ ಕರ್ನಾಟಕದಲ್ಲಿ ದಿನೇ ದಿನೇ ಬಿತ್ತನೆ ಪ್ರದೇಶ ಕ್ಷೀಣಿಸುತ್ತಿದೆ. ಉತ್ತರ ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಿಂದ ರೈತರು ಮೆಣಸಿನಕಾಯಿ ಬದಲು ದ್ವಿದಳ ಧಾನ್ಯಗಳತ್ತ ವಾಲುತ್ತಿದ್ದಾರೆ. ಇದರಿಂದ ಕೆಂಪು ಮೆಣಸಿನಕಾಯಿ ಬಿತ್ತನೆಗೆ ನಿರಾಸಕ್ತಿ ತೋರುತ್ತಿದ್ದಾರೆ.
ಈ ಮೊದಲು ಕೆಂಪು ಮೆಣಸಿನಕಾಯಿ ಉತ್ಪಾದನೆಯಲ್ಲಿ ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿತ್ತು. ಆದರೆ, 2024-25 ನೇ ಸಾಲಿನಲ್ಲಿ ಉತ್ಪಾದನೆ ಪ್ರಮಾಣ ಕ್ಷೀಣಿಸಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಅತಿವೃಷ್ಟಿ, ನೀರಾವರಿ ಸಮಸ್ಯೆ, ಅಧಿಕ ಉತ್ಪಾದನೆ ವೆಚ್ಚ, ನಿರ್ವಹಣೆ ಸಮಸ್ಯೆ ಹಾಗೂ ಬೆಳೆ ನಷ್ಟದಿಂದ ರೈತರು ಕ್ರಮೇಣ ಮೆಣಸಿನಕಾಯಿ ಬೆಳೆಯಿಂದ ವಿಮುಖರಾಗುತ್ತಿದ್ದಾರೆ.
ಅತಿ ಹೆಚ್ಚು ಕೆಂಪು ಮೆಣಸಿನಕಾಯಿ ಬೆಳೆಯುತ್ತಿದ್ದ ಧಾರವಾಡ ಜಿಲ್ಲೆಯಲ್ಲಿ ಬಿತ್ತನೆ ಪ್ರದೇಶ 14,370 ಹೆಕ್ಟೇರ್‌ಗೆ ಇಳಿದಿದೆ. ಈ ಹಿಂದಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಒಟ್ಟು ಬಿತ್ತನೆ ಪ್ರದೇಶ 22ಸಾವಿರದಿಂದ 25ಸಾವಿರ ಹೆಕ್ಟೇರ್‌ವರೆಗೆ ಇತ್ತು ಎಂಬುದು ತೋಟಗಾರಿಕಾ ಇಲಾಖೆ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
2024 ರ ಆರ್ಥಿಕ ವರ್ಷದಲ್ಲಿ ಆಂಧ್ರ ಪ್ರದೇಶ 1,185.27 ಮೆಟ್ರಿಕ್ ಟನ್ ಒಣಮೆಣಸಿನಕಾಯಿ ಬೆಳೆದಿದೆ. ತೆಲಂಗಾಣ 654.27 ಮೆಟ್ರಿಕ್ ಟನ್, ಮಧ್ಯಪ್ರದೇಶ 293.33 ಮೆಟ್ರಿಕ್ ಟನ್ ಹಾಗೂ ಕರ್ನಾಟಕದಲ್ಲಿ 181 ಮೆಟ್ರಿಕ್ ಟನ್ ಒಣ ಮೆಣಸಿನಕಾಯಿ ಬೆಳೆ ಬೆಳೆಯಲಾಗಿದೆ.
ನೀರಾವರಿ ದೊಡ್ಡ ಸಮಸ್ಯೆ
ಹುಬ್ಬಳ್ಳಿ, ಹಾವೇರಿ ಹಾಗೂ ಗದಗ ಜಿಲ್ಲೆಯಲ್ಲಿ ಮಳೆಯಾಶ್ರಿತ ಒಣ ಬೇಸಾಯ ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ, ಕಳೆದ ಡಿಸೆಂಬರ್‌ವರೆಗೆ ಸುರಿದ ಅತಿಯಾದ ಮಳೆಯಿಂದ ಮೆಣಸಿನಕಾಯಿ ಫಸಲು ಅರ್ಧಕ್ಕರ್ಧ ಹಾಳಾಗಿವೆ. ಇನ್ನು ನೀರಾವರಿ ಸೌಲಭ್ಯ ಹೊಂದಿರುವ ರೈತರು ನಿರ್ವಹಣೆ ಹಾಗೂ ಉತ್ಪಾದನಾ ವೆಚ್ಚ ಅಧಿಕವಾದ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆಗಳನ್ನು ಮುಂದಾಗಿರುವುದೇ ಮೆಣಸಿನಕಾಯಿ ಬಿತ್ತನೆ ಪ್ರದೇಶ ಕ್ಷೀಣಿಸಲು ಕಾರಣ ಎಂದು ಹೇಳಲಾಗಿದೆ.
"ಒಂದು ಎಕರೆಗೆ ಮೂರು ಕ್ವಿಂಟಲ್ ಮೆಣಸಿನಕಾಯಿ ಸಿಗುತ್ತಿತ್ತು. ಈ ಬಾರಿ ಒಂದು ಕ್ವಿಂಟಲ್ ಗಿಂತ ಕಡಿಮೆ ಇಳುವರಿ ಬಂದಿದೆ. ಅದನ್ನು ಮಾರುಕಟ್ಟೆಗೆ ಹಾಕಲು ಆಗುವುದಿಲ್ಲ. ಮನೆಗಷ್ಟೇ ಬಳಸುತ್ತೇವೆ. ಭಾರೀ ಮಳೆಯಿಂದಾಗಿ ಬೆಳೆ ನಷ್ಟ ಸಾಮಾನ್ಯವಾಗಿಬಿಟ್ಟಿದೆ" ಎಂದು ಹುಬ್ಬಳ್ಳಿ ತಾಲೂಕಿನ ಸುಳ್ಳಾ ಗ್ರಾಮದ ಶಿವರಾಮ್ ಕಪ್ಲಿ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಪೈಫೋಟಿಗಿಳಿದ ವಿವಿಧ ರಾಜ್ಯಗಳು
ದಕ್ಷಿಣದ ರಾಜ್ಯಗಳಲ್ಲಿ ಮಾತ್ರ ಹೆಚ್ಚು ಬೆಳೆಯುತ್ತಿದ್ದ ಮೆಣಸಿನಕಾಯಿ ಬೆಳೆಯನ್ನು ಈಗ ಉತ್ತರ ಭಾರತದ ರಾಜ್ಯಗಳಲ್ಲೂ ರೈತರು ಬೆಳೆಯಲಾರಂಭಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಕಳೆದ ವರ್ಷ 293 ಮೆಟ್ರಿಕ್ ಟನ್ ಕೆಂಪು ಮೆಣಸಿನಕಾಯಿ ಬೆಳೆಯುವ ಮೂಲಕ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಇದಲ್ಲದೇ ಉತ್ತರಪ್ರದೇಶ, ಪಂಜಾಬ್‌ನಲ್ಲೂ ಕರ್ನಾಟಕದ ತಳಿಗಳನ್ನು ಬೆಳೆಯಲಾರಂಭಿಸಿದ್ದಾರೆ. ಹೀಗಾಗಿ ರಾಜ್ಯದ ರೈತರು ಬೆಳೆಯುತ್ತಿದ್ದ ಮೆಣಸಿನಕಾಯಿ ಬೆಳೆ ಬೇಡಿಕೆ ತಗ್ಗಿದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯವಾಗಿದೆ.
ಈ ಮೊದಲು ಕರ್ನಾಟದಿಂದ ದೇಶದ ವಿವಿಧ ರಾಜ್ಯಗಳು ಸೇರಿದಂತೆ ವಿದೇಶಗಳಿಗೂ ಕೆಂಪು ಮೆಣಸಿನಕಾಯಿ ರಫ್ತಾಗುತ್ತಿತ್ತು. ಸ್ಥಳೀಯವಾಗಿ ದೊರೆಯುವ 2043 ತಳಿಯನ್ನೇ ಬೇರೆ ಬೇರೆ ಕಡೆ ಬೆಳೆಯಲಾಗುತ್ತಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ನೀರಾವರಿ ಸೌಲಭ್ಯ ಉತ್ತಮವಾಗಿರುವುದರಿಂದ ಹೆಚ್ಚು ಉತ್ಪಾದನೆ ಆಗುತ್ತಿದೆ. ಆದರೆ, ಕರ್ನಾಟಕದಲ್ಲಿ ರೈತರಿಂದ ಬೆಳೆ ನಿರ್ವಹಣೆ ಕಷ್ಟಸಾಧ್ಯವಾಗಿದೆ ಎಂದು ಹೇಳಿದರು.
ಮಂಡಳಿ ಸ್ಥಾಪನೆಗೆ ಬೇಡಿಕೆ
ಕೆಂಪು ಮೆಣಸಿನಕಾಯಿ ಇಳುವರಿ ಹಾಗೂ ಬೆಲೆ ಲಾಟರಿ ಇದ್ದಂತೆ. ಉತ್ತಮ ಬೆಲೆ ನಿರೀಕ್ಷೆಯಲ್ಲಿ ಸಾಲ ಮಾಡಿ ಬೆಳೆ ಬೆಳೆಯುವ ರೈತರಿಗೆ ಮಾರುಕಟ್ಟೆ ಧಾರಣೆ ಅರಗಿಸಿಕೊಳ್ಳಲು ಆಗದಂತಹ ಸ್ಥಿತಿ ನಿರ್ಮಿಸಿದೆ. ಕೆಂಪು ಮೆಣಸಿನಕಾಯಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಅನುವಾಗಲು ಮೆಣಸಿನಕಾಯಿ ಮಂಡಳಿ ಸ್ಥಾಪಿಸಬೇಕೆಂದು ಹಿಂದಿನಿಂದಲೂ ಒತ್ತಾಯಿಸುತ್ತಿದ್ದೇವೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನೂ ಭೇಟಿ ಮಾಡಿ ಬೆಲೆ ಪಾವತಿ ಕೊರತೆ ಯೋಜನೆಯಡಿ ಕೇಂದ್ರ ಸರ್ಕಾರ ನೆರವು ಘೋಷಿಸಬೇಕು ಎಂದು ಒತ್ತಾಯಿಸಿದ್ದೇವೆ ಎಂದು ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ರೈತ ಬಸವರಾಜ ಕುಂದಗೋಳಮಠ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ರೈತರ ಬಳಿ ಸರಕು ಖಾಲಿ ಖಾಲಿ
ಕೆಂಪು ಮೆಣಸಿನಕಾಯಿ ಮಾರುಕಟ್ಟೆ ಡಿಸೆಂಬರ್ ತಿಂಗಳಿಂದ ಮಾರ್ಚ್ ತಿಂಗಳವರೆಗೆ ಇರಲಿದೆ. ಈಗಾಗಲೇ ಅತ್ಯಲ್ಪ ಪ್ರಮಾಣದಲ್ಲಿ ಬೆಳೆ ಬೆಳೆದಿರುವ ರೈತರು ಫಸಲನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ಬೆಲೆ ಕೊರತೆ ಪಾವತಿ ಯೋಜನೆಯಡಿ ಬೆಂಬಲ ಬೆಲೆ ನೀಡುವುದರಿಂದ ಉಪಯೋಗವಿಲ್ಲ. ರೈತರ ಬಳಿ ಕೆಂಪು ಮೆಣಸಿನಕಾಯಿ ದಾಸ್ತಾನು ಸಹ ಇಲ್ಲ. ಕೆಳ ದರ್ಜೆಯ ಮೆಣಸಿನಕಾಯಿ ಮಾತ್ರ ಬರುತ್ತಿದೆ ಎಂದು ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಯ ಸಹ ಅಧ್ಯಕ್ಷ ಎಕಲಾಶಪುರ ಬಸಣ್ಣ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಉತ್ತಮ ದರ್ಜೆಯ ಮೆಣಸಿನಕಾಯಿ ಕ್ವಿಂಟಲ್ 35-40 ಸಾವಿರಕ್ಕೆ ಮಾರಾಟವಾಗಿದೆ. ಈಗ ಕೊನೆಯ ದರ್ಜೆಯ ಕಾಯಿ ಮಾತ್ರ ಉಳಿದಿದ್ದು, ಅದಕ್ಕೂ ಕನಿಷ್ಠ 15ಸಾವಿರ ರೂ. ಸಿಗುತ್ತಿದೆ. ಉತ್ತಮ ಬೆಲೆ ನಿರೀಕ್ಷೆಯಲ್ಲಿರುವ ರೈತರು ತಮ್ಮ ಸರಕನ್ನು ಕೋಲ್ಡ್ ಸ್ಟೋರೇಜ್‌ಗಳಲ್ಲಿ ಸಂಗ್ರಹಿಸಿದ್ದಾರೆ. ಸಣ್ಣ ಪುಟ್ಟ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ತಿಳಿಸಿದರು.
ಮಧ್ಯವರ್ತಿಗಳಿಂದಲೇ ಹೆಚ್ಚು ಆವಕ
ಬ್ಯಾಡಗಿ ಹಾಗೂ ಹುಬ್ಬಳ್ಳಿ ಮಾರುಕಟ್ಟೆಗೆ ನಿತ್ಯ ಲಕ್ಷಾಂತರ ಮೆಣಸಿನಕಾಯಿ ಚೀಲಗಳು ಬರುತ್ತಿವೆ. ಆದರೆ, ಇದರಲ್ಲಿ ಸ್ಥಳೀಯರ ಪಾಲು ತೀರ ಕಡಿಮೆಯಿದೆ. ಆಂಧ್ರಪ್ರದೇಶದ ಗದ್ವಾಲ, ಅಧೋನಿಯಲ್ಲಿ ಕಡಿಮೆ ಬೆಲೆಗೆ ಮೆಣಸಿನಕಾಯಿ ಖರೀದಿಸುವ ಮಧ್ಯವರ್ತಿಗಳು ಅದನ್ನು ರಾಜ್ಯದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ ಎಂದು ಎಪಿಎಂಸಿ ವ್ಯಾಪಾರಿಗಳು ಹೇಳುತ್ತಾರೆ.
ಜಿಐ ಮಾನ್ಯತೆ ಪಡೆದಿರುವ ಮೆಣಸಿನಕಾಯಿ
ಗಾಢ ಕೆಂಪು, ಕಡಿಮೆ ಖಾರ ಮತ್ತು ಸುವಾಸನೆಯ ವಿಶಿಷ್ಟ ಗುಣ ಹೊಂದಿರುವ ಬ್ಯಾಡಗಿ ಮೆಣಸಿನಕಾಯಿ 2011ರಲ್ಲಿ ಭೌಗೋಳಿಕ ಸೂಚಿ (G I Tag-129) ಮಾನ್ಯತೆ ಪಡೆದಿದೆ. ನೈಸರ್ಗಿಕ ಬಣ್ಣ ಹಾಗೂ ರುಚಿಯಿಂದ ಬ್ಯಾಡಗಿ ಮೆಣಸಿನಕಾಯಿಗೆ ವಿಶ್ವದ ಹಲವು ರಾಷ್ಟ್ರಗಳಿಂದ ಹೆಚ್ಚು ಬೇಡಿಕೆ ಬರುತ್ತಿದೆ. ನೆರಿಗೆಯುಕ್ತ ಕಾಯಿಯಲ್ಲಿ ಅಡಕವಾಗಿರುವ 'ಓಲಿಯೊರೈಸಿನ್' ಎಣ್ಣೆ ವಿಶ್ವ ಮನ್ನಣೆ ತಂದುಕೊಟ್ಟಿದೆ. 2021ರಿಂದ ಅಂಚೆ ಇಲಾಖೆ ಲಕೋಟೆ ಮೇಲೆಯೂ ಬ್ಯಾಡಗಿ ಮೆಣಸಿನಕಾಯಿ ರಾರಾಜಿಸುತ್ತಿದೆ.
ಇದಲ್ಲದೇ ಆಂಧ್ರ ಪ್ರದೇಶದ ಗುಂಟೂರು ಸಣ್ಣಂ, ತಮಿಳುನಾಡಿನ ವಿಲಾತಿಕುಲಂ ಗುಂಡು, ಕೇರಳದ ಎಡ್ಯೂರ್ ಚಿಲ್ಲಿ, ಗೋವಾದ ಖೋಲಾ, ಹರ್ಮಲ್ ಸೇರಿದಂತೆ ಹದಿನಾರಕ್ಕೂ ಹೆಚ್ಚು ಮೆಣಸಿನಕಾಯಿ ತಳಿಗಳು ಭೌಗೋಳಿಕ ಸೂಚಿ (GI) ಮಾನ್ಯತೆ ಪಡೆದಿವೆ.