Covid scam | ನಿಯಮಬಾಹಿರ ಖರೀದಿ; ತಪ್ಪಿತಸ್ಥರಿಂದ 187 ಕೋಟಿ ವಸೂಲಿಗೆ ತನಿಖಾ ಆಯೋಗ ಶಿಫಾರಸು
ಅವಧಿ ಮುಗಿದ ಔಷಧಗಳ ಪೂರೈಕೆ, ಟೆಂಡರ್ ಕರೆಯದೇ ಖರೀದಿ ಒಪ್ಪಂದ, ದುಪ್ಪಟ್ಟು ದರ ನೀಡಿ ಉಪಕರಣಗಳ ಖರೀದಿ, ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ನೇಮಕ ಸೇರಿದಂತೆ ಹಲವು ಅಕ್ರಮಗಳು ನಡೆದಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ ಎನ್ನಲಾಗಿದೆ.
ಕೋವಿಡ್ ನಿರ್ವಹಣೆ ಹಾಗೂ ಉಪಕರಣ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ನೇತೃತ್ವದ ಆಯೋಗ ಬಯಲಿಗೆ ಎಳೆದಿದೆ.
ರಾಜ್ಯ ಸರ್ಕಾರಕ್ಕೆ ತನಿಖಾ ಆಯೋಗ ಸಲ್ಲಿಸಿರುವ ಮಧ್ಯಂತರ ವರದಿಯ ಕೆಲಭಾಗಗಳು ಹಾಗೂ ಅದರ ಮೇಲೆ ಸೂಕ್ತ ಕ್ರಮಕ್ಕೆ ಸಿದ್ಧಪಡಿಸಿರುವ ಟಿಪ್ಪಣಿಯು ಮಾಧ್ಯಮಗಳಿಗೆ ಸೋರಿಕೆಯಾಗಿದೆ. ಕೋವಿಡ್ ಉಪಕರಣಗಳ ಖರೀದಿಯಲ್ಲಿ ನಿಯಮ ಉಲ್ಲಂಘಿಸಿ ಅಂದಾಜು 187 ಕೋಟಿ ರೂ. ನಷ್ಟ ಉಂಟು ಮಾಡಲಾಗಿದೆ. ನಷ್ಟಕ್ಕೆ ಕಾರಣರಾದವರಿಂದಲೇ ಅದನ್ನು ವಸೂಲಿ ಮಾಡುವಂತೆ ಆಯೋಗ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ ಎನ್ನಲಾಗಿದೆ.
ಅವಧಿ ಮುಗಿದ ಔಷಧಗಳ ಪೂರೈಕೆ, ಟೆಂಡರ್ ಕರೆಯದೇ ಖರೀದಿ ಒಪ್ಪಂದ, ದುಪ್ಪಟ್ಟು ದರ ನೀಡಿ ಉಪಕರಣಗಳ ಖರೀದಿ, ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ನೇಮಕ ಸೇರಿದಂತೆ ಹಲವು ಅಕ್ರಮಗಳು ನಡೆದಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಆರೋಗ್ಯ ಇಲಾಖೆ ಕೋವಿಡ್ ನಿರ್ವಹಣೆಗಾಗಿ ಒಟ್ಟು 1754 ಕೋಟಿ ರೂ. ಖರ್ಚು ಮಾಡಿದೆ. 13 ಖರೀದಿಗಳಲ್ಲಿ ಒಟ್ಟು 17.84ಕೋಟಿ ರೂ.ಗಳನ್ನು ಸಂಬಂಧಿತ ಕಂಪನಿಗಳಿಂದ ವಸೂಲಿ ಮಾಡಬೇಕು. ಅದೇ ರೀತಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು 1963 ಕೋಟಿ ವ್ಯಯಿಸಿದ್ದು, ಇದರಲ್ಲಿ 170 ಕೋಟಿ ರೂ. ಅಕ್ರಮ ನಡೆದಿದೆ. ಈ ಎಲ್ಲ ಆಕ್ರಮಗಳಲ್ಲಿ ಭಾಗಿಯಾದ ಅಧಿಕಾರಿಗಳು ಹಾಗೂ ಕಂಪನಿಗಳ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿ, ನಷ್ಟ ವಸೂಲಿ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿದೆ.
ಇನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಹಾಗೂ ಕೋವಿಡ್ ತುರ್ತು ಸ್ಪಂದನಾ ಯೋಜನೆಯಡಿ 446 ಕೋಟಿಯನ್ನು ಬಳಸಿಕೊಳ್ಳಲದೇ ವ್ಯರ್ಥ ಮಾಡಲಾಗಿದೆ ಎಂದು ಆಯೋಗ ದೂರಿದೆ ಎನ್ನಲಾಗಿದೆ.
ಅನಗತ್ಯ ವೆಚ್ಚ ಹಾಗೂ ಪೂರ್ಣವಾಗದ ನಿರ್ಮಾಣ ಕಾಂಗಾರಿಗಳಿಗೆ ಮಾಡಿರುವ 84.71 ಕೋಟಿ ವೆಚ್ಚದ ಕುರಿತು ವಿಸ್ತೃತ ತನಿಖೆ ನಡೆಸಬೇಕು. ಚೀನಾದಿಂದ ಪಿಪಿಇ ಕಿಟ್ ತರಿಸಿಕೊಳ್ಳಲು ಎರಡು ಬಾರಿ ಸಾಗಣೆ ವೆಚ್ಚವಾಗಿ 14. 21ಕೋಟಿ ನಷ್ಟವಾಗಿದೆ. ಹೆಚ್ಚಿನ ದರ ನೀಡಿ ಸರಕು ಖರೀದಿಸಿದ 21 ಪ್ರಕರಣಗಳಲ್ಲಿ 8.03 ಕೋಟಿ ನಷ್ಟವಾಗಿದೆ. ಅಂಬುಲೆನ್ಸ್ ಸೇವೆಯಲ್ಲಿ ಹೆಚ್ಚುವರಿ ಹಾಗೂ ದಾಖಲೆ ಇಲ್ಲದೇ 4.14 ಕೋಟಿ ಪಾವತಿಸಲಾಗಿದೆ. ಐಸಿಎಂಆರ್ ಮಾನ್ಯತೆ ಪಡೆಯದ 8 ಲ್ಯಾಬ್‌ಗಳಿಗೆ 4.29 ಕೋಟಿ ಪಾವತಿಸಲಾಗಿದೆ. ಕೋವಿಡ್ ಪರೀಕ್ಷೆ ನಡೆಸುವ ಸಾಮರ್ಥ್ಯವಿಲ್ಲದ 6 ಲ್ಯಾಬ್‌ಗಳಿಗೆ 2.64 ಕೋಟಿ ಅಕ್ರಮವಾಗಿ ಪಾವತಿಸಲಾಗಿದೆ ಎಂದು ವರದಿ ಬೊಟ್ಟು ಮಾಡಿದೆ ಎಂದು ಮೂಲಗಳು ಹೇಳಿವೆ..
1.2 ಲಕ್ಷ ಜನರ ಸಾವು ಮುಚ್ಚಿಟ್ಟ ಬಿಜೆಪಿ ಸರ್ಕಾರ
ಕೋವಿಡ್ ಅವಧಿಯಲ್ಲಿ ಸುಮಾರು 1.2 ಲಕ್ಷ ಜನರು ಸಾವು ಸಂಭವಿಸಿದ್ದು, ಈ ಅಂಕಿ ಅಂಶವನ್ನೇ ಸರ್ಕಾರ ಮುಚ್ಚಿಟ್ಟಿತ್ತು ಎಂದು ಆಯೋಗದ ತನಿಖಾ ವರದಿಯಿಂದ ಬಹಿರಂಗವಾಗಿದೆ.
ಕೇಂದ್ರ ಸರ್ಕಾರದ ಲೆಕ್ಕಪತ್ರ ಮತ್ತು ಅಂಕಿಅಂಶಗಳ ನಿರ್ದೇಶನಾಲಯವು ರಾಜ್ಯದಲ್ಲಿ 2020ರ ಜನವರಿಯಿಂದ ಜುಲೈವರೆಗೆ 2,69,029 ಹಾಗೂ 2021ರ ಜನವರಿಯಿಂದ ಜುಲೈವರೆಗೆ 4,26,943 ಮಂದಿ ಕೋವಿಡ್ನಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಅಂದರೆ, 2020ಕ್ಕಿಂತ 2021ರಲ್ಲಿ ಸಾವುಗಳ ಸಂಖ್ಯೆ 1,57,914ರಷ್ಟು ಹೆಚ್ಚಾಗಿದೆ. ಆದರೆ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾತ್ರ ಸಾವಿನ ಸಂಖ್ಯೆ ಕೇವಲ 37,206 ಎಂಬ ತಪ್ಪು ಮಾಹಿತಿ ನೀಡಿದೆ. ತಪ್ಪು ಮಾಹಿತಿ ನೀಡುವ ಮೂಲಕ ಸರ್ಕಾರ ಮತ್ತು ಅಧಿಕಾರಿಗಳು ಘನಘೋರ ಅಪರಾಧ ಎಸಗಿದ್ದಾರೆ. ಮೃತರ ಕುಟುಂಬಗಳನ್ನು ಪತ್ತೆ ಹಚ್ಚಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಯೋಗ ತನ್ನ ಶಿಫಾರಸಿನಲ್ಲಿ ಹೇಳಿದೆ.
ಮಾನ್ಯತೆ ಪಡೆಯದ ಲ್ಯಾಬ್‌ಗಳಿಂದ ಪರೀಕ್ಷೆ
ಐಸಿಎಂಆರ್ ಮಾನ್ಯತೆ ಪಡೆಯದ ಕೆಲ ಖಾಸಗಿ ಪ್ರಯೋಗಾಲಯಗಳಿಗೆ ಆರ್ಟಿಪಿಸಿಆರ್ ತಪಾಸಣೆ ನಡೆಸಲು ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ₹6.93 ಕೋಟಿ ಪಾವತಿಸಿದೆ. ಸುಮಾರು 14 ಲ್ಯಾಬ್ಗಳು ಐಸಿಎಂಆರ್ ಮಾನ್ಯತೆ ಪಡೆದಿರಲಿಲ್ಲ. ಅವುಗಳು ಆರ್ಟಿಪಿಸಿಆರ್ ತಪಾಸಣೆಯ ಸಾಮರ್ಥ್ಯ ಹೊಂದಿರಲಿಲ್ಲ. ಜೊತೆಗೆ 8 ಲ್ಯಾಬ್ಗಳಿಗೆ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ₹4.28 ಕೋಟಿ ಸಂದಾಯ ಮಾಡಲಾಗಿದೆ ಎಂದು ದೂರಿದೆ.
ಪ್ರಚಾರದಲ್ಲೂ ಕೋಟ್ಯಂತರ ರೂ. ಲೂಟಿ
ಕೋವಿಡ್ ಕುರಿತ ಮಾಹಿತಿ ಮತ್ತು ಪ್ರಚಾರಕ್ಕಾಗಿ ಮೀಸಲಿಟ್ಟಿದ್ದ ₹7.3 ಕೋಟಿಯಲ್ಲೂ ಸಾಕಷ್ಟು ಅಕ್ರಮ ನಡೆದಿದೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಸಲಹೆ ಮೇರೆಗೆ ಯಾವುದೇ ಪೂರ್ವಾನುಮತಿ ಪಡೆಯದೇ ಚುಕ್ಕಿ ಟಾಕೀಸ್ ಎಂಬ ಸಂಸ್ಥೆಗೆ ₹8.85 ಲಕ್ಷ ಹಣ ಪಾವತಿಸಲಾಗಿದೆ. ಪ್ರಚಾರದ ಹಣದಲ್ಲಿ ₹5 ಕೋಟಿಗೆ ಯಾವುದೇ ದಾಖಲೆ ಒದಗಿಸಿಲ್ಲ ಎಂದು ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.
ಕೋವಿಡ್ ಆಪ್ತಮಿತ್ರ ಸೇವೆಯಲ್ಲೂ ಅಕ್ರಮ ನಡೆದಿದ್ದು, ಎರಡು ಬಿಪಿಓ ಸಂಸ್ಥೆಗಳಿಗೆ ₹4.9 ಕೋಟಿ ಹಣ ಸಂದಾಯ ಮಾಡಲಾಗಿದೆ. ಈ ಎರಡೂ ಬಿಪಿಓ ಸೇವಾ ಸಂಸ್ಥೆಗಳ ನಡುವೆ ಯಾವುದೇ ಒಪ್ಪಂದವಿಲ್ಲದೇ ಕೆಲಸ ಮಾಡಿಸಲಾಗಿದೆ. ಇದಕ್ಕೂ ಕೂಡ ಆರೋಗ್ಯ ಇಲಾಖೆ ಬಳಿ ಯಾವುದೇ ಸೂಕ್ತ ದಾಖಲೆಗಳಿಲ್ಲ. ಆ ಸಂಸ್ಥೆಗಳಿಗೆ ನೀಡಿರುವ ಹಣವನ್ನು ವಸೂಲಿ ಮಾಡುವಂತೆ ಆಯೋಗ ಶಿಫಾರಸ್ಸು ಮಾಡಿದೆ ಎಂದು ಹೇಳಲಾಗಿದೆ.