ಅತ್ಯಾಚಾರ ಪ್ರಕರಣ| ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಸೆ.5ಕ್ಕೆ ಮುಂದೂಡಿಕೆ
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣೆಯನ್ನು ಸೆ.5 ಕ್ಕೆ ಮುಂದೂಡಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿರುವ ಮತ್ತು ಬೆಂಗಳೂರು ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠಕ್ಕೆ ಜಾಮೀನು ಹಾಗೂ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂದೂಡಿದೆ.
ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಗಳನ್ನು ಸಂತ್ರಸ್ತೆಯರ ಖಾಸಗಿತನ ರಕ್ಷಿಸುವ ಉದ್ದೇಶದಿಂದ ಗೌಪ್ಯವಾಗಿ (ಇನ್ ಕ್ಯಾಮೆರಾ) ವಿಚಾರಣೆ ನಡೆಸುವಂತೆ ರಾಜ್ಯ ಸರ್ಕಾರವು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ಮೌಖಿಕವಾಗಿ ಮನವಿ ಮಾಡಿತು.
ಪ್ರಜ್ವಲ್ ಪರವಾಗಿ ಹಾಜರಾಗಿದ್ದ ವಕೀಲ ಜಿ ಅರುಣ್ ಅವರು ಆರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂದರು. ಆ ಮೂಲಕ ಜಾಮೀನು ನೀಡಲು ಅವಕಾಶವಿದೆ ಎಂದು ತಿಳಿಸಲು ಪ್ರಯತ್ನಿಸಿದರು. ಆಗ ನ್ಯಾಯಾಲಯವು, ಅನುಗ್ರಹ ತೋರುವ ಪ್ರಕರಣ ಇದಲ್ಲ ಎಂದಿತು.
ಕೊನೆಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ಅವರು “ಸಂತ್ರಸ್ತೆಯರ ಖಾಸಗಿತನ ರಕ್ಷಿಸುವ ಉದ್ದೇಶದಿಂದ ಜಾಮೀನು ಅರ್ಜಿಗಳನ್ನು ಗೌಪ್ಯ ವಿಚಾರಣೆ ನಡೆಸಬೇಕು” ಎಂದರು. ಆಗ ಪೀಠವು “ಮುಖ್ಯ ನ್ಯಾಯಮೂರ್ತಿಗಳು ಈ ಸಂಬಂಧ ಆದೇಶ ಮಾಡಬೇಕು. ಮುಂದಿನ ವಿಚಾರಣೆಯಲ್ಲಿ ನೋಡೋಣ” ಎಂದರು. ಅಂತಿಮವಾಗಿ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಲಾಯಿತು.