CAFE BLAST CASE | ಶಂಕಿತರ ಸುಳಿವು ಕೇಳಿದ ಎನ್‌ಐಎ

ಶಂಕಿತ ಮುಸಾವೀರ್ ಹುಸೇನ್ ಶಾಜೀದ್ ಹಾಗೂ ಅಬ್ದುಲ್ ಮತೀನ್ ಅಹ್ಮದ್ ತಾಹಾ ಅವರ ಫೋಟೋ ಬಿಡುಗಡೆ ಮಾಡಿರುವ ಎನ್ಐಎ, ಶಂಕಿತರ ಸುಳಿವು ಕೊಟ್ಟವರ ಹೆಸರನ್ನು ಗೋಪ್ಯವಾಗಿಡಲಾಗುವುದು ಎಂದು ತಿಳಿಸಿದೆ.

Update: 2024-03-30 06:58 GMT

ಬೆಂಗಳೂರು: 'ದಿ ರಾಮೇಶ್ವರಂ ಕೆಫೆ' ಬಾಂಬ್ ಸ್ಫೋಟ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಶಂಕಿತರ ಸುಳಿವು ನೀಡಿದವರಿಗೆ 10 ಲಕ್ಷ ರೂ.ಗಳನ್ನು ಇನಾಮು ನೀಡುವುದಾಗಿ ಎನ್ಐಎ ಘೋಷಿಸಿದೆ.

ಶಂಕಿತರಾದ ಮುಸಾವೀರ್ ಹುಸೇನ್ ಶಾಜೀದ್ ಹಾಗೂ ಅಬ್ದುಲ್ ಮತೀನ್ ಅಹ್ಮದ್ ತಾಹಾ ಅವರ ಫೋಟೋಗಳನ್ನು ಬಿಡುಗಡೆ ಮಾಡಿರುವ ಎನ್ಐಎ, ಶಂಕಿತರ ಸುಳಿವು ಕೊಟ್ಟವರ ಹೆಸರನ್ನು ಗೋಪ್ಯವಾಗಿಡಲಾಗುವುದು ಎಂದು ತಿಳಿಸಿದೆ.

ತೀರ್ಥಹಳ್ಳಿ ಮೂಲದ ಶಂಕಿತ ಮುಸಾವೀರ್ ಹುಸೇನ್ ಶಾಜೀದ್ ಎಂಬಾತ ಮಾರ್ಚ್ 1ರಂದು ʼದಿ ರಾಮೇಶ್ವರಂ ಕೆಫೆʼಯಲ್ಲಿ ಬಾಂಬ್ ತಂದಿಟ್ಟಿದ್ದ ಎಂದು ಎನ್ಐಎ ತನಿಖೆಯಲ್ಲಿ ತಿಳಿದುಬಂದಿದೆ. ಈತನಿಗೆ ತೀರ್ಥಹಳ್ಳಿಯ ಇನ್ನೋರ್ವ ಶಂಕಿತ ಅಬ್ದುಲ್ ಮತೀನ್ ಅಹ್ಮದ್ ತಾಹಾ ಸಹಕಾರ ನೀಡಿದ್ದ ಎಂದು ಎನ್ಐಎ ಅಂದಾಜಿಸಿದೆ.

ಪ್ರಮುಖ ಸಂಚುಕೋರ ಎಂದು ಬಂಧಿಸಲ್ಪಟ್ಟಿರುವ ಮುಜಮೀಲ್ ಶರೀಫ್ ವಿಚಾರಣೆಯ ವೇಳೆ ನೀಡಿದ ಮಾಹಿತಿ ಆಧರಿಸಿ, ಇಬ್ಬರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.

'ಮುಸಾವೀರ್ ಹುಸೇನ್ ಶಾಜೀದ್ (ಅಂದಾಜು 30 ವರ್ಷ) ಜಿಮ್ ಬಾಡಿ ಹೊಂದಿದ್ದು, ಸುಮಾರು 6 ಅಡಿ 2 ಇಂಚು ಎತ್ತರ. ಮಹಮ್ಮದ್ ಜುನೇದ್ ಸೈಯದ್ ಹೆಸರಿನಲ್ಲಿ ನಕಲಿ ಚಾಲನಾ ಪರವಾನಗಿ ಹೊಂದಿದ್ದಾನೆ. ಅದಲ್ಲದೆ, ಇನ್ನೂ ಹಲವು ನಕಲಿ ದಾಖಲಾತಿ ತಯಾರಿಸಿಕೊಂಡಿದ್ದಾನೆ. ಜೀನ್ಸ್ ಪ್ಯಾಂಟ್, ಟೀ ಶರ್ಟ್, ಸ್ಮಾರ್ಟ್ ವಾಚ್, ಮಾಸ್ಕ್ ಧರಿಸಿ ಓಡಾಟ ನಡೆಸುತ್ತಾನೆ. ಕೆಲವೊಮ್ಮೆ ನಕಲಿ ಗಡ್ಡ, ವಿಗ್ ವೇಷ ತೊಟ್ಟು ಓಡಾಟ ನಡೆಸುತ್ತಿದ್ದಾನೆ. ಕಡಿಮೆ ದರದ ಹೋಟೆಲ್ ಹಾಗೂ ಬಾಯ್ಸ್ ಹಾಸ್ಟೆಲ್ ಗಳಲ್ಲಿ ವಾಸ್ತವ್ಯ ಮಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ' ಎಂದು ಎನ್ಐಎ ಹೇಳಿದೆ.

'ಅಬ್ದುಲ್ ಮತೀನ್ ಅಹ್ಮದ್ ತಾಹಾ (ಅಂದಾಜು 30 ವರ್ಷ) ಸಾಧಾರಣ ಮೈಕಟ್ಟು, 5 ಅಡಿ 5 ಇಂಚು ಎತ್ತರ. ಮುಂದಲೆಯಲ್ಲಿ ಕೂದಲು ಇಲ್ಲ. ವಿಘ್ನೇಶ್ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಹೊಂದಿದ್ದಾನೆ. ಅಲ್ಲದೆ, ಹಿಂದೂ ಹೆಸರಿನಲ್ಲಿ ನಕಲಿ ದಾಖಲೆ ತಯಾರಿಸಿಕೊಂಡಿದ್ದಾನೆ. ಈತ ಕೂಡಾ ನಕಲಿ ಗಡ್ಡ ಧರಿಸಿ, ಟೋಪಿ, ಜೀನ್ಸ್, ಟಿಶರ್ಟ್ ಧರಿಸಿ ಓಡಾಡುತ್ತಾನೆ ಎಂದು ಎನ್ಐಎ ಪ್ರಕಟಿಸಿದೆ.

ಇವರ ಸುಳಿವು ನೀಡಲಿಚ್ಛಿಸುವವರು 080-29510900, 8904241100 ಅಥವಾ info.blr.nia@gov.in ಸಂಪರ್ಕಿಸುವಂತೆ ಸೂಚಿಸಲಾಗಿದೆ. ಅಥವಾ NIA (ರಾಷ್ಟ್ರೀಯ ತನಿಖಾ ದಳ), 3ನೇ ಮಹಡಿ, ಬಿಎಸ್ಎನ್ಎಲ್ ಟೆಲಿಫೋನ್ ಎಕ್ಸ್ಚೆಂಜ್, 80 ಅಡಿ ರಸ್ತೆ, ಎಚ್ಎಎಲ್ 2ನೇ ಹಂತ, ಇಂದಿರಾನಗರ, ಬೆಂಗಳೂರು 08 ವಿಳಾಸಕ್ಕೆ ಮಾಹಿತಿ ರವಾನಿಸುವಂತೆ ಎನ್ಐಎ ತಿಳಿಸಿದೆ.

Tags:    

Similar News