Cafe blast case | ಶಂಕಿತ ಪಾಕಿಸ್ತಾನಕ್ಕೆ ಪರಾರಿ: ಎನ್‌ಐಎ ಶಂಕೆ

ಬಾಂಬ್ ಸ್ಫೋಟ ಪ್ರಕರಣದ ಆರನೇ ಆರೋಪಿ ಫೈಸಲ್ ಎಂಬಾತ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ರಾಷ್ಟ್ರೀಯ ತನಿಖಾ ದಳ ಶಂಕೆ ವ್ಯಕ್ತಪಡಿಸಿದೆ.;

Update: 2024-11-09 05:10 GMT
ರಾಮೇಶ್ವರ ಕೆಫೆ
Click the Play button to listen to article

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ನಾಲ್ವರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಬಾಂಬ್ ಸ್ಫೋಟ ಪ್ರಕರಣದ ಆರನೇ ಆರೋಪಿ ಫೈಸಲ್ ಎಂಬಾತ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ. 

ಮಾರ್ಚ್ 1, 2024 ರಂದು ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ  ಕಡಿಮೆ-ತೀವ್ರತೆಯ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡು  ಒಂಬತ್ತು ಮಂದಿ ಗಾಯಗೊಂಡಿದ್ದರು.  ಈ ಸಂಬಂಧ ತನಿಖೆ ನಡೆಸಿದ್ದ ಎನ್‌ಐಎ ಅಧಿಕಾರಿಗಳು, ಪಶ್ಚಿಮ ಬಂಗಾಳದಲ್ಲಿ ಶಂಕಿತ ಉಗ್ರರಾದ ಮುಸಾವೀರ್ ಹುಸೇನ್ ಶಾಜೀದ್ ಹಾಗೂ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಅವರನ್ನು ಬಂಧಿಸಿದ್ದರು. ಇಬ್ಬರೂ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯವರು. ಶಂಕಿತರ ವಿಚಾರಣೆ ವೇಳೆ ಹಲವು ಸ್ಫೋಟಕ ವಿಚಾರಗಳು ಬಯಲಾಗಿದ್ದವು ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಮುಸಾವೀ‌ರ್ ಹುಸೇನ್‌ ಶಾಜೀದ್ ಹಾಗೂ ಅಬ್ದುಲ್ ಮಥೀನ್ ಅಹ್ಮದ್ ತಾಹಾ ವಿರುದ್ಧ ನಗರದ ರಾಷ್ಟ್ರೀಯ ತನಿಖಾ ದಳದ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಎರಡು ಹಂತದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಇಬ್ಬರು ಶಂಕಿತರ ಜತೆಗೆ ಫೈಸಲ್ ನಂಟು ಹೊಂದಿದ್ದ ಎನ್ನಲಾಗಿದೆ.

ಶಂಕಿತ ಆರೋಪಿಗಳ ಆರಂಭಿಕ ಗುರಿ ಬೆಂಗಳೂರಿನಲ್ಲಿರುವ ಕರ್ನಾಟಕ ಬಿಜೆಪಿಯ ಕೇಂದ್ರ ಕಚೇರಿಯಾಗಿತ್ತು ಎಂದು ಎನ್ಐಎ ಹೇಳಿಕೊಂಡಿದೆ. 2024 ರ ಜನವರಿ 22 ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ನಡೆದ ದಿನವೇ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು.   ಆರೋಪಿಗಳು ಚೆನ್ನೈನಲ್ಲಿ ಬಾಡಿಗೆ ಮನೆ ಪಡೆದು ಕಚ್ಚಾ ಬಾಂಬ್ (ಐಇಡಿ) ತಯಾರಿಸಿದ್ದರು. ಚೆನ್ನೈನಿಂದ ಮುಸಾವೀರ್ ಹುಸೇನ್ ಶಾಜೀದ್ ನಗರಕ್ಕೆ ಬಂದು ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ಐಇಡಿ ಇಟ್ಟು ಪರಾರಿ ಆಗಿದ್ದ.ಆದರೆ ಐಇಡಿ ಸ್ಫೋಟಗೊಳ್ಳದ ಕಾರಣ ದಾಳಿ ವಿಫಲವಾಗಿತ್ತು. ಬಳಿಕ ಶಂಕಿತರು ಮತ್ತೊಂದು ಸ್ಥಳದಲ್ಲಿ ಸ್ಫೋಟಕ್ಕೆ ಯೋಜನೆ ರೂಪಿಸಿದ್ದರು. ಶಾಜೀದ್‌ನನ್ನು ಫೆಬ್ರುವರಿ ಕೊನೆ ವಾರದಲ್ಲಿ ಬೆಂಗಳೂರಿಗೆ ಕಳುಹಿಸಿ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಇರಿಸಿದ್ದರು. ಈ ಪ್ರಕರಣದಲ್ಲಿ ಫೈಸಲ್ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ. ಆತನಿರುವ ಸ್ಥಳವನ್ನೂ ಪತ್ತೆ ಹಚ್ಚಲಾಗುತ್ತಿದೆ' ಎಂದು ಮೂಲಗಳು ಹೇಳಿವೆ.

Tags:    

Similar News