ರಕ್ಷಾ ಬಂಧನ ವಿವಾದ | ಟ್ರೋಲ್ ಬಳಿಕ ಸ್ಪಷ್ಟನೆ ನೀಡಿದ ಸುಧಾಮೂರ್ತಿ
ಸೋಮವಾರ ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರ ʼಎಕ್ಸ್ʼ ಪೋಸ್ಟ್ ಒಂದು ಭಾರೀ ವಿವಾದ ಸೃಷ್ಟಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಕೂಡ ಆಗಿತ್ತು. ಟ್ರೋಲ್ ಬಳಿಕ ಆ ಕುರಿತು ಸ್ಪಷ್ಟನೆ ನೀಡಿರುವ ಸುಧಾ ಮೂರ್ತಿ, ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಸುಧಾ ಮೂರ್ತಿ ಸ್ಪಷ್ಟನೆ ನೀಡಿದ್ದು, ʻʻರಕ್ಷಾ ಬಂಧನದಂದು ನಾನು ಹಂಚಿಕೊಂಡ ಕಥೆಯು ಹಬ್ಬಕ್ಕೆ ಸಂಬಂಧಿಸಿದ ಅನೇಕ ಕಥೆಗಳಲ್ಲಿ ಒಂದಾಗಿದೆ. ಆದರೆ, ಅದಕ್ಕೆ ನಾನಾ ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಈ ರೀತಿ ನನಗೆ ಹಿಂದೆಂದೂ ಅನುಭವವಾಗಿರಲಿಲ್ಲ. ಖಂಡಿತವಾಗಿಯೂ ಇದೊಂದೇ ಮೂಲಕತೆಯಲ್ಲ. ಈ ಬಗ್ಗೆ ನಾನು ವೀಡಿಯೊದಲ್ಲಿ ಉಲ್ಲೇಖಿಸಿದ್ದೇನೆ. ಇದು ಈಗಾಗಲೇ ಈ ನೆಲದ ಸಂಪ್ರದಾಯವಾಗಿತ್ತು. ನಾನು ಬೆಳೆದ ಪರಿಸರದ ಅನೇಕ ಕಥೆಗಳಲ್ಲಿ ಒಂದನ್ನು ರಕ್ಷಾ ಬಂಧನದ ಹಿಂದಿನ ಸುಂದರವಾದ ಸಂಕೇತದ ಬಗ್ಗೆ ಹೇಳುವುದು ನನ್ನ ಉದ್ದೇಶವಾಗಿತ್ತುʼʼ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಡಿಯೋದಲ್ಲಿ ಸುಧಾಮೂರ್ತಿ ಹೇಳಿದ್ದೇನು?
ʻʻರಕ್ಷಾ ಬಂಧನ ಅಥವಾ ರಾಖಿ ಹಬ್ಬ ನನ್ನ ಪ್ರಕಾರ ಸಹೋದರಿಗೆ ದಾರವನ್ನು ಕಟ್ಟುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದು ದೊಡ್ಡ ಆಚರಣೆಯಲ್ಲದಿರಬಹುದು. ಆದರೆ, ಕಷ್ಟದ ಸಮಯದಲ್ಲಿ ನನಗೆ ಸಹಾಯ ಮಾಡಲು ನೀವು ಯಾವಾಗಲೂ ಇರಬೇಕೆಂದು ಸೂಚಿಸುವ ಸರಳವಾದ ದಾರ ಇದಾಗಿದೆʼʼ ಎಂದಿದ್ದಾರೆ.
ʻʻ16ನೇ ಶತಮಾನದಲ್ಲಿ ರಾಣಿ ಕರ್ಣಾವತಿ ಸಮಸ್ಯೆಯಲ್ಲಿ ಸಿಲುಕಿದ್ದರು. ಅವರ ಸಾಮ್ರಾಜ್ಯದ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ ಕರ್ಣಾವತಿ ರಾಖಿಯೊಂದನ್ನು ಮೊಘಲ್ ದೊರೆ ಹುಮಾಯುನ್‌ಗೆ ಕಳುಹಿಸಿಕೊಟ್ಟು ಸಹೋದರನಾಗಿ ನನ್ನ ರಕ್ಷಣೆಗೆ ಬರಬೇಕು ಎಂದು ಕೋರಿದ್ದರು. ರಕ್ಷಾ ಬಂಧನದ ಕುರಿತು ಅರಿವಿಲ್ಲದ ಹುಮಾಯುನ್ ಈ ಕುರಿತು ತನ್ನ ಆಸ್ಥಾನದಲ್ಲಿದ್ದ ಹಿಂದೂ ಸೇವಕರ ಬಳಿ ಕೇಳಿ ತಿಳಿದುಕೊಂಡು ಕರ್ಣಾವತಿಯ ರಕ್ಷಣೆಗೆ ಮುಂದಾಗಿದ್ದರು. ಈ ಘಟನೆಯನ್ನು ಉಲ್ಲೇಖಿಸಿರುವ ಸುಧಾ ಮೂರ್ತಿ ಅಂದು ಆರಂಭಗೊಂಡ ರಕ್ಷಾ ಬಂಧನದ ಹಬ್ಬ ಈಗಲೂ ಮುಂದುವರಿಯುತ್ತಿದೆʼʼ ಎಂದು ಪೋಸ್ಟ್ ಮಾಡಿದ್ದರು.
ಈ ಪೋಸ್ಟ್‌ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಮೂಲಕ ಸುಧಾ ಮೂರ್ತಿ ಮೊದಲ ಬಾರಿಗೆ ಟ್ರೋಲ್ ಆಗಿದ್ದರು. ರಕ್ಷಾ ಬಂಧನಕ್ಕೆ ಬಹಳ ಶ್ರೀಮಂತ ಇತಿಹಾಸವಿದೆ. ರಾಣಿ ಕರ್ಣಾವತಿ ಆಪತ್ತಿನಲ್ಲಿದ್ದಾಗ, ರಾಜ ಹುಮಾಯೂನ್‌ಗೆ ಒಡಹುಟ್ಟಿದವರ ಸಂಕೇತವಾಗಿ ರಾಖಿಯನ್ನು ಕಳುಹಿಸಿದ್ದರು. ಅಂದಿನಿಂದ ರಕ್ಷಾ ಬಂಧನದ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ ಎಂದು ಸುಧಾ ಮೂರ್ತಿ ಹೇಳಿದ್ದರು.
ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋಗೆ ಕಮೆಂಟ್ ಮಾಡಿದ್ದು, ʻʻಈ ಘಟನೆ ಎಂದಿಗೂ ಸಂಭವಿಸಲಿಲ್ಲ. ನಿಮ್ಮ ಐತಿಹಾಸಿಕ ಜ್ಞಾನವನ್ನು ಸುಧಾರಿಸಲು ವಾರಕ್ಕೆ 100 ಗಂಟೆಗಳ ಕಾಲ ಓದಿʼʼ ಎಂದಿದ್ದಾರೆ. ಮತ್ತೊಬ್ಬರು, ʻʻನೀವು ದಿನಕ್ಕೆ 20 ಗಂಟೆಗಳ ಕಾಲ ಇತಿಹಾಸವನ್ನು ಓದಬೇಕುʼʼ ಎಂದು ಟೀಕಿಸಿದ್ದರು.