ರಾಜಭವನ ಚಲೋ | ಕಾಂಗ್ರೆಸ್ ನಾಯಕರಿಗೆ ಅಚ್ಚರಿಯ ಹೇಳಿಕೆ ನೀಡಿದ ರಾಜ್ಯಪಾಲರು!
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟಿನಲ್ಲಿ ಶನಿವಾರ ಅಂತಿಮ ಹಂತ ತಲುಪಿದೆ. ಆದರೆ, ಅದೇ ವೇಳೆ ಕಾಂಗ್ರೆಸ್ ಮುಖಂಡರನ್ನು ಉದ್ದೇಶಿಸಿ ರಾಜಭವನದಲ್ಲಿ ಮಾತನಾಡಿರುವ ರಾಜ್ಯಪಾಲರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.;
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಒಂದು ಕಡೆ ರಾಜ್ಯ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಿರ್ಣಾಯಕ ಹಂತದಲ್ಲಿದ್ದು ವಾದ- ಪ್ರತಿವಾದ ಮಂಡನೆ ಬಿರುಸಾಗಿರುವಾಗಲೇ ಶನಿವಾರ, ಕಾಂಗ್ರೆಸ್ ನಾಯಕರು ರಾಜಭವನ ಚಲೋ ನಡೆಸಿದರು. ಈ ವೇಳೆ ರಾಜಭವನದಲ್ಲಿ ತಮಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ ರಾಜ್ಯಪಾಲ ತಾವರ್ ಚಂದ್ ಗೆಹಲೋಟ್ ಅವರು ನೀಡಿರುವ ಹೇಳಿಕೆ ಎಲ್ಲರ ಹುಬ್ಬೇರಿಸಿದೆ!
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟಿನಲ್ಲಿ ಶನಿವಾರ ಅಂತಿಮ ಹಂತ ತಲುಪಿದೆ.
ಆದರೆ, ಅದೇ ವೇಳೆ ಕಾಂಗ್ರೆಸ್ ಮುಖಂಡರನ್ನು ಉದ್ದೇಶಿಸಿ ರಾಜಭವನದಲ್ಲಿ ಮಾತನಾಡಿರುವ ರಾಜ್ಯಪಾಲರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಕ್ರಮ ವಿರೋಧಿಸಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಶನಿವಾರ ಬೆಳಿಗ್ಗೆ ವಿಧಾನಸೌಧದಿಂದ ರಾಜಭವನದವರೆಗೆ ರಾಜಭವನ ಚಲೋ ನಡೆಸಿದ ಕಾಂಗ್ರೆಸ್ ನಾಯಕರು ಬಳಿಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಪ್ರತಿಪಕ್ಷಗಳ ಮುಖಂಡರಾದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ವಿರುದ್ಧದ ಪ್ರಕರಣಗಳಲ್ಲೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಎಂದು ಒತ್ತಾಯಿಸಿದರು.
ಈ ವೇಳೆ ಸಿಎಂ ಮತ್ತು ಡಿಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ತಾವರ್ ಚಂದ ಗೆಹಲೋಟ್ ಅವರು, “ನಾನು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿಯೇ ಇಲ್ಲ” ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. “ನಾನು ನೇರವಾಗಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ನಡೆಸಿ ಎಂದು ಅನುಮತಿ ನೀಡಿಲ್ಲ. ಅವರ ವಿರುದ್ಧ ಸಲ್ಲಿಕೆಯಾಗಿರುವ ದೂರಿನ ಕುರಿತು ತನಿಖೆ ನಡೆಸಿ ಎಂದಷ್ಟೇ ಹೇಳಿದ್ದೇನೆ” ಎಂದು ಸಿಎಂ ಸಿದ್ದರಾಮಯ್ಯ ಅವರಿಗೇ ಹೇಳಿ ಬೆಚ್ಚಿಬೀಳಿಸಿದ್ದಾರೆ!
ರಾಜ್ಯಪಾಲರ ಈ ಹೇಳಿಕೆಯ ಬೆನ್ನಲ್ಲೇ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್, “ರಾಜ್ಯಪಾಲರ ಪೀಠ ಎಂಬುದು ಪವಿತ್ರವಾದದ್ದು. ಸಂವಿಧಾನವನ್ನು ರಕ್ಷಿಸುವ ಪೀಠ ಅದು. ಸರ್ಕಾರವನ್ನು ರಕ್ಷಿಸುವ ಪೀಠವಾಗಿರುವ ರಾಜ್ಯಪಾಲರ ಕಚೇರಿಯೇ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಬಳಕೆಯಾಗುತ್ತಿದೆ. ಈ ಕಚೇರಿಯಿಂದ ಅಂತಹ ಕೆಲಸ ಆಗಬಾರದು. ಹಾಗಾಗಿ ಎಲ್ಲಾ ವಿಚಾರಗಳಲ್ಲೂ ಪಕ್ಷಾತೀತವಾಗಿ ನಡೆದುಕೊಳ್ಳುವಂತೆ ಮನವಿ ಮಾಡಿದ್ದೇವೆ” ಎಂದು ಹೇಳಿದ್ದಾರೆ.