Honey Trap |ಹನಿಟ್ರ್ಯಾಪ್ ಪ್ರಕರಣ: ಯಾವ ತನಿಖೆ ಆಗುತ್ತದೋ ಆಗಲಿ, ನೋಟಿಸ್ ಬಂದರೆ ನೋಡೋಣ – ಸಚಿವ ರಾಜಣ್ಣ
ನೋಟಿಸ್ ನೀಡಿದರೆ ನೋಡೋಣ, ಯಾವ ರೀತಿಯ ತನಿಖೆ ನಡೆಯುತ್ತದೆಯೋ ಅದನ್ನೇ ನೋಡಬೇಕು. ಕೆಲವು ವಿಷಯಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ.;
ಕೆ. ಎನ್ ರಾಜಣ್ಣ
ಹನಿಟ್ರ್ಯಾಪ್ ಪ್ರಕರಣದ ವಿಚಾರಣೆ ಯಾವ ತನಿಖಾ ಸಂಸ್ಥೆ ಮಾಡಬೇಕು ಎಂಬುದನ್ನು ಸಿಎಂ ನಿರ್ಧರಿಸಲಿದ್ದಾರೆ. ಆ ಬಗ್ಗೆ ನೋಟಿಸ್ ಬಂದಾಗ ಉತ್ತರ ಕೊಟ್ಟರಾಯಿತು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ʻʻಈ ಪ್ರಕರಣದ ತನಿಖೆ ನಡೆಯುತ್ತಿದೆ ಮತ್ತು ಈ ಹಂತದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ನೋಟಿಸ್ ನೀಡಿದರೆ ನೋಡೋಣ. ಯಾವ ರೀತಿಯ ತನಿಖೆ ನಡೆಯುತ್ತದೆಯೋ ಅದನ್ನೇ ನೋಡಬೇಕು. ಕೆಲವು ವಿಷಯಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವ ಬಗ್ಗೆ ಅಂತಿಮ ನಿರ್ಧಾರ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರಿಗೆ ಬಿಟ್ಟಿದೆʼʼ ಎಂದು ಅವರು ತಿಳಿಸಿದರು.
"ನಮ್ಮ ಪಕ್ಷದವರಾಗಿರಬಹುದು ಅಥವಾ ಬೇರೆ ಪಕ್ಷದವರೇ ಇರಬಹುದು ಅಥವಾ ಬೆಂಗಳೂರು, ಮುಂಬೈನವರೂ ಭಾಗಿಯಾಗಿರಬಹುದು. ರಾಜಕೀಯೇತರ ವ್ಯಕ್ತಿಗಳ ಕೈವಾಡವೂ ಇರಬಹುದು. ಆದರೆ, ಯಾರೇ ಮಾಡಿದರೂ ಖಂಡನಾರ್ಹ. ಕಾನೂನು ಬಾಹಿರ ಕೃತ್ಯಗಳಿಗೆ ಕುಮ್ಮಕ್ಕು ನೀಡಿದವರಿಗೆ ಮತ್ತು ಈ ರೀತಿಯ ಕೃತ್ಯಕ್ಕೆ ಸಹಾಯ ಮಾಡಿದವರಿಗೆ ದೇವರು ಒಳ್ಳೆಯದನ್ನು ಮಾಡುವುದಿಲ್ಲ. ಇಂತಹವರು ಸಾರ್ವಜನಿಕ ಜೀವನದಲ್ಲಿ ಇರಬಾರದು" ಎಂದು ಅವರು ಅಭಿಪ್ರಾಯಪಟ್ಟರು.
ಇಂದು ರಾಜಣ್ಣ ವಿಚಾರಣೆ ಸಾಧ್ಯತೆ
ಹನಿಟ್ರ್ಯಾಪ್ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಮಂಗಳವಾರ ಅಥವಾ ಬುಧವಾರ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಯುಗಾದಿ ಹಾಗೂ ರಂಜಾನ್ ಹಬ್ಬಗಳ ರಜೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರಕರಣದ ವಿಚಾರಣೆ ನಡೆಸಿರಲಿಲ್ಲ. ಮಂಗಳವಾರದಿಂದ ಸಹಕಾರ ಸಚಿವ ರಾಜಣ್ಣ ಅವರ ಹನಿಟ್ರ್ಯಾಪ್ ಯತ್ನ ಪ್ರಕರಣದ ವಿಚಾರಣೆಗೆ ನಡೆಸಲಿದ್ದಾರೆ. ಈ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಸಚಿವರನ್ನು ಮಂಗಳವಾರ ಅಥವಾ ಬುಧವಾರ ವಿಚಾರಣೆಗೊಳಪಡಿಸಲು ಯೋಜಿಸಿದ್ದಾರೆ.