ರಾಜಭವನ V/s ರಾಜ್ಯ ಸರ್ಕಾರ | ಸಚಿವ ಸಂಪುಟ ಮಹತ್ವದ ತೀರ್ಮಾನ: ಬಿಜೆಪಿ-ಜೆಡಿಎಸ್ ನಾಯಕರಿಗೆ ಸಂಕಷ್ಟ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು(ಗುರುವಾರ) ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಮುಂದೆ ಬಾಕಿ ಇರುವ ಪ್ರಾಸಿಕ್ಯೂಷನ್ ಮನವಿ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ಬಾಕಿ ಇರುವ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಬಗ್ಗೆ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಲು ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಿದೆ.;
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು(ಗುರುವಾರ) ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಮುಂದೆ ಬಾಕಿ ಇರುವ ಪ್ರಾಸಿಕ್ಯೂಷನ್ ಮನವಿ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ಬಾಕಿ ಇರುವ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಬಗ್ಗೆ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಲು ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಿದೆ.
ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡದೇ ಇರುವ ವಿಚಾರಕ್ಕೆ ರಾಜ್ಯಪಾಲರಿಗೆ ನೆರವು ಮತ್ತು ಸಲಹೆ ನೀಡುವ ನಿರ್ಣಯವನ್ನು ಸಚಿವ ಸಂಪುಟ ಕೈಗೊಂಡಿದೆ. ಈ ಮೂಲಕ ರಾಜ್ಯ ಸರ್ಕಾರ, ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧದ ಪ್ರಕರಣ ಬಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರಿಗೆ ಸಲಹೆ ನೀಡಲು ಮುಂದಾಗಿದೆ.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧದ ಗಣಿ ಗುತ್ತಿಗೆ ಅನುಮತಿ ಆರೋಪ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧದ ಮೊಟ್ಟೆ ಹಗರಣ, ಮುರುಗೇಶ್ ನಿರಾಣಿ ವಿರುದ್ಧದ ಪ್ರಕರಣ ಹಾಗೂ ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣ ಸೇರಿ ಒಟ್ಟು 4 ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರಿಗೆ ಸಂವಿಧಾನದ ಆರ್ಟಿಕಲ್ 163 ರ ಅನ್ವಯ ಸಂಪುಟದ ಅಧಿಕಾರವನ್ನು ಬಳಸಿ ಸಲಹೆ ನೀಡಲು ಸಂಪುಟ ನಿರ್ಧಾರ ಕೈಗೊಂಡಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್, ʻʻಸಿಎಂ ನೇತೃತ್ವದ ಸಭೆಯಲ್ಲಿ 35 ವಿಷಯಗಳ ಕಾಲ ಚರ್ಚಿಸಿದ್ದೇವೆ. ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್ ಅನುಮತಿ ಕೋರಿ ಬಂದಿರುವ ಮನವಿಗಳಿಗೆ ಸಂಬಂಧಿಸಿದ ಹಲವು ಪ್ರಕರಣಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಇನ್ನು ಕೆಲವು ಪ್ರಕರಣ ಲೋಕಾಯುಕ್ತದಿಂದ ರಾಜ್ಯಪಾಲರಿಗೆ ಹೋಗಿದೆ. ಕೆಲವು ತನಿಖಾ ಸಂಸ್ಥೆಗಳ ವರದಿ ರಾಜ್ಯಪಾಲರಿಗೆ ಸಲ್ಲಿಕೆಯಾಗಿದೆ. ಅನೇಕ ಅನುಮೋದನೆ ಅರ್ಜಿಗಳು ರಾಜ್ಯಪಾಲರ ಸಮಕ್ಷಮದಲ್ಲಿ ಬಾಕಿ ಇವೆ. ಈ ಅರ್ಜಿಗಳಲ್ಲಿ ಕೆಲವು ಚಾರ್ಜ್‌ಶೀಟ್ ಸಲ್ಲಿಕೆಗೆ ಒಪ್ಪಿಗೆ ಬಾಕಿ ಇವೆ. ಭ್ರಷ್ಟಾಚಾರ ತಡೆಕಾಯ್ದೆ ಸೆಕ್ಷನ್ 19ರಡಿ ಅನುಮೋದನೆಗೆ ಬಾಕಿ ಇದೆ. 17ಎ ಅಡಿಯಲ್ಲೂ ರಾಜ್ಯಪಾಲರ ಪೂರ್ವಾನುಮತಿಗೆ ಬಾಕಿ ಇದೆ. ಆ ಎಲ್ಲಾ ಪ್ರಕರಣಗಳ ಬಗ್ಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳುವಂತೆ 163ರ ಅನ್ವಯ ರಾಜ್ಯಪಾಲರಿಗೆ ಸಲಹೆ ನೀಡಲು ಸಂಪುಟ ನಿರ್ಣಯಿಸಿದೆʼʼ ಎಂದು ತಿಳಿಸಿದರು.
ʻʻಅಗಸ್ಟ್ 1 ರಂದು ಕ್ಯಾಬಿನೆಟ್ ಸಭೆ ನಡದಿತ್ತು. ಸಿಎಂ ಅವತ್ತು ಡಿಸಿಎಂಗೆ ಸಭೆ ನಡೆಸಲು ಸೂಚಿಸಿದ್ದರು. ಆರ್ಟಿಕಲ್ 163ರ ಅನ್ವಯ ನೆರವು ಮತ್ತು ಸಲಹೆಗಳನ್ನು ರಾಜ್ಯಪಾಲರಿಗೆ ನೀಡಿದ್ದೆವು. ಆ ಸಭೆ ಆದಮೇಲೆ ಕ್ಯಾಬಿನೆಟ್ ನಿರ್ಣಯವನ್ನು ದೃಢೀಕರಿಸಲು ಇಂದು ಸಭೆ ನಡೆಯಿತು. ದೃಢೀಕರಣ ಸಂದರ್ಭದಲ್ಲಿ ಸಿಎಂ ತಾವಿರುವುದು ಸೂಕ್ತ ಅಲ್ಲ ಎಂದು ಸಭೆಯಿಂದ ಹೊರಗೆ ಇದ್ದರು. ಡಿಸಿಎಂ ನೇತೃತ್ವದಲ್ಲಿ ಸಭೆ ಆಗಿ ಆಗಸ್ಟ್ 1ರ ನಿರ್ಣಯವನ್ನು ಇಂದು ದೃಢೀಕರಿಸಿದ್ದೇವೆʼʼ ಎಂದು ಸ್ಪಷ್ಟಪಡಿಸಿದರು.
2021ರ ಡಿ.9ರಂದು ಜೊಲ್ಲೆ ವಿರುದ್ಧ ರಾಜ್ಯಪಾಲರಿಗೆ ಅರ್ಜಿ ಸಲ್ಲಿಕೆಯಾಗಿದೆ. 2024ರ ಫೆಬ್ರವರಿ 26ರಂದು ನಿರಾಣಿ ವಿರುದ್ಧ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಲಾಗಿದೆ. 2023ರ ನವೆಂಬರ್ 21ರಂದು ಎಚ್ ಡಿ ಕುಮಾರಸ್ವಾಮಿ ವಿರುದ್ಧವೂ ಸಹ ಅರ್ಜಿ ಸಲ್ಲಿಕೆಯಾಗಿದೆ. ಅಲ್ಲದೇ ಕುಮಾರಸ್ವಾಮಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ಸಲ್ಲಿಕೆಗೆ ಲೋಕಾಯುಕ್ತ ಎಸ್ಐಟಿ ಅನುಮತಿ ಕೇಳಿತ್ತು. ಇದಕ್ಕೆ 2024ರ ಜುಲೈ 29ರಂದು ರಾಜ್ಯಪಾಲರು ಹೆಚ್ಚಿನ ವಿವರ ಕೇಳಿದ್ದರು. ಅದರಂತೆ ಇದೀಗ ರಾಜ್ಯಪಾಲರಿಗೆ ಲೋಕಾಯುಕ್ತ ಎಸ್ಐಟಿ ಹೆಚ್ಚಿನ ವಿವರಣೆ ಕಳುಹಿಸಿದೆ. ರೆಡ್ಡಿ ಪ್ರಕರಣದಲ್ಲಿ ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಈ ಪ್ರಕರಣಗಳ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲು 163ರ ಅನ್ವಯ ರಾಜ್ಯಪಾಲರಿಗೆ ಸಲಹೆ ನೀಡಲು ಸಂಪುಟ ನಿರ್ಧಾರ ಕೈಗೊಂಡಿದೆ ಎಂದು ಮಾಹಿತಿ ನೀಡಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಪ್ರಕರಣದಲ್ಲಿ ಖಾಸಗಿ ವ್ಯಕ್ತಿ ದೂರು ಸಲ್ಲಿಸಿದರು. ಈ ಬಗ್ಗೆ ತರಾತುರಿಯಲ್ಲಿ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿದ್ದರು. ಆದರೆ ಈ ನಾಲ್ಕು ಪ್ರಕರಣದಲ್ಲಿ ತನಿಖೆ ಆಗಿದೆ ಹಾಗೂ ಎರಡು ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆ ಆಗಿದೆ. ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದರೂ ಏನೂ ಕ್ರಮ ಆಗಿಲ್ಲ. ಹೀಗಿರುವಾಗ ಸಚಿವ ಸಂಪುಟ ಈ ಸಲಹೆ ಕೊಡುವುದು ಸೂಕ್ತ ಎಂದರು. ಜನ ಸಂಘಟನೆಗಳು ಕೂಡಾ ಈ ಆಗ್ರಹ ಮಾಡುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಲ್ಲಿ ಯಾವುದೇ ದ್ವೇಷದ ರಾಜಕಾರಣ ಇಲ್ಲ ಎಂದು ಅವರು ಸಂಪುಟ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಒಟ್ಟಿನಲ್ಲಿ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಹಿಂದೆ ಬಿದ್ದಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೂ ರಾಜ್ಯ ಸರ್ಕಾರ ಶಾಕ್ ಕೊಡಲು ಮುಂದಾಗಿದೆ. ಮತ್ತೊಂದೆಡೆ ರಾಜಭವನ ವರ್ಸಸ್ ರಾಜ್ಯ ಸರ್ಕಾರೆನ್ನುವ ಸ್ಥಿತಿ ನಿರ್ಮಾಣವಾಗಿದೆ.