ತುಸು ಬಿಡುವು ಕೊಟ್ಟ ಮಳೆರಾಯ: ಈ ಬಾರಿ 30 ವರ್ಷಗಳಲ್ಲೇ ದಾಖಲೆ ಮಳೆ

ಒಟ್ಟಾರೆ ವಾಡಿಕೆ ಪ್ರಕಾರ, ರಾಜ್ಯದಲ್ಲಿ 463 ಮಿ.ಮೀ. ಮಳೆಯಾಗಬೇಕು. ಆದರೆ, ಈ ಬಾರಿ, 593 ಮಿ.ಮೀ ಮಳೆಯಾಗುವ ಮೂಲಕ ಶೇ.28ರಷ್ಟು ಅಧಿಕ ಮಳೆಯಾಗಿದೆ. 1994ರಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.30ರಷ್ಟು ಹೆಚ್ಚಿನ ಮಳೆಯಾಗಿತ್ತು.

Update: 2024-08-03 07:11 GMT
ರಾಜ್ಯದಲ್ಲಿ ಮಳೆ ಬಿಡುವು ಕಂಡಿದೆ.
Click the Play button to listen to article

ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ವಾರಗಳಿಂದ ಎಡಬಿಡದೆ ಸುರಿದ ಮಳೆ, ಎರಡು ದಿನಗಳಿಂದ ಕೆಲಮಟ್ಟಿಗೆ ಬಿಡುವು ಕೊಟ್ಟಿದೆ.

ರಾಜ್ಯದಲ್ಲಿ ಈ ಭಾರೀ ಮುಂಗಾರು ಮಳೆ ಉತ್ತಮವಾಗಿದ್ದು, ಇದು  ಕಳೆದ ಮೂರು ದಶಕದಲ್ಲಿ ಈ ಬಾರಿ ದಾಖಲೆಯ ಮಳೆಯಾಗಿದೆ. ಕಳೆದ ವರ್ಷ ಮುಂಗಾರು ಅವಧಿಯಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.25ರಷ್ಟು, ಹಿಂಗಾರು ಅವಧಿಯಲ್ಲಿ ಶೇ.38ರಷ್ಟು ಮಳೆ ಕೊರತೆ ಉಂಟಾಗಿತ್ತು. ಹಾಗಾಗಿ ರಾಜ್ಯದಲ್ಲಿ ಭೀಕರ ಬರ ಸೃಷ್ಟಿಯಾಗಿತ್ತು. ಹಲವು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿತ್ತು. ಆದರೆ, ಈ ಬಾರಿ ಮುಂಗಾರು ಅವಧಿಯಲ್ಲಿ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದೆ.

ಮುಂಗಾರು ಅವಧಿಯ ನಾಲ್ಕು ತಿಂಗಳ ಪೈಕಿ ಪ್ರಸಕ್ತ ಜೂನ್‌ ಮತ್ತು ಜುಲೈ ಅವಧಿಯಲ್ಲಿ ಸುರಿದ ಮಳೆಯು 1994ರ ನಂತರ ಸುರಿದ ಅತಿ ಹೆಚ್ಚು ಹಾಗೂ ದಾಖಲೆಯ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಅಂಕಿ-ಅಂಶಗಳು ದೃಢಪಡಿಸಿವೆ.

ಜೂನ್‌ ಮತ್ತು ಜುಲೈ ಅವಧಿಯಲ್ಲಿ ದಕ್ಷಿಣ ಒಳನಾಡಿನಲ್ಲಿ 202 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.42ರಷ್ಟು ಹೆಚ್ಚು ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ 283 ಮಿ.ಮೀ, ಶೇ.31ರಷ್ಟು ಹೆಚ್ಚು, ಮಲೆನಾಡಿನಲ್ಲಿ 1,199 ಮಿ.ಮೀ, ಶೇ.28ರಷ್ಟು ಹೆಚ್ಚು ಹಾಗೂ ಕರಾವಳಿಯಲ್ಲಿ 2,409 ಮಿ.ಮೀ. ಮಳೆಯಾಗಿದ್ದು, ವಾಡಿಕೆ ಪ್ರಮಾಣಕ್ಕಿಂತ ಶೇ.24ರಷ್ಟು ಹೆಚ್ಚಿನ ಮಳೆಯಾಗಿದೆ.

ಒಟ್ಟಾರೆ ವಾಡಿಕೆ ಪ್ರಕಾರ, ಜೂನ್-‌ ಜುಲೈ ಮಾಸಿಕದಲ್ಲಿ ರಾಜ್ಯದಲ್ಲಿ 463 ಮಿ.ಮೀ. ಮಳೆಯಾಗಬೇಕು. ಆದರೆ, ಈ ಬಾರಿ, 593 ಮಿ.ಮೀ ಮಳೆಯಾಗುವ ಮೂಲಕ ಶೇ.28ರಷ್ಟು ಅಧಿಕ ಮಳೆಯಾಗಿದೆ. 1994ರಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.30ರಷ್ಟು ಅಧಿಕ ಮಳೆಯಾಗಿತ್ತು.

ಕರಾವಳಿಯಲ್ಲಿಯೂ ಎರಡು ದಶಕದ ದಾಖಲೆ ಮಳೆ ವರದಿಯಾಗಿದೆ. ಜುಲೈ ಅಂತ್ಯದ ವರೆಗೆ ವಾಡಿಕೆ ಪ್ರಕಾರ 1940 ಮಿ.ಮೀ ಮಳೆಯಾಗಬೇಕು. ಆದರೆ, ಈ ಬಾರಿ 2409 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.24ರಷ್ಟು ಹೆಚ್ಚಾಗಿದೆ. 1999ರಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.30ರಷ್ಟು ಹೆಚ್ಚಿನ ಮಳೆಯಾಗಿತ್ತು. 2003ರಲ್ಲಿ ಶೇ.10ರಷ್ಟು ಹಾಗೂ 2013ರಲ್ಲಿ ಶೇ.17ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಅಂಕಿ ಅಂಶ ಹೇಳಿವೆ.

ಈವರೆಗಿನ ಮುಂಗಾರು ಮಳೆ ಪ್ರಕಾರ, ಮಂಡ್ಯ ಜಿಲ್ಲೆಯಲ್ಲಿ ವಾಡಿಕೆಯಂತೆ 109.2 ಮಿ.ಮೀ ಮಳೆಯಾಗಬೇಕು. ಆದರೆ, ಈ ಬಾರಿ 175.4 ಮಿ.ಮೀ ನಷ್ಟು ಮಳೆಯಾಗುವ ಮೂಲಕ ಬರೋಬ್ಬರಿ ಶೇ.61ರಷ್ಟು ಹೆಚ್ಚಿನ ಮಳೆಯಾಗಿದೆ. ಉಳಿದಂತೆ ಬೆಳಗಾವಿಯಲ್ಲಿ ವಾಡಿಕೆಗಿಂತ ಶೇ.60ರಷ್ಟು ಹೆಚ್ಚಿನ ಮಳೆಯಾಗಿದೆ. ಹೀಗೆ, ರಾಜ್ಯದ 31 ಜಿಲ್ಲೆಗಳ ಪೈಕಿ 14 ಜಿಲ್ಲೆಯಲ್ಲಿ ವಾಡಿಕೆಯಷ್ಟು (ಶೇ-19 ರಿಂದ ಶೇ.+19 ರಷ್ಟು), 16 ಜಿಲ್ಲೆಯಲ್ಲಿ ( ಶೇ.+20 ರಿಂದ ಶೇ.+59 ರಷ್ಟು) ಹಾಗೂ ಒಂದು ಜಿಲ್ಲೆಯಲ್ಲಿ (ಶೇ+60 ರಷ್ಟು) ಮಳೆಯಾಗಿದೆ.

ಜುಲೈ ಅವಧಿಯಲ್ಲಿ 263 ಮಿ.ಮೀ ಮಳೆಯಾಗಬೇಕು. ಆದರೆ, ಈ ಬಾರಿ 390 ಮಿ.ಮೀ ಮಳೆಯಾಗುವ ಮೂಲಕ ಶೇ.48ರಷ್ಟು ಅಧಿಕ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.27ರಷ್ಟು, ಉತ್ತರ ಒಳನಾಡಿನಲ್ಲಿ ಶೇ.22ರಷ್ಟು, ಮಲೆನಾಡಿನಲ್ಲಿ ವಾಡಿಕೆಗಿಂತ ಶೇ.64ರಷ್ಟು ಹಾಗೂ ಕರಾವಳಿಯಲ್ಲಿ ಶೇ.54ರಷ್ಟು ಅಧಿಕ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.

Tags:    

Similar News