"ಮತಗಳ್ಳತನ": ರಾಹುಲ್ ಆರೋಪಕ್ಕೆ ಡಿಸಿಎಂ, ಸಿಎಂ ದನಿ, ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಸ್ವಾಗತಿಸಿದ್ದಾರೆ. ವಿಶೇಷವಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೇಲೆ ಗಮನ ಕೇಂದ್ರೀಕರಿಸಿ ಮಾತನಾಡಿದ್ದಾರೆ.;

Update: 2025-07-25 05:12 GMT

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ "ಮತಗಳ್ಳತನ" ನಡೆದಿದೆ ಎಂಬ ಲೋಕಸಭೆ ವಿಪಕ್ಷ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಗಂಭೀರ ಆರೋಪಕ್ಕೆ ಇದೀಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಲವಾಗಿ ದನಿಗೂಡಿಸಿದ್ದಾರೆ. ಚುನಾವಣಾ ಆಯೋಗವನ್ನು ಬಳಸಿಕೊಂಡು ಬಿಜೆಪಿ ಅಕ್ರಮ ಎಸಗಿದೆ ಎಂದು ಆರೋಪಿಸಿರುವ ಇಬ್ಬರೂ ನಾಯಕರು, ಈ ಬಗ್ಗೆ ತಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಪ್ರತಿಪಾದಿಸಿದ್ದು, ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ಬೆಂಗಳೂರು ಗ್ರಾಮಾಂತರದಲ್ಲಿ ಅಕ್ರಮ ನಡೆದಿದೆ: ಡಿಸಿಎಂ ಡಿಕೆಶಿ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಸ್ವಾಗತಿಸಿದ್ದಾರೆ. ವಿಶೇಷವಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೇಲೆ ಗಮನ ಕೇಂದ್ರೀಕರಿಸಿದ ಅವರು, "ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ವೇಳೆ ಅನೇಕ ಗೋಲ್‌ಮಾಲ್‌ಗಳು ನಡೆದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನಾನು ವೈಯಕ್ತಿಕವಾಗಿ ತನಿಖೆ ಮಾಡಿದ್ದೇನೆ," ಎಂದು ಹೇಳುವ ಮೂಲಕ, ತಮ್ಮ ಸಹೋದರ ಡಿ.ಕೆ. ಸುರೇಶ್ ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.

ರಾಹುಲ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಸಂಪೂರ್ಣ ಬೆಂಬಲ

ಡಿಸಿಎಂ ಹೇಳಿಕೆಗೆ ಪೂರಕವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. "ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯ ಫಲಿತಾಂಶವು ಕೇವಲ ಅನಿರೀಕ್ಷಿತವಾಗಿರಲಿಲ್ಲ, ಅದು ಹಲವಾರು ಅನುಮಾನಗಳನ್ನೂ ಹುಟ್ಟುಹಾಕಿತ್ತು. ಬಿಜೆಪಿಯು ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ನಡೆಸಿದ ಅಕ್ರಮವೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣ ಎಂಬ ಸತ್ಯ ಇದೀಗ ಬಯಲಾಗುತ್ತಿದೆ," ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

"ಕರ್ನಾಟಕದಲ್ಲಿ ಚುನಾವಣಾ ಆಯೋಗವು ಅಕ್ರಮಗಳನ್ನು ನಡೆಸಿರುವುದಕ್ಕೆ ನೂರಕ್ಕೆ ನೂರರಷ್ಟು ಸಾಕ್ಷ್ಯಗಳಿವೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ನಾನು ಸಂಪೂರ್ಣವಾಗಿ ಅನುಮೋದಿಸುತ್ತೇನೆ," ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. "ರಾಜ್ಯದ ಹಲವಾರು ಕ್ಷೇತ್ರಗಳಲ್ಲಿ ಇದ್ದಕ್ಕಿದ್ದಂತೆ ಹೊಸ ಮತದಾರರ ಹೆಸರುಗಳು ಸೇರ್ಪಡೆಯಾಗಿರುವುದು ಮತ್ತು ಹಳೆಯ ಮತದಾರರ ಹೆಸರುಗಳು ರದ್ದಾಗಿರುವುದರ ಬಗ್ಗೆ ನಮ್ಮ ಅನೇಕ ಕಾರ್ಯಕರ್ತರು ಈ ಹಿಂದೆಯೇ ದೂರುಗಳನ್ನು ನೀಡಿದ್ದರು. ನರೇಂದ್ರ ಮೋದಿ ಅವರ ಚುನಾವಣಾ ಗೆಲುವುಗಳಿಗೆ ಅವರ ಜನಪ್ರಿಯತೆಯಾಗಲಿ, ಬಿಜೆಪಿ ಸರ್ಕಾರದ ಸಾಧನೆಗಳಾಗಲಿ ಕಾರಣವಲ್ಲ. ಅದು ಚುನಾವಣಾ ಆಯೋಗದ ಮೂಲಕ ನಡೆಸಿದ 'ಮತಗಳ್ಳತನ'ವೇ ಕಾರಣ ಎನ್ನುವ ಸತ್ಯ ಈಗ ಬಯಲಾಗುತ್ತಿದೆ," ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Similar News