ರಾಜ್ಯದ ಕಾನೂನು ಸುವ್ಯವಸ್ಥೆ: ಕಾಂಗ್ರೆಸ್‌ ಸರ್ಕಾರಕ್ಕೆ ರಾಹುಲ್‌ ಗಾಂಧಿ ತರಾಟೆ?

Update: 2024-06-13 10:50 GMT

ಮಾಜಿ ಮುಖ್ಯಮಂತ್ರಿ  ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧದ  ಪೋಕ್ಸೋ  (POCSO ) ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಲು ಮತ್ತು ಸಾಲು ಸಾಲು ಕೊಲೆ ಮತ್ತಿತರ ಅಪರಾಧ ಪ್ರಕರಣಗಳ ಹೆಚ್ಚಳ ಆಗುತ್ತಿರುವ ಸಂಬಂಧ ಕಾಂಗ್ರೆಸ್‌ ನಾಯಕ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯ ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಮಂಗಳವಾರ ರಾತ್ರಿ ವಯನಾಡ್‌ಗೆ ತೆರಳುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ ರಾಹುಲ್‌ ಗಾಂಧಿ ಅವರು ರಾಜ್ಯದಲ್ಲಿ ಅಲ್ಲಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳು ರಾಷ್ಟ್ರವ್ಯಾಪಿ ಸುದ್ದಿಯಲ್ಲಿರುವುದು ಮತ್ತು ಇಂತಹ ಘಟನೆಗಳಿಂದ ರಾಜ್ಯದ ಕಾಂಗ್ರೆಸ್‌ ಸರ್ಕಾರ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುತ್ತಿರುವುದರ ಬಗ್ಗೆ ಚರ್ಚೆಯಾಗುತ್ತಿರುವುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಜತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಗೃಹ ಇಲಾಖೆಯ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆಯೂ ಎಚ್ಚರಿಕೆ ಮಾತುಗಳನ್ನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹುಬ್ಬಳ್ಳಿಯಲ್ಲಿ ನಡೆದ ಯುವತಿಯರಿಬ್ಬರ ಪ್ರತ್ಯೇಕ ಕೊಲೆ ಪ್ರಕರಣಗಳು, ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಮತ್ತು ಲೈಂಗಿಕ ಹಗರಣ ಪ್ರಕರಣ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ  ವಿರುದ್ಧದ ಪೋಕ್ಸೋ ಪ್ರಕರಣ ಹಾಗೂ ಚಿತ್ರನಟ ದರ್ಶನ್‌  ಎದುರಿಸುತ್ತಿರುವ ಕೊಲೆ ಪ್ರಕರಣ, ಹೀಗೆ ಒಂದಲ್ಲ ಒಂದು ಪ್ರಕರಣಗಳು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದನ್ನು ಸಾಬೀತುಪಡಿಸುತ್ತಿವೆ. 

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಬುಧವಾರ ಬೆಳಿಗ್ಗೆ ರಾಜ್ಯದ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ನಡೆಸಿ ಎಲ್ಲಾ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.  ಯಡಿಯೂರಪ್ಪ ಅವರ ಪೋಕ್ಸೋ ಪ್ರಕರಣದಲ್ಲೂ ಸುಮಾರು ಮೂರು ತಿಂಗಳ ಕಾಲ ವಿಳಂಬವಾಗಿದ್ದ ಪ್ರಕರಣದ ತನಿಖೆ ಚುರುಕುಗೊಳ್ಳಲು ಕಾರಣವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Tags:    

Similar News