ಅರ್ಚಕರ ಕುಟುಂಬ ಸಾಮೂಹಿಕ ಆತ್ಮಹತ್ಯೆಗೆ ಯತ್ನ: ತಂದೆ, ಮಗ ಸಾವು, ಇಬ್ಬರ ಸ್ಥಿತಿ ಗಂಭೀರ
ಪೊಲೀಸರು ಘಟನಾ ಸ್ಥಳವನ್ನು ಪರಿಶೀಲಿಸಿದಾಗ, ಮನೆಯ ಹಾಲ್‌ನಲ್ಲಿ ಮದ್ಯದ ಬಾಟಲಿಗಳು ಮತ್ತು ಕ್ರಿಮಿನಾಶಕದ ಬಾಟಲಿಗಳು ಪತ್ತೆಯಾಗಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹೆಗ್ಗನಹಳ್ಳಿಯಲ್ಲಿ ಅರ್ಚಕರೊಬ್ಬರ ಕುಟುಂಬ ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಈ ದುರಂತದಲ್ಲಿ ತಂದೆ ಮತ್ತು ಮಗ ಮೃತಪಟ್ಟಿದ್ದು, ತಾಯಿ ಹಾಗೂ ಮತ್ತೊಬ್ಬ ಮಗನ ಸ್ಥಿತಿ ಗಂಭೀರವಾಗಿದೆ.
ಪೌರೋಹಿತ್ಯ ವೃತ್ತಿ ನಡೆಸುತ್ತಿದ್ದ 60 ವರ್ಷದ ಕುಮಾರಪ್ಪ, ಅವರ ಪತ್ನಿ ರಮಾ (55), ಹಾಗೂ ಮಕ್ಕಳಾದ ಅರುಣ್ ಮತ್ತು ಅಕ್ಷಯ್ ಅವರು ಗುರುವಾರ ಸಂಜೆ ಮನೆಯಲ್ಲಿ ಒಟ್ಟಿಗೆ ಕ್ರಿಮಿನಾಶಕ ಸೇವಿಸಿದ್ದಾರೆ. ಹಿರಿಯ ಮಗ ಅರುಣ್ ಕ್ರಿಮಿನಾಶಕ ಸೇವಿಸಿದ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆಯಲ್ಲಿ ತಂದೆ ಕುಮಾರಪ್ಪ ಹಾಗೂ ಹಿರಿಯ ಮಗ ಅರುಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾಯಿ ರಮಾ ಮತ್ತು ಕಿರಿಯ ಮಗ ಅಕ್ಷಯ್ ನೋವಿನಿಂದ ನರಳುತ್ತಿದ್ದನ್ನು ಕಂಡ ಸ್ಥಳೀಯರು, ತಕ್ಷಣ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಸಾಲದ ಬಾಧೆ ಶಂಕೆ
ಪೊಲೀಸರು ಘಟನಾ ಸ್ಥಳವನ್ನು ಪರಿಶೀಲಿಸಿದಾಗ, ಮನೆಯ ಹಾಲ್‌ನಲ್ಲಿ ಮದ್ಯದ ಬಾಟಲಿಗಳು ಮತ್ತು ಕ್ರಿಮಿನಾಶಕದ ಬಾಟಲಿಗಳು ಪತ್ತೆಯಾಗಿವೆ. ಕುಟುಂಬವು ಸಾಲದ ಬಾಧೆಯಿಂದ ಈ ಕಠಿಣ ನಿರ್ಧಾರಕ್ಕೆ ಬಂದಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.
ಮಾಹಿತಿ ತಿಳಿದ ತಕ್ಷಣ ಚಿಕ್ಕಜಾಲ ಪೊಲೀಸರು ಮತ್ತು ದೇವನಹಳ್ಳಿ ಎಸಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.