ರಹೀಂ ಹತ್ಯೆ ಪ್ರಕರಣ: ಭುಗಿಲೆದ್ದ ಆಕ್ರೋಶ, ಸುರತ್ಕಲ್‌ನಲ್ಲಿ ಬಸ್‌ಗೆ ಕಲ್ಲು ತೂರಾಟ
ಉಳ್ಳಾಲ ತಾಲ್ಲೂಕಿನ ಕುತ್ತಾರಿನಿಂದ ಹೊರಟ ಅಂತಿಮ ಯಾತ್ರೆಯು ಮಂಗಳೂರಿನ ನಂತೂರು, ಪಡೀಲ್, ಅಡ್ಯಾರ್, ಅರ್ಕುಳ, ಫರಂಗಿಪೇಟೆ, ಬಿ.ಸಿ.ರೋಡ್ ಮಾರ್ಗವಾಗಿ ಸಾಗಿತು.;
ಬಂಟ್ವಾಳ ತಾಲೂಕಿನ ಇರಾ ಕೋಡಿ ಎಂಬಲ್ಲಿ ಹತ್ಯೆಗೊಳಗಾದ ಅಬ್ದುಲ್ ರಹೀಂ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು. ಅಂತಿಮ ಯಾತ್ರೆ ಸಾಗುವ ವೇಳೆ ಫರಂಗಿಪೇಟೆ ಮತ್ತು ಬಿ.ಸಿ.ರೋಡ್ ನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಉಳ್ಳಾಲ ತಾಲ್ಲೂಕಿನ ಕುತ್ತಾರಿನಿಂದ ಹೊರಟ ಅಂತಿಮ ಯಾತ್ರೆಯು ಮಂಗಳೂರಿನ ನಂತೂರು, ಪಡೀಲ್, ಅಡ್ಯಾರ್, ಅರ್ಕುಳ, ಫರಂಗಿಪೇಟೆ, ಬಿ.ಸಿ.ರೋಡ್ ಮಾರ್ಗವಾಗಿ ಸಾಗಿತು.
ರಹೀಂ ಪಾರ್ಥಿವ ಶರೀರವನ್ನು ಹೊತ್ತ ಆಂಬುಲೆನ್ಸ್ ಫರಂಗಿಪೇಟೆಯ ಬಳಿ ಸಾಗುತ್ತಿದ್ದಂತೆಯೇ ಅಲ್ಲಿ ಸೇರಿದ್ದವರು ಅಂತಿಮ ನಮನ ಸಲ್ಲಿಸಿದರು. ಫರಂಗಿಪೇಟೆಯ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಬಿ.ಸಿ.ರೋಡ್‌ನ ಮಿತ್ತಬೈಲ್ ಜುಮ್ಮಾ ಮಸೀದಿ ಬಳಿ ತಲುಪುವಾಗ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಬಿ.ಸಿ.ರೋಡ್‌ನಲ್ಲೂ ಬಹುತೇಕ ಅಂಗಡಿ ಮಳಿಗೆಗಳು ಮುಚ್ಚಿದ್ದವು. ತೆರೆದಿದ್ದ ಕೆಲವು ಮಳಿಗೆಗಳನ್ನು ಕೆಲ ಆಕ್ರೋಶಿತ ಯುವಕರು ಬಲವಂತದಿಂದ ಮುಚ್ಚಿಸಿದರು. ಕೆಲಕಾಲ ರಸ್ತೆ ತಡೆಯನ್ನೂ ನಡೆಸಿದರು.
ಫರಂಗಿಪೇಟೆ ಹಾಗೂ ಬಿ.ಸಿ.ರೋಡ್‌ನಲ್ಲಿ ಅಂತಿಮ ಯಾತ್ರೆ ಸಾಗುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ಮತ್ತು ಮಂಗಳೂರು ನಡುವೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ರಹೀಂ ಅವರ ಸ್ವಗ್ರಾಮವಾದ ಕುರಿಯಾಳ ಗ್ರಾಮದ ಇರಾಕೋಡಿಯಲ್ಲಿರುವ ಅವರ ಮನೆಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತಿದೆ. ಅಲ್ಲಿನ ಮಸೀದಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.
ಸುರತ್ಕಲ್‌ನಲ್ಲಿ ಬಸ್‌ಗೆ ಕಲ್ಲು ತೂರಾಟ
ಮಂಗಳೂರಿನಲ್ಲಿ ಕೆಲವು ಸಿಟಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿವೆ. ಸುರತ್ಕಲ್ ನಿಂದ ಮಂಗಳೂರು, ಮುಕ್ಕ, ಹಳೆಯಂಗಡಿ, ಕಿನ್ನಿಗೋಳಿ ಮಾರ್ಗವಾಗಿ ಕಟೀಲಿಗೆ ಸಂಚರಿಸುವ ನಂದಿನಿ ಬಸ್‌ಗೆ ಸುರತ್ಕಲ್‌ನಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಆ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಬೇರೆ ಬಸ್‌ನಲ್ಲಿ ತೆರಳಿದರು. ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.