Pushpa 2 Movie | ಪ್ರೀಮಿಯರ್ ಶೋ ವೇಳೆ ನೂಕುನುಗ್ಗಲು; ಮಹಿಳೆ ಸಾವು, ಇಬ್ಬರು ಗಂಭೀರ

ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕ್ರೀನಿಂಗ್ ಸಮಯದಲ್ಲಿ ನಟನನ್ನು ನೋಡಲು ಗುಂಪು ಜಮಾಯಿಸಿದಾಗ ಈ ಅವಘಡ ಸಂಭವಿಸಿದೆ

Update: 2024-12-05 05:18 GMT
ಪುಪ್ಪ ಸಿನಿಮಾ

ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ʼಪುಷ್ಪ 2: ದಿ ರೂಲ್ʼ ಚಿತ್ರ ಗುರುವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಬುಧವಾರ ರಾತ್ರಿ ಹೈದರಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಪ್ರೀಮಿಯರ್ ಶೋ ವೇಳೆ ಉಂಟಾದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಸ್ಕ್ರೀನಿಂಗ್ ಸಮಯದಲ್ಲಿ ನಟನನ್ನು ನೋಡಲು ಗುಂಪು ಜಮಾಯಿಸಿದಾಗ ಈ ನೂಕುನುಗ್ಗಲು ಸೃಷ್ಟಿಯಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದಿಲ್‌ಸುಖ್‌ನಗರದ ರೇವತಿ ಎಂಬವರು ತಮ್ಮ ಪತಿ ಭಾಸ್ಕರ್ ಮತ್ತು ಇಬ್ಬರು ಮಕ್ಕಳೊಂದಿಗೆ ಪ್ರೀಮಿಯರ್ ಶೋಗೆ ಹಾಜರಾಗಿದ್ದರು. ರಾತ್ರಿ 10.30ರ ಸುಮಾರಿಗೆ ನಟ ಅಲ್ಲು ಅರ್ಜುನ್ ಆಗಮನದ ಮಾಹಿತಿ ಹಿನ್ನೆಲೆಯಲ್ಲಿ ನಟನನ್ನು ನೋಡಲು ಚಿತ್ರಮಂದಿರದಲ್ಲಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ಈ ಕಾಲ್ತುಳಿತ ಉಂಟಾಗಿ ಮಹಿಳೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 

ನಟ ಹಾಗೂ ಚಿತ್ರತಂಡದ ಸದಸ್ಯರ ಆಗಮನದ ಕುರಿತು ಚಿತ್ರಮಂದಿರದಿಂದ ಯಾವುದೇ ಪೂರ್ವ ಮಾಹಿತಿ ಲಭಿಸಿರಲಿಲ್ಲ. ಅಲ್ಲದೆ ಅದಕ್ಕೆ ತಕ್ಕಂತೆ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರಿ ಸಂಖ್ಯೆಯಲ್ಲಿ ಜನರು ಥಿಯೇಟರ್ ಒಳಗೆ ನುಗ್ಗಲು ಯತ್ನಿಸಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ ಮಹಿಳೆ ಉಸಿರುಗಟ್ಟಿ ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯ ಆಧಾರದಲ್ಲಿ ಪೊಲೀಸರು ತಿಳಿಸಿದ್ದಾರೆ. ಮಹಿಳೆ ಹಾಗೂ ಮಗುವಿಗೆ ಕಾರ್ಡಿಯೊ ಪಲ್ಮನರಿ ರಿಸಸಿಟೇಶನ್ (ಸಿಪಿಆರ್) ನೀಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಮಹಿಳೆ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಬಳಿಕ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಯೋಗ ನಡೆಸಿದರು.

ದುರ್ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಬೆಂಗಳೂರಿನಲ್ಲಿ'ಪುಷ್ಪ-2' ಮಿಡ್‌ ನೈಟ್‌ ಶೋ ರದ್ದು

ಈ ನಡುವೆ, ಬೆಂಗಳೂರಿನ ಹಲವು ಥಿಯೇಟರ್‌ಗಳಲ್ಲಿ ನಿಗದಿಯಾಗಿದ್ದ 'ಪುಷ್ಪ-2' ಮಿಡ್‌ ನೈಟ್‌ ಶೋಗಳೆಲ್ಲವನ್ನೂ ಕೂಡಲೇ ರದ್ದು ಮಾಡುವಂತೆ ಬೆಂಗಳೂರು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಸಮಯಪಾಲನೆ ಮಾಡದೆ ಅನಧಿಕೃತವಾಗಿ ಪುಷ್ಪ-2 ಸಿನಿಮಾ ಪ್ರದರ್ಶನ ಮಾಡುತ್ತಿರುವ ಚಿತ್ರಮಂದಿರಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಯಾ ವ್ಯಾಪ್ತಿಯ ಪೊಲೀಸರಿಗೂ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿರುವ ಥಿಯೇಟರ್‌ಗಳು ಹಾಗೂ ಚಿತ್ರಮಂದಿರಗಳಲ್ಲಿ ನಿಗದಿತ ಸಮಯಕ್ಕೂ ಮುನ್ನವೇ ಪುಷ್ಪ-2 ಸಿನಿಮಾ ಪ್ರದರ್ಶನ ಮಾಡುತ್ತಿರುವ ಬಗ್ಗೆ ನಿರ್ಮಾಪಕರ ಸಂಘವು ಜಿಲ್ಲಾಧಿಕಾರಿಗಳಿಗೆ ದೂರು ನೀಡಿತ್ತು. ಆ ಹಿನ್ನೆಲೆಯಲ್ಲಿ ಡಿಸಿ ಈ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಸಿನಿಮಾ ರೆಗ್ಯೂಲೇಷನ್‌ ಕಾಯ್ದೆಯ ಪ್ರಕಾರ ಬೆಳಿಗ್ಗೆ 6.30ರ ನಂತರವಷ್ಟೇ ಸಿನಿಮಾ ಪ್ರದರ್ಶನಕ್ಕೆ ಅವಕಾಶವಿದೆ. ಆದರೆ ಹಲವು ಥಿಯೇಟರ್‌ ಹಾಗು ಮಲ್ಟಿಪ್ಲೆಕ್ಸ್‌ಗಳಲ್ಲಿ ಅನಧಿಕೃತವಾಗಿ ಬೆಳಿಗ್ಗೆ 3 ಗಂಟೆಯಿಂದಲೇ ಪ್ರದರ್ಶನಗಳು ನಿಗದಿಯಾಗಿದ್ದವು. ಆ ಶೋಗಳಿಗೆ ಟಿಕೆಟ್‌ ಮಾರಾಟ ಮಾಡುತ್ತಿರುವುದು ಕೂಡ ಗಮನಕ್ಕೆ ಬಂದಿದ್ದು, ಕೂಡಲೇ ಈ ಅವಧಿ ಪೂರ್ವ ಪ್ರದರ್ಶನಗಳನ್ನು ನಿಲ್ಲಿಸುವಂತೆ ಸೂಚಿಸಿದ್ಧಾರೆ.

ʼಪುಷ್ಪ 2: ದಿ ರೂಲ್ʼ ಈ ಮೊದಲು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದ ʼಪುಷ್ಪʼ ಸಿನಿಮಾದ ಮುಂದುವರಿದ ಭಾಗವಾಗಿದ್ದು, ಅಲ್ಲು ಅರ್ಜುನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ, ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 

ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣ ಮಾಡಿದೆ. ಫಹಾದ್ ಫಾಸಿಲ್, ತಾರಕ್ ಪೊನ್ನಪ್ಪ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಸುಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಮೊದಲ ದಿನ 12 ಸಾವಿರಕ್ಕೂ ಅಧಿಕ ಶೋಗಳನ್ನು ಪಡೆದಿದೆ.

Tags:    

Similar News