Namma Metro Fare Hike | ದರ ಏರಿಕೆ ವಿರುದ್ಧದ ಹೋರಾಟಕ್ಕೆ ಕನ್ನಡಪರ, ಜನಪರ ಸಂಘಟನೆಗಳ ಬೆಂಬಲ
ದರ ಇಳಿಸುವವರೆಗೂ ಹೋರಾಟ ನಿಲ್ಲಿಸದಿರಲು ಮೆಟ್ರೋ ಪ್ರಯಾಣಿಕರ ವೇದಿಕೆ ನಿರ್ಧರಿಸಿದ್ದು, ಪ್ರಯಾಣಿಕರ ಹೋರಾಟ ಬೆಂಬಲಿಸಿ ಕನ್ನಡಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಕೂಡ ಬೀದಿಗಿಳಿಯಲು ಸಜ್ಜಾಗಿವೆ.;
ʼನಮ್ಮ ಮೆಟ್ರೋʼ ಪ್ರಯಾಣ ದರ ಏರಿಕೆ ವಿರುದ್ಧ ಜನಾಕ್ರೋಶ ಭುಗಿಲೇಳುತ್ತಿದೆ. ರಾಜಕೀಯ ಪಕ್ಷಗಳ ಪರಸ್ಪರ ಆರೋಪ, ಬಿಎಂಆರ್ಸಿಎಲ್ ಸಮರ್ಥನೆ, ಕಾಟಾಚಾರದ ದರ ಪರಿಷ್ಕರಣೆಯ ನಂತರವೂ ಪ್ರಯಾಣಿಕರ ಹೋರಾಟ ಮುಂದುವರಿದಿದೆ.
ಇದುವರೆಗೆ ಹೊಸತಾಗಿ ರೂಪುಗೊಂಡಿರುವ ಮೆಟ್ರೋ ಪ್ರಯಾಣಿಕರ ವೇದಿಕೆ ಪ್ರಯಾಣದರ ಹೆಚ್ಚಳ ವಿರೋಧಿಸಿ ಹೋರಾಟ ನಡೆಸುತ್ತಿದ್ದರೆ, ಇದೀಗ ಈವರೆಗೆ ಹೆಚ್ಚು ಸ್ಪಂದಿಸದೇ ಇದ್ದ ಕನ್ನಡಪರ ಮತ್ತು ಜನಪರ ಸಂಘಟನೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಹಾಗಾಗಿ ಬಿಎಂಆರ್‌ಸಿಎಲ್ ಪ್ರಯಾಣದರ ಹೆಚ್ಚಳ ವಿರೋಧಿ ಹೋರಾಟ ಮತ್ತಷ್ಟು ಬಲಗೊಳ್ಳುವ ಸೂಚನೆಗಳಿವೆ.
ದರ ಇಳಿಸುವವರೆಗೂ ಹೋರಾಟ ನಿಲ್ಲಿಸದಿರಲು ಮೆಟ್ರೋ ಪ್ರಯಾಣಿಕರ ವೇದಿಕೆ ನಿರ್ಧರಿಸಿದ್ದು, ಪ್ರಯಾಣಿಕರ ಹೋರಾಟ ಬೆಂಬಲಿಸಿ ಕನ್ನಡಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಕೂಡ ಬೀದಿಗಿಳಿಯಲು ಸಜ್ಜಾಗಿವೆ.
ʼಬೆಂಗಳೂರು ಉಳಿಸಿʼ ಸಮಿತಿ ಸಂಯೋಜಿತ ಬೆಂಗಳೂರು ಮೆಟ್ರೋ ಪ್ರಯಾಣಿಕರ ವೇದಿಕೆಯು ವಾಟ್ಸ್ ಆಪ್ ಗ್ರೂಪ್, ಮೌಖಿಕ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ವಿರುದ್ಧ ಅಭಿಯಾನ ನಡೆಸಿದ್ದು, ಹೋರಾಟ ಇನ್ನಷ್ಟು ತೀವ್ರಗೊಳಿಸಲು ಯೋಜಿಸಿದೆ.
ಬಿಎಂಆರ್‌ಸಿಎಲ್‌ಗೆ ಪ್ರಯಾಣಿಕರಿಂದಲೇ ಒಳ ಏಟು
ಜನಸಾಮಾನ್ಯರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ʼನಮ್ಮ ಮೆಟ್ರೋʼ ರೈಲು ಸೇವೆಯು ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ಗೆ ಪ್ರಯಾಣಿಕರೇ ಒಳ ಏಟು ನೀಡಲಾರಂಭಿಸಿದ್ದಾರೆ.
ಮೆಟ್ರೋ ಪ್ರಯಾಣಿಕರಲ್ಲಿ ಯಾವುದೇ ಸಂಘಟನೆ ಇಲ್ಲದಿದ್ದರೂ ಜಾಗೃತಿ ಮೂಡಿಸಿ ಸ್ವಯಂ ಪ್ರೇರಣೆಯಿಂದ ಹೋರಾಟಕ್ಕೆ ಇಳಿಯುವಂತೆ ಮೆಟ್ರೋ ಪ್ರಯಾಣಿಕರ ವೇದಿಕೆ ಹುರಿದುಂಬಿಸುತ್ತಿದೆ. ಇದರ ಪರಿಣಾಮ ಪ್ರಯಾಣಿಕರ ಸಂಖ್ಯೆ ಕುಸಿಯುತ್ತಿದ್ದು, ಮೆಟ್ರೋದ ದೈನಂದಿನ ಆದಾಯವೂ ಕಡಿಮೆಯಾಗುತ್ತಿದೆ.
ಬೆಂಗಳೂರಿನಲ್ಲಿ ಭಾನುವಾರ(ಫೆ.23) ನಾಗರಿಕ ಸಮಾವೇಶ ನಡೆಸಿದ ಪ್ರಯಾಣಿಕರ ವೇದಿಕೆ ಹಲವು ನಿರ್ಣಯಗಳನ್ನು ತೆಗೆದುಕೊಂಡಿದೆ.
ಮೆಟ್ರೋ ವಿರುದ್ಧದ ಹೋರಾಟವನ್ನು ಮುಂದುವರಿಸಲು ವಿವಿಧ ಬಡಾವಣೆಗಳಲ್ಲಿ ಜನಜಾಗೃತಿ ಸಭೆ ನಡೆಸುವುದು, ಕಾಲೇಜು ವಿದ್ಯಾರ್ಥಿಗಳಲ್ಲಿ ನಗರ ಸಾರಿಗೆಯ ಮಹತ್ವ, ಅಧಿಕಾರಿಶಾಹಿಗಳ ಧೋರಣೆ ವಿಚಾರಗಳ ಕುರಿತು ಅರಿವು ಮೂಡಿಸಲು ಸೆಮಿನಾರ್‌ಗಳನ್ನು ಆಯೋಜಿಸಲು ತೀರ್ಮಾನಿಸಿದೆ.
"ಫೆ.25 ಅಥವಾ 26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮೆಟ್ರೋ ದರ ಪರಿಶೀಲನೆಗೆ ಮನವಿ ಮಾಡಲಾಗುವುದು. ಬಳಿಕ ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆಯಲಾಗುವುದು" ಎಂದು ಬೆಂಗಳೂರು ಮೆಟ್ರೋ ಪ್ರಯಾಣಿಕರ ವೇದಿಕೆಯ ರಾಜೇಶ್ ಭಟ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
"ಈಗಾಗಲೇ 10ಸಾವಿರ ಸಹಿ ಸಂಗ್ರಹಿಸಿ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ನೀಡಿದ್ದೇವೆ. ಶೀಘ್ರದಲ್ಲೇ ವಿವಿಧ ಸಂಘ ಸಂಸ್ಥೆಗಳನ್ನು ಭೇಟಿಯಾಗಿ ಹೋರಾಟಕ್ಕೆ ಬೆಂಬಲ ಕೋರಲಾಗುವುದು. ಕೊನೆಯ ಆಯ್ಕೆಯಾಗಿ ʼಮೆಟ್ರೋ ಬಹಿಷ್ಕಾರʼದ ಮೊರೆ ಹೋಗಲಾಗುವುದು" ಎಂದರು.
"ಹೈದರಾಬಾದ್ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ಪಾಸ್, ಹಿರಿಯ ನಾಗರಿಕರಿಗೆ ರಿಯಾಯ್ತಿ ನೀಡಲಾಗುತ್ತಿದೆ. ಅದರಂತೆ ʼನಮ್ಮ ಮೆಟ್ರೋʼದಲ್ಲೂ ಜಾರಿಯಾಗಬೇಕು. ʼಒನ್ ಕಾರ್ಡ್-ಒನ್ ನೇಷನ್ʼನಂತೆ ʼಒನ್ ನೇಷನ್-ಒನ್ ಪ್ರೈಸ್ʼ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಮೆಟ್ರೋ ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ
ರಾಜ್ಯದಲ್ಲಿ ಬೆಲೆ ಏರಿಕೆಯಾದಾಗ ಸಾರ್ವಜನಿಕರು, ಸಂಘ ಸಂಸ್ಥೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರು. ಆದರೆ, ಮೆಟ್ರೋ ಪ್ರಯಾಣ ದರ ಏರಿಕೆ ವಿರುದ್ಧ ಯಾವುದೇ ಸಂಘ ಸಂಸ್ಥೆಗಳು ದನಿ ಎತ್ತುತ್ತಿಲ್ಲ. ಈ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಗಳು ಕೇಳಿ ಬಂದ ನಂತರ ವಿವಿಧ ಕನ್ನಡಪರ ಹಾಗೂ ಕಾರ್ಮಿಕ ಸಂಘಟನೆಗಳು ಮೆಟ್ರೋ ವಿರುದ್ಧ ಹೋರಾಟಕ್ಕೆ ಸಿದ್ಧತೆ ನಡೆಸಿವೆ.
ಮೆಟ್ರೋ ದರ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದ ಸಿಪಿಎಂ ಪಕ್ಷ ಇದೀಗ ಹೋರಾಟವನ್ನು ವಿಸ್ತರಿಸಲು ನಿರ್ಧರಿಸಿದೆ. "ಫೆ.26 ರಂದು ಬೆಂಗಳೂರಿನ ಸಿಪಿಎಂ ಕಚೇರಿಯಲ್ಲಿ ಸಭೆ ಕರೆದಿದ್ದು, ಮೆಟ್ರೋ ವಿರುದ್ಧ ಹೋರಾಟ ವಿಸ್ತರಿಸುವ ಕುರಿತು ಚರ್ಚಿಸಲಾಗುವುದು. ಪ್ರತಿಭಟನೆ, ಹೋರಾಟಗಳಿಗೆ ಬಿಎಂಆರ್ಸಿಎಲ್ ಸೊಪ್ಪು ಹಾಕುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಸಿಪಿಎಂ ಹೋರಾಟ ಮುಂದುವರಿಸಲಿದೆ" ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಲ್.ಪ್ರಕಾಶ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
"ಈ ಹಿಂದೆ ಬೆಂಗಳೂರಿನಲ್ಲಿ ಬೆಲೆ ಏರಿಕೆ ಇತ್ಯಾದಿ ವಿಚಾರಗಳಿಗೆ ಪ್ರತಿಭಟನೆ ಜೋರಾಗಿ ನಡೆಸಲಾಗುತ್ತಿತ್ತು. ಆದರೆ, ಈಗ ರಾಜ್ಯ ಸರ್ಕಾರ ಹಾಗೂ ಹೈಕೋರ್ಟ್ ಪ್ರತಿಭಟನೆಗಾಗಿ ಸ್ವಾತಂತ್ರ್ಯದ ಉದ್ಯಾನವನ್ನು ನಿಗದಿ ಮಾಡಿವೆ. ನಗರದ ಬೇರೆ ಬೇರೆ ಕಡೆಗಳಲ್ಲಿ ಪ್ರತಿಭಟನೆಗೆ ಅವಕಾಶ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರೂ ಯಾವುದೇ ಭರವಸೆ ನೀಡುತ್ತಿಲ್ಲ" ಎಂದು ದೂರಿದರು.
"ಮೆಟ್ರೋ ಇನ್ನಿತರ ನಾಗರಿಕ ಸೌಲಭ್ಯದ ಯೋಜನೆಗಳಿಗೆ ವಿಶ್ವಬ್ಯಾಂಕ್ ನಿಂದ ನೆರವು ಪಡೆಯಲಾಗುತ್ತಿದೆ. ಬಳಕೆದಾರರಿಗಾಗಿ ರೂಪಿಸುವ ಯೋಜನೆಗಳಲ್ಲಿ ಬಳಕೆದಾರರಿಂದಲೇ ಹಣ ವಸೂಲಿ ಮಾಡಬೇಕೆಂದು ವಿಶ್ವಬ್ಯಾಂಕ್ ಷರತ್ತು ವಿಧಿಸಿದೆ. ಯಾವುದೇ ಸಬ್ಸಿಡಿಗಳಿಗೆ ಅನುಮತಿ ನೀಡುತ್ತಿಲ್ಲ. ಕಾರ್ಪೊರೇಟ್ ಉದ್ಯಮಿಗಳ ಲಾಬಿಯಿಂದ ಇಂತಹ ಷರತ್ತು ವಿಧಿಸಿದ್ದು, ಅದರನ್ನು ಸರ್ಕಾರಗಳು ಪಾಲಿಸುತ್ತಿವೆ. ಆ ಮೂಲಕ ಜನ ಕಲ್ಯಾಣ ಮರೆಯುತ್ತಿವೆ" ಎಂದು ಆರೋಪಿಸಿದರು.
ಕರವೇಯಿಂದಲೂ ಮೆಟ್ರೋ ವಿರುದ್ಧ ಹೋರಾಟ
ಕರ್ನಾಟಕ ರಕ್ಷಣಾ ವೇದಿಕೆ ಕೂಡ ಮೆಟ್ರೋ ಪ್ರಯಾಣ ದರ ಏರಿಕೆ ವಿರುದ್ಧ ಹೋರಾಟಕ್ಕೆ ತೀರ್ಮಾನಿಸಿದೆ. ಈ ಕುರಿತು ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು, "ಕೆಪಿಎಸ್‌ಸಿ ಅಕ್ರಮಗಳ ವಿರುದ್ಧ ಸಂಘಟನೆ ಹೋರಾಡುತ್ತಿದೆ. ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಫೆ.25 ರಂದು ಬೃಹತ್ ಹೋರಾಟ ನಡೆಸಲಿದೆ. ಇದಾದ ಬಳಿಕ ಮೆಟ್ರೋ ಪ್ರಯಾಣ ದರದ ವಿರುದ್ಧವೂ ಹೋರಾಟ ರೂಪಿಸುತ್ತೇವೆ" ಎಂದು ತಿಳಿಸಿದರು.
"ಬೆಂಗಳೂರಿನ ಸಂಚಾರ ದಟ್ಟಣೆಗೆ ʼನಮ್ಮ ಮೆಟ್ರೋʼ ಕೊಂಚ ರಿಲೀಫ್ ನೀಡಿದೆ. ಆದರೆ, ದುಬಾರಿ ಪ್ರಯಾಣ ದರದ ಮೂಲಕ ಜನರ ರಕ್ತ ಹೀರುತ್ತಿದೆ. ದರ ಏರಿಕೆಯಿಂದ ಬಡವರು, ಮಧ್ಯಮ ವರ್ಗದವರು ಮೆಟ್ರೋದಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಬೆಳಗಾವಿ ಹೋರಾಟ ಮುಗಿದ ಕೂಡಲೇ ಬಿಎಂಆರ್ಸಿಎಲ್ ವಿರುದ್ಧ ಹೋರಾಟಕ್ಕೆ ಇಳಿಯಲಾಗುವುದು" ಎಂದು ಹೇಳಿದರು.
ಕುಸಿಯುತ್ತಿರುವ ಪ್ರಯಾಣಿಕರು, ಆದಾಯ ಖೋತಾ
ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಮೆಟ್ರೋ ಪ್ರಯಾಣ ಅವಲಂಬಿಸಿದ್ದ ಬಡ ಹಾಗೂ ಮಧ್ಯಮ ವರ್ಗದ ಜನರು ಕ್ರಮೇಣ ಮೆಟ್ರೋ ಪ್ರಯಾಣದಿಂದ ದೂರ ಸರಿಯುತ್ತಿದ್ದಾರೆ. ತಿಂಗಳ ಆದಾಯದ ಮೇಲೆ ಲೆಕ್ಕಾಚಾರದ ಬದುಕು ಕಟ್ಟಿಕೊಂಡಿರುವ ಶ್ರೀಸಾಮಾನ್ಯರಿಗೆ ಪ್ರಯಾಣ ದರ ಹೆಚ್ಚಳ ಹೊರೆಯಾಗಿ ಪರಿಣಮಿಸಿದೆ.
ದುಬಾರಿ ದರದಿಂದ ಪ್ರಯಾಣಿಕರು ದಿನದಿಂದ ದಿನಕ್ಕೆ ಮೆಟ್ರೋದಿಂದ ದೂರ ಸರಿಯುತ್ತಿದ್ದಾರೆ. ʼನಮ್ಮ ಮೆಟ್ರೋʼ ಪರಿಷ್ಕೃತ ದರ ಜಾರಿಯ ನಂತರ ಸುಮಾರು 6.26 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಎಂಆರ್‌ಸಿಎಲ್ ಕಳೆದುಕೊಂಡಿದೆ ಎಂದು ಸಂಸದ ಪಿ.ಸಿ. ಮೋಹನ್ ಹೇಳಿದ್ದರು.
ಫೆ.9 ರಿಂದ ದೈನಂದಿನ ಪ್ರಯಾಣಕ್ಕಾಗಿ ಬಹುತೇಕ ಪ್ರಯಾಣಿಕರು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮೆಟ್ರೋದಿಂದ ವಿಮುಖರಾಗಿರುವ ಪ್ರಯಾಣಿಕರನ್ನು ಮತ್ತೆ ಸೆಳೆಯಬೇಕಾದರೆ ಕೂಡಲೇ ದರ ಹೆಚ್ಚಳ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು.
ಪರಿಷ್ಕರಣೆ ನೆಪ, ಸುಲಿಗೆಯ ಜಪ
ಶೇ 70 ರಿಂದ 100 ರಷ್ಟು ಪ್ರಯಾಣ ದರ ಏರಿಕೆಯಾಗಿರುವ ಕಡೆ ಶೇಕಡಾ 10ರಷ್ಟು ದರ ಪರಿಷ್ಕರಿಸಿರುವುದಾಗಿ ಬಿಎಂಆರ್ಸಿಎಲ್ ಹೇಳಿದರೂ ಬಹಳಷ್ಟು ಕಡೆ ದರ ಏರಿಕೆ ಹಾಗೆಯೇ ಇದೆ. ಬೆರಳೆಣಿಕೆಯ ಸ್ಟೇಜ್ ಗಳಲ್ಲಿ ಮಾತ್ರ ದರ ಇಳಿಸಿ ಕಣ್ಣೊರೆಸುವ ತಂತ್ರ ಅನುಸರಿಸಿದೆ ಎಂಬುದು ಪ್ರಯಾಣಿಕರ ಆರೋಪವಾಗಿದೆ.
ಪೀಕ್ ಅವರ್ ಹಾಗೂ ನಾನ್ ಪೀಕ್ ಅವರ್ಗಳಲ್ಲಿ ರಿಯಾಯ್ತಿ ಘೋಷಿಸಿರುವುದರಿಂದ ಕೆಲಸ ಕಾರ್ಯಗಳಿಗೆ ತೆರಳುವ ಪ್ರಯಾಣಿಕರಿಗೆ ಯಾವುದೇ ಅನುಕೂಲ ಆಗಿಲ್ಲ. ಬಹುತೇಕರು ಬೆಳಿಗ್ಗೆ 10ರ ಒಳಗೆ ಕೆಲಸ ಕಾರ್ಯಗಳಿಗೆ ತೆರಳುತ್ತಾರೆ. ಹಾಗಾಗಿ ನಾನ್ ಪೀಕ್ ಅವರ್ ಸೌಲಭ್ಯ ಸಿಗುವುದಿಲ್ಲ ಎಂಬುದು ಪ್ರಯಾಣಿಕರ ಅಳಲು.
ಮೆಟ್ರೋ ಸಾರಿಗೆಯಲ್ಲಿ ಬೆಳಿಗ್ಗೆ 6 ರಿಂದ 10 ಹಾಗೂ ಸಂಜೆ 5 ರಿಂದ 7 ರವರೆಗೆ ಪೀಕ್ ಅವರ್ ಆಗಿದ್ದರೆ, ಉಳಿದ ಸಮಯ ನಾನ್ ಪೀಕ್ ಅವರ್ ಆಗಿರುತ್ತದೆ.
ಪ್ರಯಾಣ ದರ ಏರಿಕೆಗೂ ಮುನ್ನ ಕ್ಯೂಆರ್ ಕೋಡ್ ಬಳಕೆದಾರರಿಗೆ ರಿಯಾಯ್ತಿ ನೀಡಲಾಗಿತ್ತು. ಈಗ ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಮಾತ್ರ ರಿಯಾಯ್ತಿ ಸೌಲಭ್ಯವಿದೆ. ಡಿಜಿಟಲ್ ವಹಿವಾಟುಗಳನ್ನು ಪ್ರೋತ್ಸಾಹಿಸುವ ಸರ್ಕಾರಗಳು ಕ್ಯೂಆರ್ ಕೋಡ್ ಟಿಕೆಟ್ಗೆ ರಿಯಾಯಿತಿ ಹಿಂಪಡೆದಿರುವುದು ಬಹುತೇಕ ಪ್ರಯಾಣಿಕರ ಟೀಕೆಗೆ ಗುರಿಯಾಗಿದೆ.