Old Pension Scheme | ಒಪಿಎಸ್ ಮರುಜಾರಿ ವರದಿ; ಸರ್ಕಾರಿ ನೌಕರರಲ್ಲೇ ಇಲ್ಲ ಸಹಮತ
ಒಪಿಎಸ್ ಮರುಜಾರಿ ಕುರಿತು ಅಧ್ಯಯನ ನಡೆಸಲು 2018 ನವೆಂಬರ್ ತಿಂಗಳಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು ಒಪಿಎಸ್ ಮರು ಜಾರಿ ಕುರಿತು ಪರಿಶೀಲಿಸಿ, ಅಂತಿಮ ಸುತ್ತಿನ ಸಭೆಯನ್ನೂ ನಡೆಸಿದೆ. ಮಾ.7 ರಂದು ರಾಜ್ಯ ಬಜೆಟ್‌ಗೂ ಮುನ್ನವೇ ಸರ್ಕಾರಕ್ಕೆ ವರದಿ ಸಲ್ಲಿಸಲು ತಯಾರಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ;
ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೆ ಸರ್ಕಾರಿ ನೌಕರರ ಒತ್ತಡ ಹೆಚ್ಚಾಗುತ್ತಿದ್ದಂತೆ ಸರ್ಕಾರದ ಮಟ್ಟದಲ್ಲಿ ಸಿದ್ಧತೆಗಳೂ ಆರಂಭವಾಗಿವೆ.
ಒಪಿಎಸ್ ಮರುಜಾರಿ ಕುರಿತು ಅಧ್ಯಯನ ನಡೆಸಲು 2018 ನವೆಂಬರ್ ತಿಂಗಳಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು ಒಪಿಎಸ್ ಮರು ಜಾರಿ ಕುರಿತು ಪರಿಶೀಲಿಸಿ, ಅಂತಿಮ ಸುತ್ತಿನ ಸಭೆಯನ್ನೂ ನಡೆಸಿದೆ. ಮಾ.7 ರಂದು ರಾಜ್ಯ ಬಜೆಟ್‌ಗೂ ಮುನ್ನವೇ ಸರ್ಕಾರಕ್ಕೆ ವರದಿ ಸಲ್ಲಿಸಲು ತಯಾರಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಸಮಿತಿಯ ವರದಿಗೆ ಸರ್ಕಾರಿ ನೌಕರರಲ್ಲೇ ಒಮ್ಮತ ಇಲ್ಲದಿರುವುದು ಬಹಿರಂಗವಾಗಿದೆ.
ಸಿ.ಎಸ್.ಷಡಾಕ್ಷರಿ ನೇತೃತ್ವದ ರಾಜ್ಯ ಸರ್ಕಾರಿ ನೌಕರರ ಸಂಘವು ಒಪಿಎಸ್ ಕುರಿತು ಸಮಿತಿಯ ಶಿಫಾರಸುಗಳಿಗೆ ಬದ್ಧವಾಗಿರುವುದಾಗಿ ಹೇಳಿದರೆ, ಶಾಂತಾರಾಮ್ ತೇಜಾ ನೇತೃತ್ವದ ಎನ್‌ಪಿಎಸ್ ನೌಕರರ ಸಂಘವು ಸಮಿತಿಯ ನೇಮಕವನ್ನೇ ಪ್ರಶ್ನಿಸಿ ಮೊದಲಿನಿಂದಲೂ ವಿರೋಧಿಸುತ್ತಿದೆ. ಒಪಿಎಸ್ ಮರು ಜಾರಿ ವಿಚಾರದಲ್ಲಿ ರಾಜ್ಯ ಸರ್ಕಾರಿ ನೌಕರರು ಇತ್ತಂಡಗಳಾಗಿರುವುದು ಯೋಜನೆ ಮರು ಜಾರಿ ವಿಳಂಬಕ್ಕೆ ಕಾರಣವಾಗುವ ಆತಂಕ ಮೂಡಿಸಿದೆ.
ಸರ್ಕಾರಿ ನೌಕರರ ಸಂಘದ ವಾದವೇನು?
"ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಗೂ ಮುನ್ನವೇ ಒಪಿಎಸ್ ಜಾರಿಗೊಳಿಸುವ ಭರವಸೆ ನೀಡಿದ್ದಾರೆ. ಈ ಸಂಬಂಧ ಸರ್ಕಾರ ರಚಿಸಿರುವ ಸಮಿತಿಯು ಈಗಾಗಲೇ ಸಭೆ ನಡೆಸಿದೆ. ಸಮಿತಿಯು ಬಜೆಟ್‌ಗೂ ಮುನ್ನ ವರದಿ ನೀಡುವುದಾಗಿ ಹೇಳಿದೆ. ವರದಿಯ ಬಳಿಕ ಸರ್ಕಾರ ಕ್ರಮ ಕೈಗೊಳ್ಳಲಿದೆ" ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
"ವರದಿ ಸ್ವೀಕರಿಸಿ ಸಚಿವ ಸಂಪುಟದಲ್ಲಿ ಚರ್ಚಿಸಿ ಅನುಮೋದನೆ ನೀಡುವ ನಿರೀಕ್ಷೆ ಇದೆ. ಈ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸಹ ಭರವಸೆ ನೀಡಿದ್ದಾರೆ. ಈ ಹಿಂದೆ ಒಪಿಎಸ್ ಅಧ್ಯಯನ ಸಮಿತಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಅವರೂ ಕೂಡ ಆದಷ್ಟು ಬೇಗ ವರದಿ ಸಲ್ಲಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಹಾಗಾಗಿ ನಾವು ವರದಿಗಾಗಿ ಕಾಯುತ್ತಿದ್ದೇವೆ" ಎಂದು ಷಡಾಕ್ಷರಿ ಹೇಳಿದರು.
ಎನ್‌ಪಿಎಸ್ ನೌಕರರ ನಿಲುವೇನು?
"ಹಳೆಯ ಪಿಂಚಣಿ ಯೋಜನೆಯನ್ನು ಯಥಾವತ್ತಾಗಿ ಮರುಜಾರಿಗೆ ತರಬೇಕು ಎಂಬುದು ಎನ್‌ಪಿಎಸ್ ನೌಕರರ ಸಂಘ ಏಕಮಾತ್ರ ಒತ್ತಾಯ. ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲೂ ಎನ್‌ಪಿಎಸ್ ರದ್ದು ಮಾಡಿ, ಒಪಿಎಸ್ ಮರುಜಾರಿ ಮಾಡುವ ಭರವಸೆ ನೀಡಿದೆ. 2018 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಒಪಿಎಸ್ ಪರಿಶೀಲನಾ ಸಮಿತಿ ರಚಿಸಲಾಗಿದೆ. ಆದರೆ, ನಾವು ಮೊದಲಿನಿಂದಲೂ ಸಮಿತಿಯನ್ನು ವಿರೋಧಿಸುತ್ತಾ ಬಂದಿದ್ದೇವೆ. ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿರುವಾಗ ಸಮಿತಿ ಅನವಶ್ಯಕ ಎಂಬುದು ನಮ್ಮ ನಿಲುವು. ಸಮಿತಿಯು ಒಪಿಎಸ್ ವಿಚಾರವನ್ನು ವಿಷಯಾಂತರ ಮಾಡಲಿದೆ. ಈಗಾಗಲೇ ಕೇರಳ, ತಮಿಳುನಾಡಿನಲ್ಲಿ ನೇಮಿಸಿದ್ದ ಒಪಿಎಸ್ ಸಮಿತಿಗಳು ಎನ್‌ಪಿಎಸ್ ಯೋಜನೆಯನ್ನು ಪರಿಷ್ಕರಿಸಿವೆಯೇ ಹೊರತು ಒಪಿಎಸ್ ಮರು ಜಾರಿ ಮಾಡಿಲ್ಲ. ಹಾಗಾಗಿ ಸಮಿತಿ ನೇಮಕವನ್ನು ನಾವು ವಿರೋಧಿಸುತ್ತಾ ಬಂದಿದ್ದೇವೆ. ಸರ್ಕಾರ ಬಜೆಟ್ ಒಳಗೆ ಒಪಿಎಸ್ ಮರು ಜಾರಿ ಮಾಡುವ ಭರವಸೆ ನೀಡಿದೆ" ಎಂದು ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್ ತೇಜಾ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
"ಅಧ್ಯಯನ ಸಮಿತಿಯಿಂದ ಯಾವುದೇ ಉಪಯೋಗವಿಲ್ಲ ಎಂಬುದನ್ನು ಮನಗಂಡಿದ್ದೇವೆ. ಹಾಗಾಗಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ, ಚುನಾವಣೆ ನಂತರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿ, ಒಪಿಎಸ್ ಯಥಾವತ್ ಜಾರಿಗೆ ಒತ್ತಾಯಿಸಿದ್ದೇವೆ. ಸರ್ಕಾರದಿಂದಲೂ ಸೂಕ್ತ ಸ್ಪಂದನೆ ದೊರೆತಿದೆ. ಆದರೆ, ಯಾವಾಗ, ಹೇಗೆ ಹಾಗೂ ಯಾವ ರೀತಿ ಯೋಜನೆ ಮರು ಜಾರಿ ಮಾಡಲಾಗುತ್ತದೆ ಎಂಬ ಮಾಹಿತಿ ಇಲ್ಲ" ಎಂದು ಹೇಳಿದರು.
"ಫೆ.7 ರಂದು ಉಪವಾಸ ಸತ್ಯಾಗ್ರಹ ನಡೆಸಿದಾಗ ಮುಖ್ಯಮಂತ್ರಿಗಳ ಪ್ರತಿನಿಧಿಯಾಗಿ ಬಂದಿದ್ದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಕೂಡ ಸೂಕ್ತ ಭರವಸೆ ನೀಡಿದ್ದಾರೆ. ಬಜೆಟ್ ಮಂಡನೆಗೂ ಮುನ್ನವೇ ಸರ್ಕಾರ ಒಪಿಎಸ್ ಮರು ಜಾರಿಗೊಳಿಸುವ ಆಶಾಭಾವನೆ ಇದೆ. ಒಂದು ವೇಳೆ ಯೋಜನೆ ಜಾರಿಯಾಗದಿದ್ದರೆ ಮತ್ತೆ ಸಂಘದಲ್ಲಿ ಚರ್ಚಿಸಿ ಹೋರಾಟಕ್ಕೆ ಇಳಿಯಲಾಗುವುದು" ಎಂದು ಹೇಳಿದರು.
ಮಾ.2 ರಿಂದ ಟ್ವೀಟರ್ ಅಭಿಯಾನ
ಒಪಿಎಸ್ ಮರು ಜಾರಿಗೆ ಒತ್ತಾಯಿಸಿ ಎನ್‌ಪಿಎಸ್ ನೌಕರರ ಸಂಘ ಸರ್ಕಾರದ ಮೇಲೆ ನಿರಂತರ ಒತ್ತಡ ಹಾಕುತ್ತಿದೆ. ಈ ಹಿಂದೆ ಸಂಘದಡಿ ಕಾರ್ಯನಿರ್ವಹಿಸುತ್ತಿರುವ 4.5 ಲಕ್ಷ ನೌಕರರು ಸಿಎಂ ಅವರಿಗೆ ಪತ್ರ ಬರೆಯುವ ಮೂಲಕ ಒಪಿಎಸ್ ಜಾರಿಗೆ ಒತ್ತಾಯಿಸಿದ್ದರು. ಅದಾದ ಬಳಿಕ ಫೆ.7 ರಂದು ಉಪವಾಸ ಸತ್ಯಾಗ್ರಹ ನಡೆಸಿ, ಸರ್ಕಾರದ ಗಮನ ಸೆಳೆದಿದ್ದರು.
ಎರಡನೇ ಹಂತದಲ್ಲಿ ಮಾ.2 ರಂದು ಒಂದು ದಿನ ಸಿಎಂ ಹಾಗೂ ಸರ್ಕಾರದ ಸಚಿವರಿಗೆ ಟ್ವೀಟ್ ಮಾಡುವ ಅಭಿಯಾನ ನಡೆಸಲು ಎನ್‌ಪಿಎಸ್ ನೌಕರರ ಸಂಘ ನಿರ್ಧರಿಸಿದೆ. "ಮಾ.2 ರಂದು ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ಟ್ವೀಟರ್ ಅಭಿಯಾನ ನಡೆಸಲಾಗುವುದು. ಒಪಿಎಸ್ ಮರುಜಾರಿಗೆ ಆಗ್ರಹಿಸಿ ಈ ಅಭಿಯಾನ ನಡೆಸಲಾಗುತ್ತಿದೆ. ಅಷ್ಟರಲ್ಲಿ ಸರ್ಕಾರದಿಂದ ಸ್ಪಂದನೆ ಸಿಗುವ ವಿಶ್ವಾಸವಿದೆ" ಎಂದು ಶಾಂತಾರಾಮ್ ತೇಜಾ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
2006 ಏಪ್ರಿಲ್ ಗಿಂತ ಹಿಂದೆ ಚಾಲ್ತಿಯಲ್ಲಿದ್ದ ಹಳೆ ಪಿಂಚಣಿ ಯೋಜನೆಯನ್ನೇ ಮರು ಜಾರಿ ಮಾಡಬೇಕು. ಆ ಮೂಲಕ ನಿವೃತ್ತಿಯ ನಂತರ ನೌಕರರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸಬೇಕು ಎಂಬುದು ಎನ್‌ಪಿಎಸ್ ನೌಕರರ ಸಂಘದ ಬೇಡಿಕೆಯಾಗಿದೆ.
ಒಪಿಎಸ್ ಮರು ಜಾರಿಗೆ ಒತ್ತಾಯಿಸುತ್ತಿರುವವರ ಸಂಖ್ಯೆ ಹೆಚ್ಚಾದ ಬಳಿಕ ಸರ್ಕಾರಿ ನೌಕರರ ಸಂಘ ಕೂಡ ಒಪಿಎಸ್ ಜಾರಿಗೆ ದನಿಗೂಡಿಸಿದೆ. ಆದರೆ, ಯಾವುದೇ ಪ್ರತಿಭಟನೆ, ಒತ್ತಡ ತಂತ್ರಗಳ ಮೊರೆ ಹೋಗದಿರಲು ನಿರ್ಧರಿಸಿದೆ. ಈಚೆಗೆ ಒಪಿಎಸ್ ಪರಿಶೀಲನಾ ಸಮಿತಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಾಡಿತ್ತು.
ಸರ್ಕಾರಿ ನೌಕರರ ಸಂಘದಲ್ಲಿ ಒಪಿಎಸ್ ವ್ಯಾಪ್ತಿಗೆ ಒಳಪಡುವ 2.20 ಲಕ್ಷ ನೌಕರರಿದ್ದರೆ, ಎನ್‌ಪಿಎಸ್ ನೌಕರರ ಸಂಘದಲ್ಲಿ 3.5 ಲಕ್ಷ ನೌಕರರಿದ್ದಾರೆ. ಒಪಿಎಸ್ ಜಾರಿಗೆ ಎರಡೂ ಸಂಘಟನೆಗಳು ಪಟ್ಟು ಹಿಡಿದರೂ, ಅನುಸರಿಸುತ್ತಿರುವ ಮಾರ್ಗ ಭಿನ್ನವಾಗಿದೆ. ಉಭಯ ಸಂಘಗಳ ಭಿನ್ನ ನಿಲುವಿನ ಮಧ್ಯೆ ರಾಜ್ಯ ಸರ್ಕಾರ ಹೇಗೆ ಒಪಿಎಸ್ ಮರು ಜಾರಿ ಮಾಡಲಿದೆ ಎಂಬುದು ಪ್ರಶ್ನೆಯಾಗಿದೆ.
2006 ಏಪ್ರಿಲ್ ಗಿಂತ ಹಿಂದೆ ನೇಮಕಾತಿ ಅಧಿಸೂಚನೆ ಪ್ರಕಟವಾಗಿ 2006 ರ ನಂತರ ನೇಮಕಗೊಂಡ ರಾಜ್ಯ ಸರ್ಕಾರದ ಸುಮಾರು 13 ಸಾವಿರ ಸರ್ಕಾರಿ ನೌಕರರನ್ನು ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಸಿಎಂ ಸಿದ್ದರಾಮಯ್ಯ ಅವರು 2024 ಜನವರಿಯಲ್ಲಿ ಆದೇಶ ಹೊರಡಿಸಿದ್ದರು. ಇದರಿಂದ ಒಪಿಎಸ್ ವ್ಯಾಪ್ತಿಗೆ ಒಳಪಡಲಿರುವ ನೌಕರರ ಸಂಖ್ಯೆ ಹೆಚ್ಚಾಗಿದೆ. ಈ ಎಲ್ಲಾ ನೌಕರರಿಗೂ ನಿವೃತ್ತಿ ನಂತರ ಪಾವತಿಸಬೇಕಾದ ಭತ್ಯೆಗಳು, ಆರ್ಥಿಕ ಮಿತಿಗಳ ಕುರಿತು ಒಪಿಎಸ್ ಪರಿಶೀಲನಾ ಸಮಿತಿ ಲೆಕ್ಕಾಚಾರದಲ್ಲಿ ತೊಡಗಿದೆ ಎಂದು ಮೂಲಗಳು ತಿಳಿಸಿವೆ.
ಒಪಿಎಸ್ ಮರುಜಾರಿ ಭರವಸೆ ನೀಡಿದ್ದ ಸಿಎಂ
ಫೆ.20 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದ ಬೆಂಗಳೂರು ನಗರ, ರಾಜ್ಯ ಪರಿಷತ್ ಸದಸ್ಯರ ಹಾಗೂ ಜಿಲ್ಲೆ, ತಾಲ್ಲೂಕು ಶಾಖೆಗಳ ನಿರ್ದೇಶಕರು, ಪದಾಧಿಕಾರಿಗಳ ಸಮಾವೇಶದಲ್ಲಿ ಆನ್ಲೈನ್ ಮೂಲಕ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರಿ ನೌಕರರ ಹಲವು ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ. ಒಪಿಎಸ್ ಮರು ಜಾರಿ ಕುರಿತು ಪರಿಶೀಲಿಸಲು ನೇಮಿಸಿದ್ದ ಸಮಿತಿಯು ಈಗಾಗಲೇ ಅಂತಿಮ ಸಭೆ ನಡೆಸಿದ್ದು, ಶೀಘ್ರದಲ್ಲಿ ವರದಿ ಪಡೆದು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡ ಒಪಿಎಸ್ ಮರು ಜಾರಿ ಮಾಡುವ ಆಶ್ವಾಸನೆ ನೀಡಿದ್ದರು. ಸರ್ಕಾರದ ಯಂತ್ರ ನಡೆಯಬೇಕಾದರೆ ನೌಕರರೇ ಮುಖ್ಯ. ಹಾಗಾಗಿ ಅವರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದರು.