ಮುಡಾ ಪ್ರಕರಣ| ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ವಿರುದ್ಧ ಇ.ಡಿ. ಪ್ರಾಸಿಕ್ಯೂಷನ್ ದೂರು

ಅಕ್ರಮ ಹಣ ವರ್ಗಾವಣೆ ಕಾಯ್ದೆ ಅನ್ವಯ ದೂರನ್ನು ಸಲ್ಲಿಸಲಾಗಿದೆ. ದಿನೇಶ್ ಕುಮಾರ್ ಅವರು ಮುಡಾ ಆಯುಕ್ತರಾಗಿದ್ದ ಅವಧಿಯಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ನಿವೇಶನ ಹಂಚಿಕೆ ಹಗರಣದಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದು ತನಿಖೆಯ ವೇಳೆ ಸಂಗ್ರಹಿಸಲಾದ ಸಾಕ್ಷ್ಯಗಳಿಂದ ದೃಢಪಟ್ಟಿದೆ.

Update: 2025-11-20 04:39 GMT

ಮುಡಾ

Click the Play button to listen to article

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಕ್ರಮ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ, ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ)ವು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್ ದೂರು ಸಲ್ಲಿಸಿದೆ.

"ಪ್ರಾಸಿಕ್ಯೂಷನ್ ದೂರು" ಎಂದರೆ ಒಬ್ಬ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸರ್ಕಾರದ ಪರ (ಇಡಿ ಪರ) ನ್ಯಾಯವಾದಿ ಸಲ್ಲಿಸುವ ಔಪಚಾರಿಕ ಆರೋಪ ಮತ್ತು ಕಾನೂನು ದಾಖಲೆ. ಇದು ಘಟನೆಯ ವಿವರಗಳನ್ನು, ಮತ್ತು ಆರೋಪಿ ಮೇಲಿರುವ ಆಪಾದನೆಗಳ ಬಗ್ಗೆ  ವಿವರಿಸುತ್ತದೆ. ಜತೆಗೆ ಆರೋಪಿ ತಪ್ಪಿತಸ್ಥ ಎಂದು ಹೇಳಲು ಅನುವಾಗುವ ದಾಖಲೆಗಳನ್ನು ನ್ಯಾಯಾಲಯಕ್ಕೆ  ಒದಗಿಸುತ್ತದೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆ ಅನ್ವಯ ದೂರನ್ನು ಸಲ್ಲಿಸಲಾಗಿದೆ. ದಿನೇಶ್ ಕುಮಾರ್ ಅವರು ಮುಡಾ ಆಯುಕ್ತರಾಗಿದ್ದ ಅವಧಿಯಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ನಿವೇಶನ ಹಂಚಿಕೆ ಹಗರಣದಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದು ತನಿಖೆಯ ವೇಳೆ ಸಂಗ್ರಹಿಸಲಾದ ಸಾಕ್ಷ್ಯಗಳಿಂದ ದೃಢಪಟ್ಟಿದೆ.

ಸರ್ಕಾರಿ ಆದೇಶಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ನಕಲಿ ಅಥವಾ ಅಪೂರ್ಣ ದಾಖಲೆಗಳನ್ನು ಬಳಸಿ ಅರ್ಹರಲ್ಲದ ವ್ಯಕ್ತಿಗಳು, ಸಂಸ್ಥೆಗಳಿಗೆ ಕಾನೂನುಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡುವಲ್ಲಿ ದಿನೇಶ್ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಇಡಿ ಆರೋಪಿಸಿದೆ.

ಅಕ್ರಮ ಹಂಚಿಕೆಗಳಿಂದ ಪಡೆದ ಲಂಚದ ಹಣವನ್ನು ಸಹಕಾರಿ ಸಂಘ ಮತ್ತು ಅವರ ಸಂಬಂಧಿಕರು, ಸಹಚರರ ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಿ, ನಂತರ ಅದೇ ಹಣವನ್ನು ಬಳಸಿ ಈ ಅಕ್ರಮ ನಿವೇಶನಗಳಲ್ಲಿ ಕೆಲವನ್ನು ದಿನೇಶ್ ಕುಮಾರ್ ಅವರ ಸಂಬಂಧಿಕರ ಹೆಸರಿನಲ್ಲಿ ಖರೀದಿಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಇಡಿ ಈಗಾಗಲೇ 283 ಅಕ್ರಮ ಮುಡಾ ನಿವೇಶನಗಳು ಮತ್ತು ಹಣ ವರ್ಗಾವಣೆಯಿಂದ ಪಡೆದ ಇತರೆ 3 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇವುಗಳ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 450 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಜಿ.ಟಿ. ದಿನೇಶ್ ಕುಮಾರ್ ಅವರನ್ನು ಸೆ.16 ರಂದು ಬಂಧಿಸಲಾಗಿದ್ದು, ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

Tags:    

Similar News