ಎಟಿಎಂ ದರೋಡೆ: "ಆರೋಪಿಗಳ ಸುಳಿವು ಸಿಕ್ಕಿದೆ: ಗೃಹ ಸಚಿವ ಜಿ. ಪರಮೇಶ್ವರ
"ಎಟಿಎಂಗಳಿಗೆ ಹಣ ಸಾಗಿಸುವ ಆಂತರಿಕ ಮಾಹಿತಿಯುಳ್ಳವರೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಈ ಹಣ ಸಾಗಾಟದ ಮಾರ್ಗದ ಮಾಹಿತಿ ಆರೋಪಿಗಳಿಗೆ ಹೇಗೆ ಸಿಕ್ಕಿತು? ಎಲ್ಲ ವಿಷಯದ ಬಗ್ಗೆ ನಮಗೆ ಖಚಿತ ಮಾಹಿತಿ ಲಭ್ಯವಾಗಿದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್
ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ನಡೆದ 7 ಕೋಟಿಗೂ ರೂಪಾಯಿಗೂ ಅಧಿಕ ಮೊತ್ತದ ದರೋಡೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ಕುರಿತು ಮಾಹಿತಿ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸುಳಿವುಗಳು ಲಭ್ಯವಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಟಿಎಂಗಳಿಗೆ ಹಣ ಸಾಗಿಸುವ ಆಂತರಿಕ ಮಾಹಿತಿಯುಳ್ಳವರೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಈ ಹಣ ಸಾಗಾಟದ ಮಾರ್ಗದ ಮಾಹಿತಿ ಆರೋಪಿಗಳಿಗೆ ಹೇಗೆ ಸಿಕ್ಕಿತು? ಎಲ್ಲ ವಿಷಯದ ಬಗ್ಗೆ ನಮಗೆ ಖಚಿತ ಮಾಹಿತಿ ಲಭ್ಯವಾಗಿದೆ. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ" ಎಂದು ತಿಳಿಸಿದರು.
ಬುಧವಾರ ಮಧ್ಯಾಹ್ನ, 'ಆರ್‌ಬಿಐ ಅಧಿಕಾರಿಗಳು' ಎಂದು ಹೇಳಿಕೊಂಡು ಬಂದ ದರೋಡೆಕೋರರ ಗುಂಪು, ಜಯನಗರದ ಅಶೋಕ ಪಿಲ್ಲರ್ ಬಳಿ ಸಿಎಂಎಸ್ ಕಂಪನಿಯ ಹಣ ಸಾಗಾಟದ ವಾಹನವನ್ನು ಅಡ್ಡಗಟ್ಟಿತ್ತು. ಬಳಿಕ ವಾಹನವನ್ನು ಡೈರಿ ಸರ್ಕಲ್ ಫ್ಲೈಓವರ್ ಮೇಲೆ ಕೊಂಡೊಯ್ದು, ಸುಮಾರು 7.11 ಕೋಟಿ ಹಣವನ್ನು ದೋಚಿ ಪರಾರಿಯಾಗಿದ್ದರು.
"ಇಂತಹ ಘಟನೆ ಈ ಹಿಂದೆ ಬೆಂಗಳೂರಿನಲ್ಲಿ ನಡೆದಿಲ್ಲ. ಆರೋಪಿಗಳು ಬಳಸಿದ್ದ ವಾಹನದ ಸಂಖ್ಯೆ ನಮಗೆ ಸಿಕ್ಕಿದೆ. ಇವರು ಸ್ಥಳೀಯರೇ ಅಥವಾ ಹೊರರಾಜ್ಯದವರೇ ಎಂಬ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ತನಿಖೆಯ ಹಿತದೃಷ್ಟಿಯಿಂದ ಸದ್ಯಕ್ಕೆ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ" ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು. ನಗರದಾದ್ಯಂತ ನಾಕಾಬಂದಿ ಹಾಕಿ ತೀವ್ರ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ