MicroFinance Harassment | ಮೈಕ್ರೋ ಫೈನಾನ್ಸ್ ಕಿರುಕುಳ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಚಂದಗಾಲು ಬಳಿ ವಿಸಿ ನಾಲೆ ಏರಿದ ಬಳಿಕ ದಂಪತಿ ಮತ್ತು ಪುತ್ರಿ ವಿಷ ಸೇವಿಸಿದ್ದಾರೆ. ನಂತರ ವಿ.ಸಿ.ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.;
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ತಡೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದರೂ ಸಾಲಗಾರರಿಗೆ ಕಿರುಕುಳ ತಪ್ಪಿಲ್ಲ. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ತಾಳದೇ ಮಂಡ್ಯದ ಯಲಿಯೂರು ಬಳಿ ಒಂದೇ ಕುಟುಂಬದ ಮೂವರು ವಿಶ್ವೇಶ್ವರಯ್ಯ ನಾಲೆ(ವಿಸಿ ನಾಲೆ)ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು ಮಾಸ್ತಪ್ಪ (65) ಪತ್ನಿ ರತ್ನಮ್ಮ (45), ಪುತ್ರಿ ಲಕ್ಷ್ಮಿ (18) ಎಂದು ಗುರುತಿಸಲಾಗಿದ್ದು, ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ನಿವಾಸಿಗಳು ಎಂದು ತಿಳಿದು ಬಂದಿದೆ.
ಮಾಸ್ತಪ್ಪ ಅವರು ಆಟೋ ಓಡಿಸಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸುಮಾರು 3 ಲಕ್ಷ ರೂ. ಸಾಲ ಮಾಡಿದ್ದು, ಸಾಲ ನೀಡಿದವರು ಮನೆಯ ಬಳಿ ಬಂದು ಗಲಾಟೆ ಮಾಡುತ್ತಿದ್ದರು. ಇದರಿಂದ ಮನನೊಂದ ಇಡೀ ಕುಟುಂಬ ಮಂಡ್ಯದ ಯಲಿಯೂರು ಬಳಿ ಇರುವ ವಿಸಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಹೇಳಲಾಗಿದೆ.
ಚಂದಗಾಲು ಬಳಿಯ ನಾಲೆ ಏರಿ ಮೊದಲು ದಂಪತಿ ಮತ್ತು ಪುತ್ರಿ ವಿಷ ಸೇವಿಸಿದ್ದಾರೆ. ಬಳಿಕ ವಿ.ಸಿ.ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಸಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ. ಉಳಿದ ಒಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಜೊತೆಗೆ ಮಾಸ್ತಪ್ಪ ಸುಮಾರು 12 ಲಕ್ಷ ರೂ. ಸಾಲ ಮಾಡಿಕೊಂಡಿದ್ದು, ಸಾಲಗಾರರ ಕಾಟದಿಂದ ಮನೆ ಮಾರಾಟಕ್ಕೂ ಮುಂದಾಗಿದ್ದರು ಎನ್ನಲಾಗಿದೆ.
ಮೃತನ ಸಹೋದರ ಶಂಕರ್ ಮಾತನಾಡಿ, ಸುಮಾರು 12 ಲಕ್ಷ ರೂ.ಸಾಲ ಇತ್ತು. ಜಮೀನು ಭಾಗ ಆಗದ ಕಾರಣ ಮಾರಲು ಆಗಿರಲಿಲ್ಲ. ಈಗ ಅಣ್ಣನ ಇಡೀ ಕುಟುಂಬ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಗದ್ಗದಿತರಾದರು. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ತಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಎಲ್ಲ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರೂ ಕಿರುಕುಳ ನಿರಾತಂಕವಾಗಿ ನಡೆಯುತ್ತಿದೆ.
ಇತ್ತೀಚೆಗೆ ಮೈಸೂರಿನ ವಿಶ್ವೇಶ್ವರಯ್ಯನಗರದ ಅಪಾರ್ಟ್‌ಮೆಂಟ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು. ಹಣಕಾಸಿನ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ನೋಟ್ನಲ್ಲಿ ಬರೆದಿಟ್ಟಿದ್ದರು.