Attack on Bus Conductor | ನಾಳೆ ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರಿಂದ ಜಾಥಾ
ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲೆ ದಾಖಲಿಸಿರುವ ಪೋಕ್ಸೊ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ನಾಳೆ (ಫೆ.25)ಬೃಹತ್ ಪ್ರತಿಭಟನಾ ಜಾಥಾ ನಡೆಸಲಿದ್ದಾರೆ.;
ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ವಿರುದ್ಧ ಮರಾಠಿ ಭಾಷಿಕರು ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ನಾಳೆ (ಫೆ.25) ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ʼಕನ್ನಡದಲ್ಲಿ ಮಾತಾಡಿʼ ಎಂದು ಹೇಳಿದ್ದಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ಬೆಳಗಾವಿ ತಾಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದ ಮರಾಠಿ ಭಾಷಿಕರು ಹಿಗ್ಗಾಮುಗ್ಗಾ ಥಳಿಸಿದ್ದರು.
ಭಾಷೆ ವಿಚಾರವಾಗಿ ನಡೆದ ಈ ಹಲ್ಲೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡ ಪರ ಹೋರಾಟಗಾರರು ಮಹಾರಾಷ್ಟ್ರದ ಬಸ್‌ಗಳನ್ನು ತಡೆದು ಕಪ್ಪು ಮಸಿ ಬಳಿದು ಪ್ರತಿಭಟಿಸಿದ್ದರು. ಅದಾದ ಬಳಿಕ ಮಹಾರಾಷ್ಟ್ರ ತನ್ನ ಸಾರಿಗೆ ಬಸ್ಗಳ ಸಂಚಾರ ಸ್ಥಗಿತಗೊಳಿಸಿತ್ತು.
ಕೆಎಸ್‌ಆರ್‌ಟಿಸಿ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ದ್ವೇಷಸಾಧನೆಗಾಗಿ ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲೆ ದಾಖಲಿಸಿರುವ ಪೋಕ್ಸೊ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ನಾಳೆ ಬೃಹತ್ ಪ್ರತಿಭಟನಾ ಜಾಥಾ ನಡೆಸಲಿದ್ದಾರೆ.
ಈ ಕುರಿತು ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು, "ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 1000 ಮಂದಿ ಕಾರ್ಯಕರ್ತರೊಂದಿಗೆ ಬೆಳಗಾವಿಗೆ ತೆರಳಲಿದ್ದೇನೆ" ಎಂದು ಮಾಹಿತಿ ನೀಡಿದರು.
"ಸೋಮವಾರ ರಾತ್ರಿ ವಾಹನಗಳಲ್ಲಿ ಕರವೇ ಕಾರ್ಯಕರ್ತರು ಬೆಳಗಾವಿಗೆ ಪ್ರಯಾಣ ಬೆಳೆಸಲಿದ್ದು, ಮಂಗಳವಾರ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ನಿರ್ವಾಹಕನ ಮೇಲೆ ಪೋಕ್ಸೊ ಕಾಯ್ದೆಯಡಿ ದಾಖಲಿಸಿರುವ ಪ್ರಕರಣವನ್ನು ಫೆ.25 ರೊಳಗೆ ಹಿಂಪಡೆಯಬೇಕು" ಎಂದು ಆಗ್ರಹಿಸಿದರು.
ಮರಾಠಿ ಭಾಷಿಕರ ಪರವಾಗಿ ಮಾತನಾಡಿದ ಸಚಿವೆ ಲಕ್ಷ್ಮಿಹೆಬ್ಬಾಳಕರ್ ವಿರುದ್ಧವೂ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಿಮಗೆ ಮರಾಠಿ ಪ್ರೇಮ ಇದ್ದರೆ ಮಹಾರಾಷ್ಟ್ರದಲ್ಲಿ ಪ್ರದರ್ಶಿಸಿ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಎಂದು ತಿರುಗೇಟು ನೀಡಿದ್ದಾರೆ.