Belagavi News | ಖಾನಾಪುರದಲ್ಲಿ ಕರವೇ ಉಪಾಧ್ಯಕ್ಷರ ಮೇಲೆ ಹಲ್ಲೆ; ಸೊಲ್ಲಾಪುರದಲ್ಲಿ ರಾಜ್ಯದ ಬಸ್‌ಗಳಿಗೆ ಮಸಿ
ಖಾನಾಪುರದಲ್ಲಿ ಕನ್ನಡ ಮಾತನಾಡಿದರೆಂಬ ಕಾರಣಕ್ಕೆ ಶಿವಸೇನೆಗೆ ಸೇರಿದವರು ಎನ್ನಲಾದ ಪುಂಡರು ಕರವೇ ತಾಲೂಕು ಉಪಾಧ್ಯಕ್ಷ, ದೇವಲತ್ತಿ ಗ್ರಾಮದ ಜಯವಂತ ನಿಡಗಲ್ಕರ್ ಮೇಲೆ ಹಲ್ಲೆ ನಡೆಸಿದ್ದಾರೆ.;
ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲಿನ ಹಲ್ಲೆ ಪ್ರಕರಣದ ಬೆನ್ನಲ್ಲೇ ಮರಾಠಿ ಭಾಷಿಕರು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ಖಾನಾಪುರ ತಾಲೂಕು ಉಪಾಧ್ಯಕ್ಷರಿಗೆ ಥಳಿಸಿರುವ ಘಟನೆ ಸೋಮವಾರ ನಡೆದಿದೆ.
ಖಾನಾಪುರ ಪಟ್ಟಣದ ಜಾಂಬೋಟಿ ಕ್ರಾಸ್ ಬಳಿಯ ಫಾಸ್ಟ್‌ಫುಡ್ ಹೋಟೆಲ್‌ನಲ್ಲಿ ಕನ್ನಡ ಮಾತನಾಡಿದರೆಂಬ ಕಾರಣಕ್ಕೆ ಶಿವಸೇನೆ ಕಾರ್ಯಕರ್ತರು ಕರವೇ ತಾಲೂಕು ಉಪಾಧ್ಯಕ್ಷ, ದೇವಲತ್ತಿ ಗ್ರಾಮದ ಜಯವಂತ ನಿಡಗಲ್ಕರ್ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ಜಯವಂತ ಅವರಿಗೆ ಖಾನಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡ ರಕ್ಷಣಾ ವೇದಿಕೆ ಉಪಾಧ್ಯಕ್ಷ
ಫೆ.25ರಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಂಡಿದ್ದಾರೆ. ಅದಕ್ಕಿಂತ ಮೊದಲೇ ಸಂಘಟನೆಯ ಉಪಾಧ್ಯಕ್ಷರ ಮೇಲೆ ಹಲ್ಲೆ ನಡೆಸಿರುವುದು ಇನ್ನಷ್ಟು ಉದ್ವಿಗ್ನತೆಗೆ ಕಾರಣವಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲಿನ ಹಲ್ಲೆ ಪ್ರಕರಣದಿಂದ ಕರ್ನಾಟಕ- ಮಹಾರಾಷ್ಟ್ರದ ನಡುವಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಇದೀಗ ಮತ್ತೊಂದು ಹಲ್ಲೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಸೊಲ್ಲಾಪುರದಲ್ಲಿ ಕೆಎಸ್ಆರ್ಟಿಸಿ ಬಸ್‌ಗೆ ಮಸಿ
ಮಹಾರಾಷ್ಟ್ರದ ಸೊಲ್ಲಾಪುರ ಪಟ್ಟಣದಲ್ಲಿ ಸೋಮವಾರ ಕೆಎಸ್ಆರ್‌ಟಿಸಿ ಬಸ್‌ಗಳಿಗೆ ಕಪ್ಪು ಮಸಿ ಬಳಿದು, ನಾಮಫಲಕ ಒಡೆದು ಹಾಕಿರುವ ಘಟನೆ ನಡೆದಿದೆ. ರಾಜ್ಯದ ಬಸ್ ಮೇಲೆ ʼಜೈ ಮಹಾರಾಷ್ಟ್ರʼ ಎಂದು ಬರೆದಿದ್ದಾರೆ. ಜೊತೆಗೆ ಬಸ್ ಚಾಲಕನಿಂದ ಬಲವಂತವಾಗಿ ʼಜೈ ಮಹಾರಾಷ್ಟ್ರʼ ಎಂದು ಘೋಷಣೆ ಕೂಗಿಸಿದ್ದಾರೆ. ಚಾಲಕ ಬೇಡ ಎಂದರೂ ಎಳೆದಾಡಿ ತಲೆಗೆ ಕೇಸರಿ ಬಣ್ಣ ಎರಚಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ, ಬೆಳಗಾವಿ ಘಟನೆ ಖಂಡಿಸಿ ಚಾಮರಾಜನಗರ, ಚಿಕ್ಕಮಗಳೂರಿನಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.