ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ, ನಾಳೆ ಸಭೆ ಕರೆದ ಸಿಎಂ

ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್‌, ಟಿವಿ ಸೌಲಭ್ಯ ಕಲ್ಪಿಸಿರುವ ಕುರಿತ ವಿಡಿಯೊಗಳು ಬಹಿರಂಗವಾಗಿದೆ. ಕಾನೂನು ಬಾಹಿರ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.

Update: 2025-11-09 11:36 GMT
ಸಿಎಂ ಸಿದ್ದರಾಮಯ್ಯ

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಐಷಾರಾಮಿ ಸವಲತ್ತು ನೀಡಿರುವ ಪ್ರಕರಣ ಸಂಬಂಧ ನಾಳೆ (ಸೋಮವಾರ) ಸಚಿವರು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಸೂಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಭಾನುವಾರ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್‌, ಟಿವಿ ಸೌಲಭ್ಯ ಕಲ್ಪಿಸಿರುವ ಕುರಿತ ವಿಡಿಯೊಗಳು ಬಹಿರಂಗವಾಗಿದೆ. ಕಾನೂನು ಬಾಹಿರ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ರಜೆಯ ಮೇಲೆ ತೆರಳಿದ್ದು, ನಾಳೆ ಗೃಹ ಸಚಿವರು ಸಭೆ ಕರೆದಿದ್ದಾರೆ. ತಪ್ಪು ಮಾಡಿದವರ ಮೇಲೆ ಗಂಭೀರ ಕ್ರಮ ಕೈಗೊಳ್ಳಲಾಗುವುದು. ಇನ್ನೂ ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.

ವಿಕೃತ ಕಾಮಿ ಉಮೇಶ್ ರೆಡ್ಡಿ, ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧಿತನಾಗಿರುವ ತರುಣ್‌ ಸೇರಿ ಹಲವು ಕೈದಿಗಳು ಮೊಬೈಲ್‌ ಬಳಸುತ್ತಿರುವ ವಿಡಿಯೊಗಳು ಬಹಿರಂಗವಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು.  

ಆರ್‌ಎಸ್‌ಎಸ್‌ ನಿಷೇಧದ ಬಗ್ಗೆ ಹೇಳಿಲ್ಲ 

ರಾಜ್ಯದಲ್ಲಿ ನೊಂದಣಿ ಆಗದ ಎಲ್ಲ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ನಾವು ಹೇಳಿದ್ದೇವೆ ಹೊರತು ಆರ್‌ಎಸ್‌ಎಸ್ ಎಂದು ಎಲ್ಲೂ ಹೇಳಿಲ್ಲ. ಬಿಜೆಪಿಯವರು ಆ ರೀತಿ ಅರ್ಥಮಾಡಿಕೊಂಡರೆ ನಾವೇನು ಮಾಡಲು ಆಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಸಂಬಂಧ ಪ್ರಕರಣ ಹೈಕೋರ್ಟ್‌ನಲ್ಲಿದೆ. ತೀರ್ಪಿನಂತೆ ಕ್ರಮ ವಹಿಸುವುದು. ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಕೊಡಬೇಕು. ರಾಜ್ಯದಲ್ಲಿ 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದ್ದು ರಾಜ್ಯ ಸರ್ಕಾರ ಪರಿಹಾರ ನೀಡಲಿದೆ ಎಂದು ಹೇಳಿದ್ದಾರೆ.

ಸಕ್ಕರೆ ಕಾರ್ಖಾನೆ ಮಾಲೀಕರು ಸರ್ಕಾರದ ತೀರ್ಮಾನದ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿ, ಸಕ್ಕರೆ ಕಾರ್ಖಾನೆ ಮಾಲೀಕರ ಸಮ್ಮುಖದಲ್ಲಿಯೇ ಎಫ್‌ಆರ್‌ಪಿ ದರ ತೀರ್ಮಾನ ಮಾಡಲಾಗಿದೆ. 50 ರೂ. ಎಲ್ಲರೂ ಕೊಡಲೇಬೇಕು. ಕೊಡದಿರುವವರೂ ಕೊಡುತ್ತಾರೆ ಎಂದು ಭಾವಿಸಿದ್ದೇನೆ ಎಂದು ತಿಳಿಸಿದ್ದಾರೆ.

ಬಸನಗೌಡ ಪಾಟೀಲ ಯತ್ನಾಳ್ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸರ್ಕಾರದ ಆದೇಶ ಪಾಲಿಸದ ಸಕ್ಕರೆ ಕಾರ್ಖಾನೆ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.  

ವಾಲ್ಮೀಕಿ ಸಮುದಾಯಕ್ಕೆ ಪ್ರಾತಿನಿಧ್ಯ

ವಾಲ್ಮೀಕಿ ಸಮುದಾಯಕ್ಕೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಿ ಸಚಿವ ಸಂಪುಟ ಪುನರ್ ರಚನೆಯಾದಾಗ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Tags:    

Similar News