ಪರಪ್ಪನ ಅಗ್ರಹಾರ ರಾಜಾತಿಥ್ಯ| ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ
ಈತನನ್ನು ಎಲ್ಲಾ ಸಜಾ ಬಂಧಿಗಳ ಜೊತೆಗೆ ಸಜಾ ಬ್ಯಾರಕ್ನಲ್ಲೇ ಇರಿಸಿದ್ದರೂ ಈತ ಎರಡು ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳು ಹಾಗೂ ಕೀಪ್ಯಾಡ್ ಮೊಬೈಲ್‌ಗಳನ್ನು ಇಟ್ಟುಕೊಂಡು ಮಾತನಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ನೀಡಲಾಗುತ್ತಿರುವ ಅಕ್ರಮ 'ರಾಜಾತಿಥ್ಯ'ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಮವಾರ ಮಹತ್ವದ ಸಭೆಯನ್ನು ಕರೆದಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಇತ್ತೀಚೆಗೆ ಕುಖ್ಯಾತ ಅತ್ಯಾಚಾರಿ ಉಮೇಶ್ ರೆಡ್ಡಿ ಸೇರಿದಂತೆ ಹಲವು ಗಂಭೀರ ಆರೋಪ ಹೊತ್ತ ಕೈದಿಗಳು ಜೈಲಿನೊಳಗೆ ಮೊಬೈಲ್ ಫೋನ್, ಟಿವಿ ಸೇರಿದಂತೆ ಐಷಾರಾಮಿ ಸೌಲಭ್ಯಗಳನ್ನು ಅನುಭವಿಸುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. ಈ ಘಟನೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ, ಇಂದಿನ ಸಭೆಯಲ್ಲಿ ಜೈಲುಗಳ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಇಂತಹ ಅವ್ಯವಸ್ಥೆಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕುರಿತು ಸಮಾಲೋಚನೆ ನಡೆಯಲಿದೆ. ಜೈಲುಗಳಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ಜಾರಿಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಗೃಹ ಸಚಿವರು ಚರ್ಚೆ ನಡೆಸುವ ಸಾಧ್ಯತೆ ಇದೆ.
ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಅಮಾನತು ಸೇರಿದಂತೆ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಏನಿದು ಪ್ರಕರಣ
ಸರಣಿ ಅತ್ಯಾಚಾರದ ಆರೋಪಿ ಉಮೇಶ್ ರೆಡ್ಡಿ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ವಿಡಿಯೊ ವೈರಲ್ ಆಗಿತ್ತು. ಈ ವೈರಲ್ ವಿಡಿಯೋಗಳಲ್ಲಿ ಉಮೇಶ್ ರೆಡ್ಡಿ, ಜೈಲಿನಲ್ಲಿ ಬಿಂದಾಸ್ ಆಗಿ ಬದುಕುತ್ತಿದ್ದ. ಈತನ ಕೈಯಲ್ಲಿ ಮೊಬೈಲ್, ರೂಂನಲ್ಲಿ ಟಿವಿ ಇರುವಂತಹ ವಿಡಿಯೊಗಳು ವೈರಲ್ ಆಗಿವೆ. ಗಲ್ಲು ಶಿಕ್ಷೆಗೆ ಗುರಿಯಾಗಿರುವ ಈತ, 1996 ರಿಂದ 2002 ರವರೆಗೆ ಸುಮಾರು 20 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ. ಅದರಲ್ಲಿ 18 ಜನ ಮಹಿಳೆಯರನ್ನು ಕೊಲೆ ಮಾಡಿದ್ದ. ಈತನನ್ನು ಬೆಳಗಾವಿ ಜೈಲಿನಲ್ಲಿ ನೇಣಿಗೇರಿಸಬೇಕಾಗಿತ್ತು. ಆದರೆ, ಈತ ತಾನು ಹುಚ್ಚ ಎಂದು ಬಿಂಬಿಸಿಕೊಂಡು ಮರಣದಂಡನೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಾಟಕವಾಡಿದ್ದ. ನಿತ್ಯ ಜೈಲು ಅಧಿಕಾರಿಗಳನ್ನು ಗೊಂದಲಕ್ಕೆ ಈಡು ಮಾಡಿದ್ದ. ಈತನ ಕಳ್ಳಾಟ ಬಯಲಿಗೆಳೆಯಲು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು. ಆಗ ಆತನ ಕಳ್ಳಾಟ ಬಯಲಾಗಿತ್ತು. ಆತನ ಮಿದುಳು ಸುಸ್ಥಿತಿಯಲ್ಲಿದೆ, ಸಂಪೂರ್ಣ ಆರೋಗ್ಯಕರವಾಗಿದ್ದಾರೆ ಎಂದು ವೈದ್ಯಕೀಯ ವರದಿಯಲ್ಲಿ ತಿಳಿಸಿದ್ದರು.
ಇದಾದ ಬಳಿಕ, ರೆಡ್ಡಿ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿ ಜೀವಭಿಕ್ಷೆ ಬೇಡಿದ್ದರಿಂದ ಸುಪ್ರೀಂಕೋರ್ಟ್ 2022 ರಲ್ಲಿ ಮರಣದಂಡನೆಯನ್ನು 30 ವರ್ಷಗಳ ಶಿಕ್ಷೆಗೆ ಇಳಿಸಿತ್ತು. ಈಗ ಸಂಪೂರ್ಣ ಶಿಕ್ಷೆ ಮುಗಿಸಿ ಬಿಡುಗಡೆಯ ಕೊನೆ ಹಂತದಲ್ಲಿರುವ ಉಮೇಶ್ ರೆಡ್ಡಿ, ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾನೆ.
ಈತನನ್ನು ಎಲ್ಲಾ ಸಜಾ ಬಂಧಿಗಳ ಜೊತೆಗೆ ಸಜಾ ಬ್ಯಾರಕ್ನಲ್ಲೇ ಇರಿಸಿದ್ದರೂ ಈತ ಎರಡು ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳು ಹಾಗೂ ಕೀಪ್ಯಾಡ್ ಮೊಬೈಲ್‌ಗಳನ್ನು ಇಟ್ಟುಕೊಂಡು ಮಾತನಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು.
ಇನ್ನೊಂಡೆ ಚಿನ್ನ ಕಳ್ಳಸಾಗಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟಿ ರನ್ಯಾ ರಾವ್ ಪ್ರಿಯಕರ ಹಾಗೂ ತೆಲುಗು ನಟ ತರುಣ್ ಕೂಡ ಜೈಲಿನೊಳಗೆ ಐಷಾರಾಮಿ ಜೀವನ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಕೈಯಲ್ಲಿ ಮೊಬೈಲ್, ತನ್ನ ಸೆಲ್ನಲ್ಲಿ ಟಿವಿ ಇಟ್ಟುಕೊಂಡು ತರುಣ್ ಬಿಂದಾಸ್ ಆಗಿ ಕಾಲ ಕಳೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.
ಈ ಹಿಂದೆ ಕೊಲೆ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಜೈಲಿನಲ್ಲಿ ವಿಶೇಷ ಸವಲತ್ತು ನೀಡಿರುವ ಚಿತ್ರಗಳು ವೈರಲ್ ಆಗಿದ್ದವು. ದರ್ಶನ್ ಜೈಲಿನಲ್ಲಿ ಸಿಗರೇಟ್ ಸೇವನೆ ಮತ್ತಿತರ ಸೌಲಭ್ಯ ನೀಡಲಾಗಿತ್ತು ಎಂಬ ಸುದ್ದಿ ವೈರಲ್ ಆಗಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.