
ಜೈಲಿನಲ್ಲಿ ಮೊಬೈಲ್ ಬಳಸುತ್ತಿರುವ ಉಮೇಶ್ ರೆಡ್ಡಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ರಾಜಾತಿಥ್ಯ
ಹೆಣ್ಣು ಮಕ್ಕಳ ನಿದ್ದೆಗೆಡಿಸಿದ್ದ ಸೀರಿಯಲ್ ರೇಪಿಸ್ಟ್ ಉಮೇಶ್ ರೆಡ್ಡಿ, ಜೈಲಿನಲ್ಲಿ ಬಿಂದಾಸ್ ಆಗಿ ಲೈಫ್ ಲೀಡ್ ಮಾಡುತ್ತಿದ್ದಾನೆ ಎನ್ನಲಾಗಿದೆ. ಈತನ ಕೈಯಲ್ಲಿ ಮೊಬೈಲ್, ರೂಂನಲ್ಲಿ ಟಿವಿ ಇರುವಂತಹ ವಿಡಿಯೊಗಳು ವೈರಲ್ ಆಗಿವೆ.
ಪರಪ್ಪನ ಅಗ್ರಹಾರದಲ್ಲಿ ಒಂದೆಡೆ ನಟ ದರ್ಶನ್, ಹಾಸಿಗೆ ಹಾಗೂ ದಿಂಬಿಗಾಗಿ ಪರದಾಡುತ್ತಿದ್ದರೆ, ಮತ್ತೊಂದೆಡೆ ವಿಕೃತ ಕಾಮಿ ಉಮೇಶ್ ರೆಡ್ಡಿ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ವಿಡಿಯೊ ವೈರಲ್ ಆಗಿದೆ.
ಹೆಣ್ಣು ಮಕ್ಕಳ ನಿದ್ದೆಗೆಡಿಸಿದ್ದ ವಿಕೃತ ಕಾಮಿ ಉಮೇಶ್ ರೆಡ್ಡಿ, ಜೈಲಿನಲ್ಲಿ ಬಿಂದಾಸ್ ಆಗಿ ಬದುಕುತ್ತಿದ್ದಾನೆ. ಈತನ ಕೈಯಲ್ಲಿ ಮೊಬೈಲ್, ರೂಂನಲ್ಲಿ ಟಿವಿ ಇರುವಂತಹ ವಿಡಿಯೊಗಳು ವೈರಲ್ ಆಗಿವೆ. ಗಲ್ಲು ಶಿಕ್ಷೆಗೆ ಗುರಿಯಾಗಿರುವ ಈತ, 1996 ರಿಂದ 2002 ರವರೆಗೆ ಸುಮಾರು 20 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ. ಅದರಲ್ಲಿ 18 ಜನ ಮಹಿಳೆಯರನ್ನು ಕೊಲೆ ಮಾಡಿದ್ದ.
ಕುಖ್ಯಾತನಾಗಿದ್ದ ಈತನನ್ನು ಬೆಳಗಾವಿ ಜೈಲಿನಲ್ಲಿ ನೇಣಿಗೇರಿಸಬೇಕಾಗಿತ್ತು. ಆದರೆ, ಈತ ತಾನು ಹುಚ್ಚ ಎಂದು ಬಿಂಬಿಸಿಕೊಂಡು ಮರಣದಂಡನೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಾಟಕವಾಡಿದ್ದ. ನಿತ್ಯ ಜೈಲು ಅಧಿಕಾರಿಗಳನ್ನು ಗೊಂದಲಕ್ಕೆ ಈಡು ಮಾಡಿದ್ದ. ಈತನ ಕಳ್ಳಾಟ ಬಯಲಿಗೆಳೆಯಲು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು. ಆಗ ಆತನ ಕಳ್ಳಾಟ ಬಯಲಾಗಿತ್ತು. ಆತನ ಮಿದುಳು ಸುಸ್ಥಿತಿಯಲ್ಲಿದೆ, ಸಂಪೂರ್ಣ ಆರೋಗ್ಯಕರವಾಗಿದ್ದಾರೆ ಎಂದು ವೈದ್ಯಕೀಯ ವರದಿಯಲ್ಲಿ ತಿಳಿಸಿದ್ದರು.
ಇದಾದ ಬಳಿಕ, ರೆಡ್ಡಿ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿ ಜೀವಭಿಕ್ಷೆ ಬೇಡಿದ್ದರಿಂದ ಸುಪ್ರೀಂಕೋರ್ಟ್ 2022 ರಲ್ಲಿ ಮರಣದಂಡನೆಯನ್ನು 30 ವರ್ಷಗಳ ಶಿಕ್ಷೆಗೆ ಇಳಿಸಿತ್ತು. ಈಗ ಸಂಪೂರ್ಣ ಶಿಕ್ಷೆ ಮುಗಿಸಿ ಬಿಡುಗಡೆಯ ಕೊನೆ ಹಂತದಲ್ಲಿರುವ ಉಮೇಶ್ ರೆಡ್ಡಿ, ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾನೆ.
ಈತನನ್ನು ಎಲ್ಲಾ ಸಜಾ ಬಂಧಿಗಳ ಜೊತೆಗೆ ಸಜಾ ಬ್ಯಾರಕ್‌ನಲ್ಲೇ ಇರಿಸಿದ್ದರೂ ಈತ ಎರಡು ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳು ಹಾಗೂ ಕೀಪ್ಯಾಡ್ ಮೊಬೈಲ್‌ಗಳನ್ನು ಇಟ್ಟುಕೊಂಡು ಮಾತನಾಡುತ್ತಿರುವ ವಿಡಿಯೊ ವೈರಲ್ ಆಗಿದ್ದು, ಜೈಲು ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

