ಸಿಎಂಗೆ ಬಹಿರಂಗ ಪತ್ರ | ʼಜನಾನುರಾಗಿ ಬಜೆಟ್ ಮಂಡಿಸಿ, ಇಲ್ಲವೇ ಅಧಿಕಾರ ಬಿಡಿʼ ಎಂದ ವಿಜಯೇಂದ್ರ
“ರಾಜ್ಯದಲ್ಲಿ ಎರಡನೇ ಬಾರಿಗೆ ಹಾಲು ಮತ್ತು ವಿದ್ಯುತ್ ದರ ಏರಿಕೆಯ ಚರ್ಚೆ ನಡೆಸುತ್ತಿರುವುದನ್ನು ವಿರೋಧಿಸುತ್ತೇನೆ" ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.;
ಮಾ.7ರಂದು ರಾಜ್ಯ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು, ಬಜೆಟ್ ಆದ್ಯತೆಗಳ ಕುರಿತು ಪ್ರಶ್ನಿಸಿದ್ದಾರೆ.
“ತಮ್ಮ16ನೇ ಬಜೆಟ್‌ನಲ್ಲಿ ರಾಜ್ಯಕ್ಕೆ ಆರ್ಥಿಕವಾಗಿ ಅನುಕೂಲವಾಗುವ, ಅಭಿವೃದ್ಧಿ ಆಧಾರಿತ ಮಾರ್ಗಸೂಚಿ ಮಂಡಿಸಲು ನಿಮಗೆ ಉತ್ತಮ ಅವಕಾಶವಿದೆ. ಸುಸ್ಥಿರ ಆರ್ಥಿಕ ಬೆಳವಣಿಗೆ, ಸಾಮಾಜಿಕ ಕಲ್ಯಾಣ ಮತ್ತು ವಿವೇಚನಾಯುಕ್ತ ಹಣಕಾಸು ನಿರ್ವಹಣೆಗೆ ಆದ್ಯತೆ ನೀಡುತ್ತೀರಿ ಎಂದು ನಂಬಿದ್ದೇನೆ. ಇಂತಹ ಮಹತ್ವದ ಪ್ರಯತ್ನದಲ್ಲಿ ನಿಮಗೆ ಯಶಸ್ಸು ಸಿಗಲಿ" ಎಂದಿದ್ದಾರೆ.
"ರಾಜ್ಯದ ಬೊಕ್ಕಸ ಭರಿದಾಗಿದೆ. ಕೃಷಿ ಸೇರಿದಂತೆ ಯಾವುದೇ ಕ್ಷೇತ್ರಗಳ ಅಭಿವೃದ್ಧಿಗೂ ಬಿಡಿಗಾಸು ಇಲ್ಲದೆ ಸರ್ಕಾರ ಬರಿಗೈಯಲ್ಲಿ ಕೈ ಚಾಚಿ ಕುಳಿತಿದೆ. ಇದು ಕರ್ನಾಟಕದ ದೌರ್ಭಾಗ್ಯ. ಜನಾನುರಾಗಿ ಬಜೆಟ್ ಮಂಡನೆ ಮಾಡಲು ಸಾಧ್ಯವಾಗದಿದ್ದರೆ ಅಧಿಕಾರದಿಂದ ಕಾಂಗ್ರೆಸ್ ಪಕ್ಷ ಕೆಳಗಿಳಿದು, ತಮ್ಮ ವೈಫಲ್ಯಗಳನ್ನು ಒಪ್ಪಿಕೊಳ್ಳಲಿ" ಎಂದು ಆಗ್ರಹಿಸಿದ್ದಾರೆ.
"ಕಾಂಗ್ರೆಸ್ ಪಕ್ಷದವರಿಗೆ ಅಧಿಕಾರ ಅನುಭವಿಸುವುದಕ್ಕಾಗಿ ಜನರು ಆಯ್ಕೆ ಮಾಡಿ ಕಳುಹಿಸಿಲ್ಲ. ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವ ನಿರೀಕ್ಷೆಯಿಂದ ಚುನಾಯಿಸಿ ಕಳುಹಿಸಿದ್ದಾರೆ. ಆದರೆ, ಈಗಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಜನರ ನಿರೀಕ್ಷೆ, ಅಪೇಕ್ಷೆಗಳೆಲ್ಲವೂ ಮಣ್ಣು ಪಾಲಾಗುತ್ತಿವೆ. ಬರೀ ಸ್ವಪ್ರತಿಷ್ಠೆ, ಸ್ವಾರ್ಥ, ಭ್ರಷ್ಟಾಚಾರದಲ್ಲಿ ಮುಳುಗಿದೆ. ಪ್ರಸಕ್ತ ವರ್ಷ ಜನರು ಹಾಗೂ ರಾಜ್ಯದ ಪಾಲಿಗೆ ಕರಾಳ ವರ್ಷವಾಗುವ ಸೂಚನೆ ಕಾಣುತ್ತಿದೆ. ಜನರ ಆಕ್ರೋಶ ಭುಗಿಲೇಳುವ ಮುನ್ನವೇ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು" ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಲೆ ಏರಿಕೆಗೆ ವಿರೋಧ
“ರಾಜ್ಯದಲ್ಲಿ ಎರಡನೇ ಬಾರಿಗೆ ಹಾಲು ಮತ್ತು ವಿದ್ಯುತ್ ದರ ಏರಿಕೆಯ ಚರ್ಚೆ ನಡೆಸುತ್ತಿರುವುದನ್ನು ವಿರೋಧಿಸುತ್ತೇನೆ. ಈಗಾಗಲೇ ಮೆಟ್ರೋ ಹಾಗೂ ಬಸ್ ಪ್ರಯಾಣ ದರ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರವು ದರ ನಿಗದಿ ಸಮಿತಿಗೆ ಪತ್ರ ಬರೆಯದೇ ಹೋಗಿದ್ದರೆ ಮೆಟ್ರೋ ಪ್ರಯಾಣ ದರ ಏರಿಕೆಯ ಸಂದರ್ಭವೇ ಬರುತ್ತಿರಲಿಲ್ಲ” ಎಂದು ಹೇಳಿದ್ದಾರೆ.
“ಬಜೆಟ್‌ನಲ್ಲಿ ಎಷ್ಟು ಸಾಲ ಮಾಡಲಿದ್ದೀರಿ ಎಂದು ಜನ ಆತಂಕದಿಂದ ನೋಡುವಂತಾಗಿದೆ. ನೌಕರರಿಗೆ ಸಂಬಳ ಕೊಡಲಾಗದ, ವಿದ್ಯುತ್ ಬಿಲ್ ಭರಿಸಲಾಗದ, ಗುತ್ತಿಗೆದಾರರ ಬಾಕಿ ಪಾವತಿಸಲಾಗದ ದಾರುಣ ಸ್ಥಿತಿಗೆ ರಾಜ್ಯವನ್ನು ತಂದು ನಿಲ್ಲಿಸಿರುವ ಅಪಕೀರ್ತಿಗೆ ತಾವು ಗುರಿಯಾಗಬಾರದು. ಹಾಗಾಗಿ ಸುಸ್ಥಿರ ಆರ್ಥಿಕ ಬೆಳೆವಣಿಗೆಗೆ ಪೂರಕವಾಗಿ ಬಜೆಟ್ ಮಂಡನೆ ಮಾಡಬೇಕು” ಎಂದು ಮನವಿ ಮಾಡಿದ್ದಾರೆ.
ಗ್ಯಾರಂಟಿ ಯೋಜನೆಗಳು ವಿಫಲ
"ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ʼಗೃಹ ಜ್ಯೋತಿʼ ನಂದಿಸಲು ಎಸ್ಕಾಂಗಳು ಸಿದ್ಧವಾಗಿವೆ. ಈಗಾಗಲೇ 15 ಬಾರಿ ಬಜೆಟ್ ಮಂಡಿಸಿದ ದಾಖಲೆ ಹೊಂದಿರುವ ತಾವು ಉಚಿತ ಭಾಗ್ಯಗಳಿಗೆ ಹಣ ಸರಿದೂಗಿಸಲು ಸಮತೋಲನ ಕಳೆದುಕೊಳ್ಳುತ್ತಿರುವುದು ತಿಳಿಯುತ್ತಿದೆ. ಆರ್ಥಿಕ ದೂರದೃಷ್ಟಿ ಇಲ್ಲದ, ಬದ್ಧತೆಯಿಲ್ಲದ ಮತ ಬ್ಯಾಂಕ್ ಆಧಾರಿತ ಯೋಜನೆಗಳು ಸೊರಗುತ್ತಿದೆ. ಅಭಿವೃದ್ಧಿ ಗಗನಕುಸುಮವಾಗಿದೆ. ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರನ್ನು ಹೈರಾಣಾಗಿಸುತ್ತಿದೆ. ಪಂಚ ಗ್ಯಾರಂಟಿಯ ಯೋಜನೆಗಳು ತೋರಿಕೆ- ಹೇಳಿಕೆಗೆ ಮಾತ್ರ ಎಂಬಂತಿದ್ದು, ಜನರಿಗೆ ತಲುಪುವಲ್ಲಿ ವಿಫಲವಾಗಿವೆ" ಎಂದು ಟೀಕಿಸಿದ್ದಾರೆ.
"ಕೇಂದ್ರ ಸರ್ಕಾರ ನೀಡುವ ʼಗರೀಬ್ ಕಲ್ಯಾಣ್ʼ ಅನ್ನ ಯೋಜನೆಯ 5 ಕೆ.ಜಿ ಅಕ್ಕಿ ಹೊರತುಪಡಿಸಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಹೆಚ್ಚುವರಿ 5 ಕೆ.ಜಿ ಅಕ್ಕಿಯೂ ಇಲ್ಲ, ಫಲಾನುಭವಿಗಳ ಖಾತೆಗೆ ಹಣವೂ ಜಮೆಯಾಗುತ್ತಿಲ್ಲ. ಯುವ ನಿಧಿ ಯೋಜನೆಯಡಿ ಅರ್ಜಿ ಕರೆಯುವ ಪ್ರಕಟಣೆ ಬಿಟ್ಟರೆ ಅವರ ಖಾತೆಗಳಿಗೆ ಹಣ ಜಮೆಯಾಗಿರುವ ಬಗ್ಗೆ ವಿವರಗಳೇ ಲಭ್ಯವಾಗಿಲ್ಲ. ಶಕ್ತಿ ಯೋಜನೆಯಿಂದ ಕೆಎಸ್‌ಆರ್‌ಟಿಸಿ ಸಂಸ್ಥೆ ನಷ್ಟದ ಹಾದಿ ತುಳಿದಿದೆ" ಎಂದು ಆರೋಪಿಸಿದ್ದಾರೆ.