PUBLIC HEALTH SYSTEM | ಬೈಕ್‌ನಲ್ಲೇ ವೃದ್ಧನ ಶವ ಸಾಗಿಸಿದ ಮಕ್ಕಳು!
ಸರ್ಕಾರಿ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಇಲ್ಲದೇ ತಮ್ಮ ತಂದೆಯ ಮೃತದೇಹವನ್ನು ಮಕ್ಕಳು ಬೈಕಿನಲ್ಲೇ ಸಾಗಿಸಿರುವ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆಯಲ್ಲಿ ನಡೆದಿದೆ.
ಆಂಬ್ಯುಲೆನ್ಸ್ ಇಲ್ಲದೇ ಮಕ್ಕಳು ತಮ್ಮ ತಂದೆಯ ಮೃತದೇಹವನ್ನು ಐದು ಕಿಮೀ ದೂರ ಬೈಕ್‌ನಲ್ಲೇ ಸಾಗಿಸಿರುವ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆಯಲ್ಲಿ ನಡೆದಿದೆ.
ವಯೋಸಹಜ ಕಾಯಿಲೆಯಿಂದ ದಳವಾಯಿ ಹಳ್ಳಿ ಗ್ರಾಮದ ಗುಡುಗುಲ್ಲ ಹೊನ್ನೂರಪ್ಪ ಎನ್ನುವ 80 ವರ್ಷದ ವ್ಯಕ್ತಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರ ಮಕ್ಕಳು ಹೊನ್ನೊರಪ್ಪ ಅವರನ್ನ 108 ಆಂಬ್ಯುಲೆನ್ಸ್ ನಲ್ಲಿ ವೈ.ಎನ್ ಹೊಸಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದರು. ಆದರೆ ಅಷ್ಟರಾಗಲೇ ಹೊನ್ನೂರಪ್ಪನ ಜೀವ ಹೋಗಿತ್ತು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದ್ದರು.
ಆಗ ತಮ್ಮ ತಂದೆಯ ಮೃತ ಶರೀರವನ್ನು ವಾಪಸ್ ಮನೆಗೆ ಒಯ್ಯಲು ಅವರ ಮಕ್ಕಳು 108 ಆಂಬ್ಯುಲೆನ್ಸ್‌ಗಾಗಿ ಅಲೆದಾಡಿದರೂ, ಬಳಿಕ ಮೃತ ಶರೀರವನ್ನು ಮನೆಗೆ ಸಾಗಿಸಲು 108 ಸಿಬ್ಬಂದಿ ನಿರಾಕರಿಸಿದ್ದಾರೆ. ಮೃತದೇಹವನ್ನು ಆಂಬ್ಯುಲೆನ್ಸ್‌ನಲ್ಲಿ ಸಾಗಿಸುವಂತಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಖಾಸಗಿ ಆಂಬ್ಯುಲೆನ್ಸ್‌ನಲ್ಲಿ ಶವ ಸಾಗಿಸಲು ಕೈಯಲ್ಲಿ ಹಣವಿಲ್ಲದೇ ಹೊನ್ನೂರಪ್ಪ ಮಕ್ಕಳು, ತಮ್ಮ ಬೈಕಿನಲ್ಲೇ ಶವ ಸಾಗಿಸಿದ್ದಾರೆ.
ಅಷ್ಟೇ ಅಲ್ಲ; ಮೃತ ದೇಹವನ್ನು ಆಸ್ಪತ್ರೆಯ ಒಳಗಿನಿಂದ ಹೊರತರಲು ಸ್ಟ್ರೆಚರ್ ಕೂಡ ನೀಡದೆ, ಆಸ್ಪತ್ರೆ ಸಿಬ್ಬಂದಿ ಅಮಾನವೀಯತೆ ತೋರಿದ್ದಾರೆ. ಹಾಗಾಗಿ ಅಸಹಾಯಕರಾದ ಮಕ್ಕಳು ಆಸ್ಪತ್ರೆಯ ಒಳಗಿನಿಂದ ಶವವನ್ನು ಹೆಗಲ ಮೇಲೆ ಹೊತ್ತುಕೊಂಡೇ ಹೊರತಂದು ಬೈಕಿನಲ್ಲಿ ಐದು ಕಿಮೀ ದೂರದ ತಮ್ಮ ಊರಿಗೆ ತೆಗೆದುಕೊಂಡುಹೋಗಿದ್ದಾರೆ.
"ನಮ್ಮ ತಂದೆಗೆ ಬದುಕಿರುವಾಗ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ದೊರೆಯಲಿಲ್ಲ. ಅವರ ಸಾವಿನ ಬಳಿಕ ಕನಿಷ್ಟ ಒಂದು ಸ್ಟ್ರೆಚರ್, ಶವ ಸಾಗಿಸಲು ಆಂಬ್ಯುಲೆನ್ಸ್ ಕೂಡ ಸಿಗಲಿಲ್ಲ. ಅವರನ್ನು ಕನಿಷ್ಟ ಗೌರವದಿಂದ ಬೀಳ್ಕೊಡಲೂ ನಮ್ಮಿಂದ ಆಗಲಿಲ್ಲ" ಎಂದು ಹೊನ್ನೂರಪ್ಪ ಪುತ್ರ ಗೋಪಾಲಪ್ಪ ಕಣ್ಣೀರುಗೆರೆಯುತ್ತಾ ತಮ್ಮ ತಂದೆಯ ಶವ ಹೊತ್ತು ಆಸ್ಪತ್ರೆಯಿಂದ ಹೊರ ನಡೆಯುತ್ತಿದ್ದ ದೃಶ್ಯ ಕಂಡ, ಸಾರ್ವಜನಿಕರು ಆಸ್ಪತ್ರೆ ಸಿಬ್ಬಂದಿ ಅಮಾನವೀತೆಗೆ ಹಿಡಿಶಾಪ ಹಾಕಿದರು.