PUC Exam Reult | ನಾಳೆ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ; ವಿದ್ಯಾರ್ಥಿಗಳಿಗೆ ಆತಂಕ, ಪೋಷಕರಿಗೆ ಕೌತುಕ
ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದ್ದು, ನಾಳೆ(ಏ.8) ಫಲಿತಾಂಶ ಘೋಷಣೆ ಆಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.;
ಪ್ರಾತಿನಿಧಿಕ ಚಿತ್ರ.
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ನಾಳೆ (ಏ.8) ಮಧ್ಯಾಹ್ನ1.30ಕ್ಕೆ ಪ್ರಕಟವಾಗಲಿದೆ. ಮಾ.೧ ರಿಂದ ೨೦ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಫಲಿತಾಂಶ ಘೋಷಿಸಲಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಬೆಂಗಳೂರಿನ ವಿವಿಧ ಕೇಂದ್ರಗಳಲ್ಲಿ ನಡೆದಿದೆ. ಫಲಿತಾಂಶ ಘೋಷಣೆ ಕುರಿತು ಸಚಿವರು ಮಧ್ಯಾಹ್ನ 12.30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಜಾಲತಾಣದಲ್ಲಿ ಮಧ್ಯಾಹ್ನ 1.30 ಕ್ಕೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ನಾಳಿನ ಫಲಿತಾಂಶ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ, ಪೋಷಕರಲ್ಲಿ ತಮ್ಮ ಮಕ್ಕಳ ಸಾಧನೆ ಕಾಣುವ ಕುತೂಹಲ ಗರಿಗೆದರಿದೆ.
ದ್ವಿತೀಯ ಪಿಯು ಪರೀಕ್ಷೆಗೆ ಒಟ್ಟು 7,13,862 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 1,171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 6,61,474 ಹೊಸ ವಿದ್ಯಾರ್ಥಿಗಳು, 34,071 ಪುನರಾವರ್ತಿತ ವಿದ್ಯಾರ್ಥಿಗಳು, 18,317 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
ಫಲಿತಾಂಶ ವೀಕ್ಷಣೆ ಹೇಗೆ?
ವಿದ್ಯಾರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://karresults.nic.in, kseab.karnataka.gov.in ಗೆ ಭೇಟಿ ನೀಡಬೇಕು. ಹೋಂ ಪೇಜ್‌ನಲ್ಲಿ ಕಾಣುವ Second PU Results 2025 ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸಬೇಕು. ಬಳಿಕ ಫಲಿತಾಂಶ ವೀಕ್ಷಣೆ ಮಾಡಬಹುದು.
ಫಲಿತಾಂಶದ ಪ್ರತಿಯನ್ನು ಪಿಡಿಎಫ್ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.