ರೇಣುಕಾಸ್ವಾಮಿ ಹತ್ಯೆ ಪ್ರಕರಣ | ದರ್ಶನ್‌ಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ

ರೇಣುಕಾಸ್ವಾಮಿಯ ಹತ್ಯೆ ಖಂಡಿಸಿ ಬುಧವಾರ ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.;

Update: 2024-06-12 09:03 GMT
ರೇಣುಕಾಸ್ವಾಮಿ ಹತ್ಯೆ ಖಂಡಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಯಿತು.
Click the Play button to listen to article

ಕ್ಷುಲ್ಲಕ ಕಾರಣಕ್ಕೆ ನಟ ದರ್ಶನ್ ಹಾಗೂ ಅವನ ಸಹಚರರು ಅಮಾನುಷವಾಗಿ ಕೊಲೆ ಮಾಡಿದ್ದಾರೆ ಎನ್ನಲಾಗಿರುವ ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿಯ ಹತ್ಯೆ ಖಂಡಿಸಿ ಬುಧವಾರ (ಜೂ.12) ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ವಿಎಚ್‌ಪಿ, ಭಜರಂಗ ದಳ, ವೀರಶೈವ ಸಮಾಜ, ವೀರಶೈವ ಲಿಂಗಾಯತ ಮಹಾಸಭಾ, ಜಂಗಮ ಸಮುದಾಯ ಮತ್ತಿತರ ಹಿಂದೂಪರ ಸಂಘಟನೆಗಳು ದರ್ಶನ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬೃಹತ್‌ ಪ್ರತಿಭಟನೆ ನಡೆಸಿದರು.

ನಗರದ ನೀಲಕಂಠೇಶ್ವರ ಸ್ವಾಮಿ ದೇವಾಲಯದಿಂದ ಆರಂಭವಾದ ಪ್ರತಿಭಟನೆ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಾಗಿತು. ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿತು. ಬಳಿಕ ನಗರದ ವೀರ ವನಿತೆ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿದ ಪ್ರಮುಖರು, ಹತ್ಯೆ ಖಂಡಿಸಿ, ನಟ ದರ್ಶನ್ ಮತ್ತವರ ಸಹಚರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದರ್ಶನ್ ಮತ್ತಿತರ ವಿರುದ್ಧ ವ್ಯಾಪಕವಾಗಿ ಘೋಷಣೆಗಳನ್ನು ಕೂಗಿದರು. ದರ್ಶನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ದರ್ಶನ್‌ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ರಾಜ್ಯದಾದ್ಯಂತ ದರ್ಶನ್ ಸಿನಿಮಾಗಳು ಬಿಡುಗಡೆಯಾಗಬಾರದು. ಸಾರ್ವಜನಿಕರು ಕೂಡ ಅವರ ಚಿತ್ರಗಳನ್ನು ಬಹಿಷ್ಕರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ತಪ್ಪು ಮಾಡಿದ್ದರೆ ಪೊಲೀಸರಿಗೆ ದೂರು ನೀಡಲು ಅವಕಾಶವಿತ್ತು. ಆದರೆ ಕಾನೂನು ಕೈಗೆತ್ತಿಕೊಂಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಪೊಲೀಸರು ಆರೋಪಿಗಳನ್ನು ಬಂಧಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಮುಂದೆ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ. ಮುಖ್ಯಮಂತ್ರಿ, ಗೃಹಸಚಿವರು ಈ ನಿಟ್ಟಿನಲ್ಲಿ ಪೊಲೀಸರಿಗೆ ಸಂಪೂರ್ಣ ಸ್ವತಂತ್ರ ನೀಡಬೇಕು ಎಂದು ಒತ್ತಾಯಿಸಿದರು.

ಮೃತ ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಕೋರಿ ಕೆಲ ಕಾಲ ಮೌನಾಚರಣೆ ನಡೆಸಿದ ಪ್ರತಿಭಟನಾಕಾರರು, ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಎಂಎಲ್‌ಸಿ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಛಲವಾದ ಗುರುಪೀಠದ ಶ್ರೀ ಬಸವ ನಾಗಿದೇವ ಸ್ವಾಮೀಜಿ, ಜಿಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಪಟೇಲ್ ಶಿವಕುಮಾ‌ರ್,ಕಲ್ಲೇಶಯ್ಯ, ಕೆ.ಎಂ.ವೀರೇಶ್, ಕರವೇ ರಮೇಶ್, ರುದ್ರೇಶ್, ಮರುಳಾರಾಧ್ಯ ನಾಗರಾಜ್‌, ಸಂಗಂ.ಶಂಕರ್, ನಗರಸಭೆ ಸದಸ್ಯ ಸುರೇಶ್, ಷಡಕ್ಷರಯ್ಯ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಇದ್ದರು.

Tags:    

Similar News