ಸಂಪುಟ ವಿಸ್ತರಣೆ ವೇಳೆ ಎಸ್‌ಟಿ ಸಮುದಾಯದ ಶಾಸಕರಿಗೆ ಆದ್ಯತೆ, ಸಿಎಂ ಆಪ್ತರಿಗೆ ಮತ್ತೆ ಮಂತ್ರಿಗಿರಿ?

ಖಾಲಿ ಇರುವ ಎರಡು ಸಚಿವ ಸ್ಥಾನಕ್ಕೆ ನಾಯಕ ಸಮುದಾಯದ ಶಾಸಕರನ್ನೇ ಪರಿಗಣಿಸಬೇಕು ಎಂದು ಇತ್ತೀಚೆಗೆ ಸಚಿವ ಸತೀಶ್‌ ಜಾರಕಿಹೊಳಿ ಸೇರಿದಂತೆ ಸಮುದಾಯದ ಶಾಸಕರು ಒತ್ತಾಯಿಸಿದ್ದರು.

Update: 2025-10-07 08:28 GMT

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.

Click the Play button to listen to article

ರಾಜ್ಯ ಸಚಿವ ಸಂಪುಟ ಪುನರ್‌ ರಚನೆಯಾಗುವ ಸಂದರ್ಭದಲ್ಲಿ ನಾಯಕ ಸಮುದಾಯದ ಶಾಸಕರನ್ನು ಪರಿಗಣಿಸಲಾಗುವುದು ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ, ಬಿ. ನಾಗೇಂದ್ರ ಹಾಗೂ ಕೆ. ಎನ್‌ ರಾಜಣ್ಣನವರನ್ನು ಸಂಪುಟಕ್ಕೆ ಕರೆತರುವ ಸಂದೇಶವನ್ನು ರವಾನಿಸಿದ್ದಾರೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. 

ಮಂಗಳವಾರ ಬೆಂಗಳೂರಿನ  ಶ್ರೀ ಮಹರ್ಷಿ ವಾಲ್ಮೀಕಿ ತಪೋವನದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಪುನರ್ ರಚನೆ ವೇಳೆ ಸಮುದಾಯದ ನಾಯಕರನ್ನು ಪರಿಗಣಿಸಲಾಗುವುದು ಎಂದರು.

ವಾಲ್ಮೀಕಿ ನಿಗಮ ಮಂಡಳಿ ಹಗರಣದಲ್ಲಿ ರಾಜೀನಾಮೆ ನೀಡಿ ಇದೀಗ ಕ್ಲೀನ್‌ಚೀಟ್‌ ಪಡೆದಿರುವ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಹಾಗೂ ಹೈಕಮಾಂಡ್‌ ವಿರುದ್ದ ಮಾತನಾಡಿ ಸಂಪುಟದಿಂದ ವಜಾಗೊಂಡಿದ್ದ ಸಿಎಂ ಆಪ್ತ ಮಧುಗಿರಿ ಶಾಸಕ ಕೆ.ಎನ್‌. ರಾಜಣ್ಣನವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಖಾಲಿ ಇರುವ ಎರಡು ಸಚಿವ ಸ್ಥಾನಕ್ಕೆ ನಾಯಕ ಸಮುದಾಯದ ಶಾಸಕರನ್ನೇ ಪರಿಗಣಿಸಬೇಕು ಎಂದು ಇತ್ತೀಚೆಗೆ ಸಚಿವ ಸತೀಶ್‌ ಜಾರಕಿಹೊಳಿ ಸೇರಿದಂತೆ ಸಮುದಾಯದ ಶಾಸಕರು ಒತ್ತಾಯಿಸಿದ್ದರು.

ಮಹರ್ಷಿ ವಾಲ್ಮೀಕಿ ದೇಶ ಕಂಡ ಅಪರೂಪದ ಸಾಹಿತಿ

ರಾಮಾಯಣದಂತಹ ಮಹಾನ್ ಗ್ರಂಥವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರು ದೇಶ ಕಂಡ ಅಪರೂಪದ ಸಾಹಿತಿ. ವಾಲ್ಮೀಕಿ ಜಯಂತೋತ್ಸವದ ಮೂಲಕ ಅವರನ್ನುಸ್ಮರಿಸಲಾಗಿದೆ. ಶೂದ್ರ ಜನಾಂಗದಲ್ಲಿ ಜನಿಸಿದ್ದರೂ, ಶ್ರೇಷ್ಠ ಗ್ರಂಥವನ್ನು ವಿಶ್ವಕ್ಕೆ ಪರಿಚಯಿಸಿದರು. ಅವರ ಪ್ರತಿಮೆಯನ್ನು 2017 ರಲ್ಲಿ ಸ್ಥಾಪಿಸಲಾಯಿತು. ವಾಲ್ಮೀಕಿ ಹಾಗೂ ಕನಕದಾಸರಂತಹ ಮಹಾನ್ ಸಂತರು ಸಮಾಜಮುಖಿಯಾಗಿ ಬದುಕಿದವರು. ಅವರು ಬೋಧಿಸಿದಂತೆ ಮಾನವೀಯ ಮೌಲ್ಯಗಳನ್ನು ಅನುಸರಿದವರು ಎಂದರು.

ಮನುವಾದಿಗಳ ಕೈವಾಡ

ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಬಿ.ಆರ್‌. ಗವಾಯಿ ಅವರ ಮೇಲೆ ಶೂ ಎಸೆದಿರುವ ಪ್ರಕರಣದಲ್ಲಿ ಅವರೇ ಈ ಘಟನೆಯನ್ನು ಕ್ಷಮಿಸಿರುವುದು ಅವರ ದೊಡ್ಡಗುಣವನ್ನು ಬಿಂಬಿಸುತ್ತದೆ. ಆದರೆ ಇಂತಹ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಇದು ಮನುವಾದಿಗಳ ಕೈವಾಡವಾಗಿದೆ ಎಂದರು.

ಸಮೀಕ್ಷೆ ಅವಧಿ ವಿಸ್ತರಣೆ, ಪರಿಶೀಲಿಸಿ ತೀರ್ಮಾನ

ರಾಜ್ಯದಲ್ಲಿ ನಡೆಯುತ್ತಿರುವ ಸಮೀಕ್ಷೆಗೆ ಕಾಲಾವಕಾಶ ವಿಸ್ತರಣೆ ಬಗ್ಗೆ ಇಂದು ಪರಿಶೀಲನೆ ನಡೆಸಲಾಗುವುದು. ನಂತರ ಸಮೀಕ್ಷೆ ಅವಧಿ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಜಿಬಿಎ ವ್ಯಾಪ್ತಿಯಲ್ಲಿ ಮುಂದೂಡುವ ಸಾಧ್ಯತೆ 

ಸೆಪ್ಟೆಂಬರ್ 22ರಂದು ಆರಂಭವಾದ ಈ ಸಮೀಕ್ಷೆಯು ರಾಜ್ಯದ ಬಹುತೇಕ ಕಡೆಗಳಲ್ಲಿ ಅಂತಿಮ ಹಂತ ತಲುಪಿದೆ. ಬೆಂಗಳೂರು ಹೊರತುಪಡಿಸಿ, ಉಳಿದ ಜಿಲ್ಲೆಗಳಲ್ಲಿ ಶೇ. 90ರಷ್ಟು ಸಮೀಕ್ಷಾ ಕಾರ್ಯವು ಭಾನುವಾರಕ್ಕೇ(ಅ.5) ಪೂರ್ಣಗೊಂಡಿದೆ. ಕೆಲವು ತಾಲೂಕುಗಳಲ್ಲಿ ಈಗಾಗಲೇ ಸಮೀಕ್ಷೆ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಆದರೆ, ರಾಜಧಾನಿ ಬೆಂಗಳೂರಿನಲ್ಲಿ ಸಮೀಕ್ಷೆಯು ತಡವಾಗಿ ಆರಂಭವಾಗಿದ್ದರಿಂದ, ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಇನ್ನೂ ಕನಿಷ್ಠ 15 ದಿನಗಳ ಕಾಲ ಸಮೀಕ್ಷೆ ಮುಂದುವರಿಯುವ ಸಾಧ್ಯತೆ ಇದೆ.

Tags:    

Similar News