ವೈದ್ಯರ ನಿರ್ಲಕ್ಷ್ಯ ಆರೋಪ: ಗರ್ಭಿಣಿ ಸಾವು, ಆಸ್ಪತ್ರೆ ಮುಂದೆ ಕುಟುಂಬಸ್ಥರ ಪ್ರತಿಭಟನೆ

ಬುಧವಾರ (ಆಗಸ್ಟ್ 6, 2025) ಸುಷ್ಮಿತಾ ಅವರು ಹೆರಿಗೆಗಾಗಿ ಆಸ್ಪತ್ರೆಗೆ ಬಂದ ಕೂಡಲೇ ಮೃತಪಟ್ಟಿದ್ದು, ಆಕೆಯ ಸಾವಿರಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.;

Update: 2025-08-06 05:50 GMT
ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ಮೃತಪಟ್ಟಿದ್ದು, ಪೋಷಕರು ಪ್ರತಿಭಟನೆ ನಡೆಸಿದರು.

ಸರ್ಕಾರಿ ತಾಯಿ-ಮಗು ಆಸ್ಪತ್ರೆಗೆ ಹೆರಿಗೆಗಾಗಿ ಬಂದ ಗರ್ಭಿಣಿ ದಿಢೀರ್‌ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ತಾಲೂಕಿನ ಸಿಂಗೇನಹಳ್ಳಿ ನಿವಾಸಿ ಸುಷ್ಮಿತಾ (23) ಮೃತಪಟ್ಟ ಗರ್ಭಿಣಿ. ಗರ್ಭಿಣಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

ಸುಷ್ಮಾ ಅವರನ್ನು ಮಂಗಳವಾರ ಅಧಿಕ ರಕ್ತದೊತ್ತಡದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿತ್ತು. ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡಿ ಬುಧವಾರ ಹೆರಿಗೆಗೆ ಬರುವಂತೆ ವೈದ್ಯರು ಹಾಗೂ ಶೂಶ್ರೂಷಕರು ಹೇಳಿ ಕಳುಹಿಸಿದ್ದರು. ಆದರೆ, ಇಂದು ನೋವು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ಬರುತ್ತಿದ್ದಂತೆ ಗರ್ಭಿಣಿ ಮತ್ತು ಮಗು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಗರ್ಭಿಣಿ ಹಾಗೂ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.

ಕುಟುಂಬಸ್ಥರ ಆರೋಪಕ್ಕೆ ಪ್ರತಿಕ್ರಿಯಿಸಿದರುವ ವೈದ್ಯರು, ಗರ್ಭಿಣಿಯು ಆಸ್ಪತ್ರೆಗೆ ಬರುವ ಮುಂಚೆಯೇ ಮೃತಪಟ್ಟಿದ್ದರು ಎಂದಿದ್ದಾರೆ. ಆದರೆ, ಇದನ್ನೊಪ್ಪದ ಕುಟುಂಬಸ್ಥರು, ಮಂಗಳವಾರ ಆಸ್ಪತ್ರೆಗೆ ಬಂದಾಗ ವೈದ್ಯರು ಇರಲಿಲ್ಲ, ಶುಶ್ರೂಷಕರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಇದರಿಂದ ಗರ್ಭಿಣಿ ಸುಷ್ಮಾ ಹಾಗೂ ಮಗು ಇಬ್ಬರೂ ಮೃತಪಟ್ಟಿದ್ದಾರೆ. ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಘಟನೆ ಕುರಿತಂತೆ ತನಿಖೆ ನಡೆಸುವುದಾಗಿ ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು  ಭರವಸೆ ನೀಡಿದರು.

ಗರ್ಭಿಣಿ ಕುಟುಂಬದವರ ಆಕ್ರಂಧನ, ಪ್ರತಿಭಟನೆ ವಿಡಿಯೋ ವೀಕ್ಷಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ..

https://youtube.com/shorts/_N69I1d6d1k?si=Keb9GUH3Qw6NiX-j

Tags:    

Similar News