ಪ್ರವೀಣ್ ನೆಟ್ಟಾರು ಹತ್ಯೆ| ಕತಾರ್‌ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಎನ್‌ಐಎ ಬಲೆಗೆ

ಶುಕ್ರವಾರ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕತಾರ್‌ನಿಂದ ಆಗಮಿಸಿದ ಆರೋಪಿ ಅಬ್ದುಲ್ ರೆಹಮಾನ್ ನನ್ನು ಎನ್‌ಐಎ ತಂಡ ವಶಕ್ಕೆ ತೆಗೆದುಕೊಂಡಿದೆ.;

Update: 2025-07-05 04:48 GMT

ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ಗಲ್ಪ್‌ ರಾಷ್ಟ್ರ ಕತಾರ್‌ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಶುಕ್ರವಾರ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಬಂಧಿಸಿದೆ.

ಶುಕ್ರವಾರ ಕೇರಳದ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕತಾರ್‌ನಿಂದ ಆಗಮಿಸಿದ ಆರೋಪಿ ಅಬ್ದುಲ್ ರೆಹಮಾನ್ ನನ್ನು ಎನ್‌ಐಎ ತಂಡ ವಶಕ್ಕೆ ತೆಗೆದುಕೊಂಡಿದೆ.

ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಎನ್‌ಐಎ 21 ಆರೋಪಿಗಳನ್ನು ಬಂಧಿಸಿದ್ದು, ಇದೀಗ ಇನ್ನೋರ್ವ ಪ್ರಮುಖ ಆರೋಪಿ ಅಬ್ದುಲ್ ರೇಹಮಾನ್ ಬಂಧಿಸಿದೆ.‌ ಬಂಧಿತ ಆರೋಪಿ ಅಬ್ದುಲ್ ರೆಹಮಾನ್ ಪಿಎಫ್‌ಐ ನಾಯಕರ ನಿರ್ದೇಶನದ ಮೇರೆಗೆ ಪ್ರಮುಖ ದಾಳಿಕೋರರಿಗೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿದ್ದ ಇತರರಿಗೆ ಸ್ವಯಂಪ್ರೇರಣೆಯಿಂದ ಆಶ್ರಯ ನೀಡಿದ್ದಾನೆ ಎಂದು ತನಿಖೆಯಿಂದ ಬಹಿರಂಗವಾಗಿದೆ. ಈತನ ಸುಳಿವು ನೀಡಿದರೆ 4 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿತ್ತು.

ಏನಿದು ಪ್ರಕರಣ?

2022ರ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ನಡೆದಿತ್ತು. ತಮ್ಮ ಕೋಳಿ ಅಂಗಡಿ ಮುಚ್ಚಿ ತೆರಳುವ ವೇಳೆ ಪ್ರವೀಣ್ ನೆಟ್ಟಾರು ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಹತ್ಯೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ಪ್ರಕರಣ ರಾಜಕೀಕರಣಗೊಂಡು ರಾಜ್ಯಾದ್ಯಾಂತ ಸದ್ದು ಮಾಡಿತ್ತು. ಗಂಭೀರತೆ ಅರಿತ ಅಂದಿನ ಸರ್ಕಾರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಈವರೆಗೆ ಒಟ್ಟು 21ಜನರನ್ನು ಬಂಧಿಸಿದೆ. ಇದೀಗ ಬಂಧಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. 

Tags:    

Similar News