Praveen Nettaru| ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ; 21ನೇ ಆರೋಪಿಯ ಬಂಧನ

Praveen Nettaru| ಕೇಸ್​​ಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 21ನೇ ಆರೋಪಿ ಈತನಾಗಿದ್ದು, ಈತ ಮುಸ್ತಫಾ ಪೈಚಾರ್​ಗೆ ಆಶ್ರಯ ನೀಡಿದ್ದ ಎನ್ನಲಾಗಿದೆ.;

Update: 2025-01-22 07:01 GMT
ಪ್ರವೀಣ್‌ ನೆಟ್ಟಾರು

ಹಿಂದೂಪರ ಸಂಘಟನೆ ಕಾರ್ಯಕರ್ತ ಹಾಗೂ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ನಿಷೇಧಿತ ಸಂಘಟನೆ ಪಿಎಫ್ಐ ಸದಸ್ಯನಾಗಿದ್ದ ಅತೀಕ್ ಅಹ್ಮದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ಕೊಲೆ ಕೇಸ್​​ಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ 21ನೇ ಆರೋಪಿ ಈತನಾಗಿದ್ದು, ಮುಸ್ತಫಾ ಪೈಚಾರ್​ಗೆ ಆಶ್ರಯ ನೀಡಿದ್ದ. 

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಸದಸ್ಯನಾಗಿದ್ದ ಅತೀಕ್. ಪ್ರವೀಣನ ಕೊಲೆ ಬಳಿಕ ಆರೋಪಿ ಮುಸ್ತಫಾನಿಗೆ ಆಶ್ರಯ ನೀಡಿ ಸಹಾಯ ಮಾಡಿದ್ದ. ಮುಸ್ತಫಾನನ್ನು ಚೆನ್ನೈಗೆ ಕಳಿಸಿ ಪರಾರಿಯಾಗಲು ನೆರವು ನೀಡಿದ್ದ. ಹೀಗಾಗಿ, ಆತನನ್ನು ಬಂಧಿಸಲಾಗಿದೆ ಎಂದು ಎನ್​ಐಎ  ಪ್ರಕಟಣೆಯಲ್ಲಿ ತಿಳಿಸಿದೆ. 

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ 6 ಆರೋಪಿಗಳು ನಾಪತ್ತೆಯಾಗಿದ್ದು, ಆ 6 ಆರೋಪಿಗಳ ಪತ್ತೆಗಾಗಿ ಎನ್ಐಎ ತಂಡ ಶೋಧ ನಡೆಸುತ್ತಿದೆ.  ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ ಘೋಷಣೆ ಮಾಡುವುದಾಗಿ ತಿಳಿಸಲಾಗಿದೆ.

ಏನಿದು ಪ್ರಕರಣ?

2022ರ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ನಡೆದಿತ್ತು. ತಮ್ಮ ಕೋಳಿ ಅಂಗಡಿ ಮುಚ್ಚಿ ತೆರಳುವ ವೇಳೆ ಪ್ರವೀಣ್ ನೆಟ್ಟಾರು ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಹತ್ಯೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ಪ್ರಕರಣ ರಾಜಕೀಕರಣಗೊಂಡು ರಾಜ್ಯಾದ್ಯಾಂತ ದೊಡ್ಡಪಟ್ಟದ ಸದ್ದು ಮಾಡಿತ್ತು.  ಗಂಭೀರತೆ ಅರಿತ ಅಂದಿನ ಸರ್ಕಾರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಈವರೆಗೆ ಒಟ್ಟು 20ಜನರನ್ನು ಬಂಧಿಸಿದೆ. ಇದೀಗ ಬಂಧಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. 

Tags:    

Similar News